Advertisement

ಪ್ರೊ ಕಬಡ್ಡಿಯಲ್ಲಿ ಮಿಂಚಲಿದ್ದಾರೆ ಕಡಬದ ತಾರೆ

06:42 PM Apr 13, 2020 | Karthik A |

ಕಡಬ: ಮುಂಬರುವ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಬೆಂಗಾಲ್‌ ವಾರಿಯರ್ ತಂಡದ ಪರ ಆಡಲು ಕಡಬ ತಾಲೂಕಿನ ಐತ್ತೂರು ಗ್ರಾಮದ ಕಲ್ಲಾಜೆ ನಿವಾಸಿ ಮಿಥಿನ್‌ಕುಮಾರ್‌ ಗೌಡ ಆಯ್ಕೆಯಾಗುವ ಮೂಲಕ ಜಿಲ್ಲೆಯ ಮತ್ತೋರ್ವ ತಾರೆ ಕಬಡ್ಡಿ ಕ್ಷೇತ್ರದಲ್ಲಿ ಮಿಂಚಲಿದ್ದಾರೆ. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಲ್ಲಿ ಉದ್ಯೋಗಿಯಾಗಿರುವ ಕಲ್ಲಾಜೆಯ ಅಣ್ಣಯ್ಯ ಗೌಡ ಮತ್ತು ಪ್ರೇಮಾ ದಂಪತಿಯ ಪುತ್ರ ಮಿಥಿನ್‌ಕುಮಾರ್‌ ಗೌಡ ಉಜಿರೆಯ ಎಸ್‌ಡಿಎಂ ಕಾಲೇಜಿನ ಪದವಿ ವಿದ್ಯಾರ್ಥಿ.

Advertisement

ಇವರು ಪ್ರೊ ಕಬಡ್ಡಿ 2018ರಲ್ಲಿ ಜೂನಿಯರ್‌ ರಾಷ್ಟ್ರೀಯ ಆಟಗಾರರಾಗಿ ಆಡಲಿದ್ದಾರೆ. ಮುಂಬೈಯಲ್ಲಿ ಜರಗಿದ ಹರಾಜಿನಲ್ಲಿ 6.6 ಲಕ್ಷ ರೂ. ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಹರಾಜಿನಲ್ಲಿದ್ದ ಒಟ್ಟು 422 ಆಟಗಾರರ ಪೈಕಿ 25 ವಿದೇಶಿಗರು, 17 ಯುವ ಪ್ರತಿಭೆಗಳು ಸಹಿತ ಒಟ್ಟು 219 ಆಟಗಾರರು ವಿವಿಧ ತಂಡಗಳ ಪಾಲಾದರು. ಈ ಪೈಕಿ 11 ತಂಡಗಳಿಗೆ ಹರಾಜಾದ ಕರ್ನಾಟಕದ 11 ಆಟಗಾರರ ಪೈಕಿ ಮಿಥಿನ್‌ ಕೂಡ ಒಬ್ಬರು.

