Advertisement

ಉನ್ನತ ಶಿಕ್ಷಣದಿಂದ ದೂರವಾಗುವ ಭೀತಿಯಲ್ಲಿ ಗ್ರಾಮೀಣ ವಿದ್ಯಾರ್ಥಿನಿಯರು

10:09 PM Jul 29, 2019 | Team Udayavani |

ಉಡುಪಿ: ಶಿಕ್ಷಣ ಕಾಶಿ ಖ್ಯಾತಿಯ ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣದಿಂದ ವಂಚಿತರಾಗುವ ಭೀತಿ ಎದುರಾಗಿದೆ.

Advertisement

ಕುಂದಾಪುರ, ಬೈಂದೂರು, ಸಿದ್ಧಾಪುರ, ಹೆಬ್ರಿ ಸೇರಿದಂತೆ ವಿವಿಧ ಪ್ರದೇಶಗಳಿಂದ ಉಡುಪಿ ಸರಿಸುಮಾರು 30ರಿಂದ 40 ಕಿ.ಮೀ. ದೂರವಿದೆ. ಈ ಪ್ರದೇಶ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆಯಲು ಮುಂದಾಗುತ್ತಿದ್ದಾರೆ. ಅವರಲ್ಲಿ ಶೇ.90ರಷ್ಟು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರು ಸರಕಾರಿ ವಸತಿ ನಿಲಯ ನಂಬಿ ಶಿಕ್ಷಣ ಪಡೆಯಲು ಮುಂದಾಗುತ್ತಿದ್ದಾರೆ. ಆದರೆ ನಗರದಲ್ಲಿ ಬಾಲಕಿಯರ ವಸತಿ ನಿಲಯ ಕೊರತೆಯಿದ್ದು, ಎಲ್ಲರಿಗೂ ಸರಕಾರಿ ವಸತಿ ನಿಲಯಗಳಿಗೆ ಪ್ರವೇಶ ಸಿಗದೆ ಇರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣದಿಂದ ದೂರ ಉಳಿಯುವ ಸಾಧ್ಯತೆಗಳು ಹೆಚ್ಚಾಗುತ್ತಿವೆ.

ಬೇಡಿಕೆಗೆ ತಕ್ಕಂತೆ ವಸತಿ ನಿಲಯವಿಲ್ಲ
ಜಿಲ್ಲೆಯ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾಕ ಇಲಾಖೆಯಲ್ಲಿ ಮೆಟ್ರಿಕ್‌ ಅನಂತರದ ಬಾಲಕಿಯರ ಹಾಸ್ಟೆಲ್‌ಗ‌ಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಬೇಡಿಕೆಗೆ ತಕ್ಕಂತೆ ಹಾಸ್ಟೆಲ್‌ಗ‌ಳು ಇಲ್ಲ.

ಜನಪ್ರತಿನಿಧಿಗಳ ಬೆನ್ನತ್ತುವ ವಿದ್ಯಾರ್ಥಿಗಳು
ವಿದ್ಯಾಸಿರಿ ಯೋಜನೆಯಡಿ ಹಾಸ್ಟೆಲ್‌ ವಂಚಿತ ವಿದ್ಯಾರ್ಥಿಗೆ 1,500 ರೂ. ವಿತರಿಸಲಾಗುತ್ತದೆ. ಮೆರಿಟ್‌ ಆಧಾರದ ಮೇಲೆ ವಿದ್ಯಾರ್ಥಿ ವೇತನ ವಿತರಿಸಲಾಗುತ್ತಿದೆ. ಆದರೆ ಉಡುಪಿ ನಗರದಲ್ಲಿ ಖಾಸಗಿ ವಸತಿ ನಿಲಯದಲ್ಲಿ ತಿಂಗಳಿಗೆ 2,500- 3,000 ರೂ. ತೆರಬೇಕಾಗಿರುವುದರಿಂದ ವಿದ್ಯಾರ್ಥಿಗಳು ಸರಕಾರಿ ಹಾಸ್ಟೆಲ್‌ ಸೇರ್ಪಡೆಗೆ ಶಿಫಾರಸು ಪಡೆಯಲು ಜನಪ್ರತಿನಿಧಿಗಳ ಬೆನ್ನತ್ತಿದ್ದಾರೆ.

ಬೇಡಿಕೆ ಯಾಕೆ?
ನಗರದಲ್ಲಿ ಸರಕಾರಿ ಮಹಿಳಾ ಕಾಲೇಜು, ಸ್ನಾತಕೋತ್ತರ ಕೇಂದ್ರ, ಬಾಲಕಿಯರ ಪ.ಪೂ. ಹಲವು ಮೆಡಿಕಲ್‌, ಕಾನೂನು ಸೇರಿದಂತೆ ವಿವಿಧ ಕಾಲೇಜುಗಳಿವೆ. ಶಿಕ್ಷಣ ಸಂಸ್ಥೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಸ್ಟೆಲ್‌ಗ‌ಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಜತೆಗೆ ಜನರಲ್ಲಿ, ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಅರಿವು ಮೂಡಿದ್ದು, ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಮುಂದೆ ಬರುತ್ತಿದ್ದಾರೆ ಎನ್ನುವುದು ಇಲಾಖೆಯ ಅವರ ಅಭಿಪ್ರಾಯ.

Advertisement

ಬಾಲಕಿಯ ವಸತಿ ನಿಲಯ
ಉಡುಪಿಯಲ್ಲಿ ಪ್ರಸ್ತುತ ಬನ್ನಂಜೆ, ಆದಿ ಉಡುಪಿ, ಕಿನ್ನಿಮೂಲ್ಕಿ, ಕುಂಜಿಬೆಟ್ಟು ಸೇರಿದಂತೆ ಒಟ್ಟು 7 ಬಾಲಕಿಯರ ವಸತಿ ನಿಲಯಗಳಿವೆ. ಪ್ರತಿ ವಸತಿ ನಿಲಯದ ಸಂಖ್ಯಾಬಲ ಸುಮಾರು 100 ಹತ್ತಿರವಿದೆ. ಇಲ್ಲಿ ವಸತಿ ನಿಲಯದ ಪ್ರವೇಶವನ್ನು ಮೆರಿಟ್‌ ಆಧಾರದಲ್ಲಿ ನೀಡಲಾಗುತ್ತದೆ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.

ನಿರ್ಮಾಣಕ್ಕೆ ಪ್ರಸ್ತಾವನೆ
ನಗರದಲ್ಲಿ ಬಾಲಕಿಯರ ವಸತಿ ನಿಲಯಕ್ಕೆ ಹೆಚ್ಚಿನ ಬೇಡಿಕೆಯಿದೆ. ಅದನ್ನು ಮನಗಂಡು ಈಗಾಗಲೇ ಬಾಲಕಿಯರ ವಸತಿ ನಿಲಯ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಗಿರಿಧರ್‌, ತಾಲೂಕು ಅಧಿಕಾರಿ, ಹಿಂದುಳಿದ ವರ್ಗಗಳ
ಇಲಾಖೆ, ಉಡುಪಿ.

-ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next