Advertisement
ಹೌದು ಸಮೀಪದ ಮಾರಾಪೂರ ಗ್ರಾಮದ ಉದಯೋನ್ಮುಖ ಸೈಕ್ಲಿಂಗ್ ಕ್ರೀಡಾಪಟು ಹೊನ್ನಪ್ಪ ಚಿದಾನಂದ ಧರ್ಮಟ್ಟಿ ಅವರು ಇತ್ತಿಚಿಗೆ ಮೈಸೂರಿನಲ್ಲಿ ನಡೆದ 13ನೇ ರಾಜ್ಯ ಸೈಕ್ಲಿಂಗ್ ಚಾಂಪಿಯನ್‍ಷಿಪ್‍ನಲ್ಲಿ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡು ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಬರುವ ಡಿಸೆಂಬರ್ ತಿಂಗಳಲ್ಲಿ ಪುಣೆ ಅಥವಾ ಮುಂಬೈನಲ್ಲಿ ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆಗಳು ನಡೆಯಲಿವೆ.
Related Articles
Advertisement
8ನೇ ತರಗತಿಯಲ್ಲಿ ಓದುತ್ತಾ ಕಳೆದ ಮೂರು ತಿಂಗಳಿನಿಂದ ಚಂದರಗಿ ಕ್ರೀಡಾವಸತಿ ಶಾಲೆಯ ಸೈಕ್ಲಿಂಗ್ ಕೋಚ್ ಭೀಮಶಿ ವಿಜಯನಗರ ಅವರ ಮಾರ್ಗದರ್ಶನದಲ್ಲಿ ದಿನನಿತ್ಯ ಮುಂಜಾನೆ-ಸಂಜೆ ಸೇರಿ ನಿತ್ಯ 4 ಗಂಟೆಗಳ ಕಠಿಣ ಅಭ್ಯಾಸದ ಫಲವಾಗಿ ಇಂದು ರಾಜ್ಯಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನಗಳಿಸಿ ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾನೆ. ಈ ಕ್ರೀಡಾಸಾಧನೆಗೆ ಕೇವಲ ಮೂರು ತಿಂಗಳ ಅವಿರತ ಪರಿಶ್ರಮ ಮತ್ತು ಹೊನ್ನಪ್ಪನಲ್ಲಿರುವ ಕ್ರೀಡಾಸಕ್ತಿಯೇ ಕಾರಣ ಎಂಬುವದು ವಿಶೇಷ.
ಹೊನ್ನಪ್ಪನಿಗೆ ಉತ್ತಮ ಭವಿಷ್ಯವಿದೆ: ಹೊನ್ನಪ್ಪ ಕಳೆದ ಮೂರು ವರ್ಷಗಳಿಂದ ನಮ್ಮ ಶಾಲೆಯ ವಿದ್ಯಾರ್ಥಿ. ಕಳೆದ ಮೂರು ತಿಂಗಳಿನಿಂದ ಸೈಕ್ಲಿಂಗ್ ಕ್ರೀಡೆಯಲ್ಲಿ ಆತ ತೊಡಗಿಸುಕೊಂಡಿರುವ ಆಸಕ್ತಿ, ಸಾಧಿಸಬೇಕೆಂಬ ಛಲ, ಕಠಿಣ ಪರಿಶ್ರಮ, ನಿರಂತರ ಅಭ್ಯಾಸ, ಶಾಲೆ ಮತ್ತು ಇವರ ತಂದೆಯವರ ಪ್ರೋತ್ಸಾಹ-ಸಹಕಾರದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ತರಬೇತಿ ಪಡೆದ ಕ್ರೀಡಾಪಟುಗಳೊಂದಿಗೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ, ಇಂದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಉತ್ತಮ ಭವಿಷ್ಯವಿರುವ ಹೊನ್ನಪ್ಪ 12 ತರಗತಿ ಮುಗಿಯುವರೆಗೆ ನಮ್ಮ ಶಾಲೆಯಲ್ಲಿಯೇ ಇರುವದರಿಂದ, ಪಿಯುಸಿ ಮುಗಿಯುವದರೊಳಗೆ ಇಂಡಿಯಾ ಬೆಸ್ಟ್ ಸೈಕ್ಲಿಂಗ್ ರೈಡರ್ ಆಗುತ್ತಾನೆ ಎಂಬ ವಿಶ್ವಾಸವಿದೆ. -ಭೀಮಶಿ ವಿಜಯನಗರ, ಸೈಕ್ಲಿಂಗ್ ತರಬೇತಿದಾರರು, ಕ್ರೀಡಾ ವಸತಿ ಶಾಲೆ, ಕೆ.ಚಂದರಗಿ.
ಮಗನ ಕ್ರೀಡಾಸಕ್ತಿಗೆ ಪ್ರೋತ್ಸಾಹ ನಮ್ಮ ಕರ್ತವ್ಯ: ಮೊದಲ ಗಂಡು ಮಗನಾದ ಹೊನ್ನಪ್ಪ ಸೈಕ್ಲಿಂಗ್ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಅವರ ಅಭಿರುಚಿ, ಕ್ರೀಡಾಸಕ್ತಿಗೆ ಪೋಷಕರಾಗಿ ಬೆಂಬಲಿಸುತ್ತಿದ್ದೇವೆ. ಇಂದು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು ನಮಗೆ ಮತ್ತು ನಮ್ಮ ಗ್ರಾಮಕ್ಕೆ ಹೆಮ್ಮೆಯ ಸಂಗತಿ. ಭವಿಷ್ಯದ ಅವನ ಕ್ರೀಡಾ ಜೀವನಕ್ಕೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡಲು, ಪಾಲಕರಾಗಿ ನಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ. – ಶಾಂತಾ ಮತ್ತು ಚಿದಾನಂದ ಧರ್ಮಟ್ಟಿ, ಹೊನ್ನಪ್ಪನ ಹೆತ್ತವರು
–ಚಂದ್ರಶೇಖರ ಮೋರೆ