Advertisement
ಜಿಲ್ಲಾ ಕೇಂದ್ರದಿಂದ 90 ಕಿ.ಮೀ. ದೂರದ ಎಚ್. ಡಿ. ಕೋಟೆ ತಾಲೂಕಿನ ಮಾನಿಮೂಲೆ ಹಾಡಿ ಇದಕ್ಕೆ ಸ್ಪಷ್ಟ ಉದಾಹರಣೆ. 226ಕ್ಕೂ ಹೆಚ್ಚು ಹಾಡಿಗರು ವಾಸಿಸುವ ಈ ಪ್ರದೇಶದಲ್ಲಿ 40ಕ್ಕೂ ಹೆಚ್ಚು ಶಾಲಾ-ಕಾಲೇಜು ವಿದ್ಯಾರ್ಥಿಗಳಿದ್ದಾರೆ. ಆದರೆ, ತಮ್ಮ ಹಾಡಿಯಲ್ಲಿ ಸೂಕ್ತ ವಿದ್ಯುತ್ ದೀಪ, ಸೌರಶಕ್ತಿ ದೂರದರ್ಶನ ವೀಕ್ಷಿಸುವ ಸೌಲಭ್ಯವಿಲ್ಲದೇ ಆನ್‌ಲೈನ್ ಶಿಕ್ಷಣ, ವಿದ್ಯಾಗಮ, ದೂರದರ್ಶನ ಪಾಠ ಪ್ರವಚನ ಇಲ್ಲಿನ ಮಕ್ಕಳಿಗೆ ಗಗನ ಕುಸುಮವಾಗಿದೆ.
Related Articles
Advertisement
ನಿತ್ಯ ಕೂಲಿಯನ್ನೇ ಅವಲಂಬಿಸಿರುವ ನಾವು ಬೆಳಗ್ಗೆ ಎದ್ದು ಕೆಲಸಕ್ಕೆ ತೆರಳಿದರೆ ಬರುವುದು ಸಂಜೆಯಾಗುತ್ತದೆ. ಮಕ್ಕಳು ಹಾಡಿಯಲ್ಲೇ ಇರುತ್ತವೆ. ಇವರಿಗೆ ಓದಿಸಲು ನಮ್ಮಲ್ಲಿ ಯಾರೂ ಇಲ್ಲ. ರಾತ್ರಿ ವೇಳೆ ಕಲಿಸಲು ನಮಗೆ ಅಕ್ಷರ ಜ್ಞಾನವೂ ಇಲ್ಲ. ನಮ್ಮಲ್ಲಿ ದೊಡ್ಡ ಮೊಬೈಲ್ ಇಲ್ಲ. ಇದ್ದರೂ ನೆಟ್‌ವರ್ಕ್ ಸಮಸ್ಯೆ. ಶಾಲೆ ಆರಂಭವಾದಾಗ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ ಎಂಬುದು ಮಾಣಿಮೂಲೆ ಹಾಡಿಯ ಮಂಜುಳಮ್ಮನ ಮಾತು.
ದೂರದರ್ಶನ ವೀಕ್ಷಿಸಲು ಟೀವಿ ಇಲ್ಲ: ಎಚ್ .ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ, ಎನ್. ಬೆಳತ್ತೂರು ಗ್ರಾಪಂನಲ್ಲಿ 15 ಹಾಡಿಗಳು ಕಾಡಿನೊಳಗಿದ್ದು, ಇಲ್ಲಿನ ಯಾವುದೇ ಮೂಲ ಸೌಲಭ್ಯವಿಲ್ಲದೆ ಪರದಾಡುತ್ತಿದ್ದಾರೆ. ದೂರದರ್ಶನದಲ್ಲಿ ಪಾಠ ಪ್ರವಚನ ಪ್ರಸಾರವಾಗುತ್ತಿದೆ. ಆದರೆ, ಅದನ್ನು ವೀಕ್ಷಿಸಲು ಟೀವಿಗಳಿಲ್ಲ. ಟೀವಿ ತಂದರೂ ಅದಕ್ಕೆ ವಿದ್ಯುತ್, ಕೇಬಲ್ ಸಮಸ್ಯೆ ಎಂಬುದು ಹಾಡಿಗರ ಅಳಲು.