ಪ್ರತಿಭಾವಂತ ಕಬಡ್ಡಿ ಪಟು


ಮರ್ದಾಳದ ಸೈಂಟ್‌ ಮೇರಿಸ್‌ ಪ್ರೌಢ ಶಾಲೆಯಲ್ಲಿ ಓದುತ್ತಿರುವಾಗಲೇ ಅಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ದಿನೇಶ್‌ ನೆಟ್ಟಣ ಅವರ ಗರಡಿಯಲ್ಲಿ ಪಳಗಿದರು. ಅತ್ಯುತ್ತಮ ಕಬಡ್ಡಿ ಪಟುವಾಗಿ ಗಮನ ಸೆಳೆದಿದ್ದ ಮಿಥಿನ್‌ ಕುಮಾರ್‌, ಎಸೆಸೆಲ್ಸಿಯಲ್ಲಿದ್ದಾಗ ಜಾರ್ಖಂಡ್‌ನ‌ಲ್ಲಿ ಜರಗಿದ ರಾಷ್ಟ್ರೀಯ ಸಬ್‌ ಜೂನಿಯರ್ ಕಬಡ್ಡಿ ಟೂರ್ನಮೆಂಟ್‌ ನಲ್ಲಿ ಭಾಗವಹಿಸಿದ್ದರು. ಬಳಿಕ ಕ್ರೀಡಾ ಕೋಟಾದಲ್ಲಿ ಉಜಿರೆಯ ಎಸ್‌.ಡಿ.ಎಂ. ಕಾಲೇಜಿಗೆ ಉಚಿತ ಶಿಕ್ಷಣ ಯೋಜನೆಯಡಿ ಸೇರ್ಪಡೆಗೊಂಡ ಮಿಥಿನ್‌ಕುಮಾರ್‌, ಒಡಿಶಾದಲ್ಲಿ ಜರಗಿದ ಜೂನಿಯರ್‌ ನ್ಯಾಶನಲ್‌ ಕಬಡ್ಡಿ ಟೂರ್ನಮೆಂಟ್‌ ನಲ್ಲಿ ಆಡಿದ್ದಾರೆ. ಕೋಚ್‌ ಕೃಷ್ಣಾನಂದ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ರಮೇಶ್‌ ಮತ್ತು ಸಂದೇಶ್‌ ಪೂಂಜ ಅವರ ನಿರಂತರ ತರಬೇತಿಯ ಮೂಲಕ ಕಬಡ್ಡಿ ಆಟದ ಎಲ್ಲ ಕೌಶಲಗಳನ್ನು ಮೈಗೂಡಿಸಿಕೊಂಡ ಮಿಥಿನ್‌ಕುಮಾರ್‌, ಎಚ್‌.ಎಂ.ಟಿ., ಪೊಲೀಸ್‌, ಯೂನಿವರ್ಸಿಟಿ ಸಹಿತ ಹಲವು ತಂಡಗಳಲ್ಲಿ ಆಟಗಾರರಾಗಿ ಗಮನ ಸೆಳೆದಿದ್ದರು.

ಅತ್ಯಮೂಲ್ಯ ಕ್ಷಣ
ಪ್ರೊ ಕಬಡ್ಡಿ ಟೂರ್ನಿಗೆ ಆಯ್ಕೆಯಾಗಿರುವುದು ನನ್ನ ಜೀವನದ ಅತ್ಯಮೂಲ್ಯ ಕ್ಷಣ. ಜೂನಿಯರ್‌ ಇಂಡಿಯಾ ಕಬಡ್ಡಿ ತಂಡದಲ್ಲಿ ಆಡಬೇಕೆಂಬುದು ನನ್ನ ಆಸೆ. ನನ್ನ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ದಿನೇಶ್‌ ನೆಟ್ಟಣ ಅವರ ಆರಂಭಿಕ ತರಬೇತಿ ನನ್ನನ್ನು ಈ ಮಟ್ಟಕ್ಕೆ ತಲುಪಿಸಿದೆ. ಎಸ್‌.ಡಿ.ಎಂ. ಕಾಲೇಜು ನನ್ನ ಕ್ರೀಡಾ ಸಾಧನೆಗೆ ಹೊಸ ತಿರುವು ನೀಡಿದೆ. ನನ್ನ ಸಾಧನೆಯ ಹಿಂದೆ ಅಲ್ಲಿನ ಕೋಚ್‌ ಕೃಷ್ಣಾನಂದ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ರಮೇಶ್‌ ಮತ್ತು ಸಂದೇಶ್‌ ಪೂಂಜ ಅವರ ಅಪಾರ ಶ್ರಮ ಇದೆ.
– ಮಿಥಿನ್‌ಕುಮಾರ್‌ ಗೌಡ

— ನಾಗರಾಜ್‌ ಎನ್‌. ಕೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next