ನವದೆಹಲಿ: ಮೈತೇಯಿ ಮತ್ತು ಬುಡಕಟ್ಟು ಜನಾಂಗದ ನಡುವೆ ಉಂಟಾದ ಹಿಂಸಾಚಾರದಿಂದ ನಲುಗಿ ಹೋಗಿರುವ ಮಣಿಪುರದಲ್ಲಿ ನೂರಾರು ಜನರು ವಿಮಾನದ ಮೂಲಕ ತೆರಳುತ್ತಿದ್ದು, ಇದರ ಪರಿಣಾಮ ವಿಮಾನ ಪ್ರಯಾಣದ ದರ ದಿಢೀರನೆ ದುಪ್ಪಟ್ಟಾಗಿರುವುದು ಪ್ರಯಾಣಿಕರಿಗೆ ಸಂಕಷ್ಟ ತಂದೊಡ್ಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:German Motorway bridge: ಕ್ಷಣಾರ್ಧದಲ್ಲಿ 450ಮೀ ಉದ್ದದ ಜರ್ಮನ್ ಸೇತುವೆ ನೆಲಸಮ: ವಿಡಿಯೋ..
ಸಾಮಾನ್ಯವಾಗಿ ಇಂಫಾಲ್ ದಿಂದ ಕೋಲ್ಕತಾ ನಡುವಿನ ವಿಮಾನ ಪ್ರಯಾಣದ ದರ ಒಬ್ಬರಿಗೆ 2,500ರಿಂದ 5,000 ರೂಪಾಯಿ. ಅದೇ ರೀತಿ ಇಂಫಾಲ್ ದಿಂದ ಗುವಾಹಟಿಗೆ ಇರುವ ಪ್ರಯಾಣ ದರ ಕೂಡಾ 2,500ರಿಂದ 5,000 ರೂ.
ಇಂಫಾಲ್ ದಿಂದ ಕೋಲ್ಕತಾ ನಡುವಿನ ದೂರ 615 ಕಿಲೋ ಮೀಟರ್, ಇಂಫಾಲ್ ದಿಂದ ಗುವಾಹಟಿಗೆ ಇರುವ ದೂರ 269 ಕಿಲೋ ಮೀಟರ್. ಏತನ್ಮಧ್ಯೆ ಮೇ 3ರಿಂದ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ತಲೆದೋರಿದ್ದು, ವಿಮಾನ ಪ್ರಯಾಣ ದರ ಗಗನಕ್ಕೇರಿರುವುದಾಗಿ ವರದಿ ವಿವರಿಸಿದೆ.
ಇದೀಗ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದರಿಂದ ಇಂಫಾಲ್ ನಿಂದ ಕೋಲ್ಕತಾಕ್ಕೆ ತೆರಳಲು ಬರೋಬ್ಬರಿ 25,000 ಸಾವಿರ ರೂಪಾಯಿ ದರ ನಿಗದಿಪಡಿಸಲಾಗಿದೆ. ಇಂಫಾಲ್ ನಿಂದ ಗುವಾಹಟಿಗೆ 15,000 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ ಎಂದು ವರದಿ ಹೇಳಿದೆ.
ಹಿಂಸಾ ಪೀಡಿತ ಮಣಿಪುರದಿಂದ ಜನರು ಬೇರೆಡೆ ತೆರಳುತ್ತಿರುವ ನಿಟ್ಟಿನಲ್ಲಿ ಇಂಫಾಲ್ ದಿಂದ ಕೋಲ್ಕತಾಕ್ಕೆ ಹೆಚ್ಚುವರಿ ವಿಮಾನಗಳು ಕಾರ್ಯಾಚರಿಸುತ್ತಿರುವುದಾಗಿ ವರದಿ ತಿಳಿಸಿದೆ.
ಪರಿಸ್ಥಿತಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಣಿಪುರದಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಸೋಮವಾರ ಇಂಫಾಲ್ ನಲ್ಲಿ ಬೆಳಗ್ಗೆ 5ಗಂಟೆಯಿಂದ 8ಗಂಟೆವರೆಗೆ ಕರ್ಫ್ಯೂ ಸಡಿಲಿಕೆ ಮಾಡುವ ಮೂಲಕ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲಾಗಿತ್ತು.