100 ಹಾಡಿಗಳ ಸಮಸ್ಯೆ : ಆನ್‌ಲೈನ್ ಶಿಕ್ಷಣ, ವಿದ್ಯಾಗಮ ಹಾಗೂ ದೂರದರ್ಶನ ಶಿಕ್ಷಣದಿಂದ ವಂಚಿತವಾಗಿರುವುದು ಕೇವಲ ಎಚ್.ಡಿ.ಕೋಟೆ ಹಾಡಿಗಳಿಗಷ್ಟೇ ಸೀಮಿತವಾಗಿಲ್ಲ. ಪಿರಿಯಾಪಟ್ಟಣ, ಹುಣಸೂರು ತಾಲೂಕಿನಲ್ಲಿರುವ ನೂರಕ್ಕೂ ಹೆಚ್ಚು ಹಾಡಿಗಳದ್ದೂ ಇದೆ ಸಮಸ್ಯೆಯಿದೆ.
ಕೋವಿಡ್-19 ಲಾಕ್‌ಡೌನ್ ಹಿನ್ನೆಲೆ ಮಕ್ಕಳ ವಿದ್ಯಾ ಭ್ಯಾಸಕ್ಕೆ ತೊಂದರೆಯಾಗದಂತೆ ಸರ್ಕಾರ ಆನ್‌ಲೈನ್ ಶಿಕ್ಷಣ ಹಾಗೂ ದೂರ ಶಿಕ್ಷಣ ಆರಂಭಿಸಿ ತಿಂಗಳು ದಾಟಿದರೂ, ಜಿಲ್ಲೆಯ ಕಾಡಂಚಿನಲ್ಲಿ ವಾಸಿಸುತ್ತಿರುವ ಹಾಡಿಗರ ಮಕ್ಕಳಿಗೆ ಅಗತ್ಯ ವ್ಯವಸ್ಥೆ ಇಲ್ಲದೇ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸರ್ಕಾರ ಕೂಡಲೇ ಹಾಡಿ ಮಕ್ಕಳಿಗೆ ಪಾರಂಪರಿಕವಾಗಿ ಶಿಕ್ಷಣ ನೀಡಲು ವ್ಯವಸ್ಥೆ ಮಾಡಬೇಕು. – ಪ್ರಸನ್ನ, ರಾಜ್ಯ ಉಪಾಧ್ಯಕ್ಷ ಜನ ಸಂಗ್ರಾಮ ಪರಿಷತ್
ಕಾಡಂಚಿನಲ್ಲಿರುವ ಹಾಡಿ ಮಕ್ಕಳಿಗೆ ಶಿಕ್ಷಣ ಮುಟ್ಟುತ್ತಿಲ್ಲ ಎಂಬ ಬಗ್ಗೆ ತನಗೆ ತಿಳಿದಿಲ್ಲ. ಒಂದು ವೇಳೆ ಈ ಸಮಸ್ಯೆ ಇದ್ದರೆ, ತಾಲೂಕು ಅಧಿಕಾರಿಗಳನ್ನೂ ವಿಚಾರಿಸಿ ವಿದ್ಯಾಗಮ ಪದ್ಧತಿ ಮುಟ್ಟುವಂತೆ ಮಾಡಲಾಗುವುದು. ಹೆಚ್ಚನ ಮಾಹಿತಿಗೆ ತನ್ನ ಮೊ.9448999349 ಕ್ಕೆ ಸಂಪರ್ಕಿಸಿದರೆ ಸಮಸ್ಯೆ ಬಗೆಹರಿಸಲಾಗುವುದು. – ಡಾ.ಪಾಂಡುರಂಗ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಮೈಸೂರು
ಸತೀಶ್ ದೇಪುರ