ಬೆಂಗಳೂರು: ಗ್ರಾಮೀಣ ಭಾಗದ ಮಹಿಳೆಯರು ತಯಾರಿಸುವ ವಿಶೇಷ ಉತ್ಪನ್ನಗಳು ಮುಂದಿನ ದಿನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಲಭ್ಯವಿರಲಿದೆ. ಆ ಮೂಲಕ ವಿದೇಶಿ ಬ್ರ್ಯಾಂಡ್‌ಗಳ ನಡುವೆ ಗ್ರಾಮೀಣ ಸ್ವದೇಶಿ ಉತ್ಪನ್ನಗಳು ಸ್ಥಾನ ಪಡೆಯಲಿವೆ.
ಗ್ರಾಮೀಣ ಭಾಗದ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾ ಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟ್ರರ್ಮಿನಲ್‌ನಲ್ಲಿ ಪ್ರತ್ಯೇಕ ಸ್ಟಾಲ್ ತೆರೆಯಲಾಗುತ್ತದೆ. ಆ ಮೂಲಕ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳು ಇದೇ ಮೊದಲ ಬಾರಿಗೆ ವಿಮಾನ ನಿಲ್ದಾಣದ ಮಳಿಗೆ ಪ್ರವೇಶ ಪಡೆಯಲು ಸಿದ್ಧವಾಗಿದೆ.
ವಿದೇಶ ಮಟ್ಟಕ್ಕೆ ಬ್ರ್ಯಾಂಡ್ ಪರಿಚಯ: “ರಾಷ್ಟ್ರೀಯ ಗ್ರಾಮೀಣ ಜೀವ ನೋಪಾಯ ಅಭಿಯಾನ’ (ಎನ್‌ಆರ್‌ಎಲ್‌ಎಂ)ಅಡಿಯಲ್ಲಿ ನೋಂದಾ ಯಿತ ಮಹಿಳಾ ಸ್ವಸಹಾಯ ಗುಂಪುಗಳ ಉತ್ಪನ್ನಗಳು ಮಾತ್ರ ವಿಮಾನ ನಿಲ್ದಾಣದ ಮಳಿಗೆ ಪ್ರವೇಶ ಪಡೆಯಲಿವೆ. ರಾಜ್ಯದಲ್ಲಿ 50,000ಕ್ಕೂ ಅಧಿಕ ಬಡ ಮಹಿಳೆಯರು ಕಿರು ಮತ್ತು ಸಣ್ಣ ಉದ್ದಿಮೆ ಪ್ರಾರಂಭಿಸಿ ವಿವಿಧ ರೀತಿಯ ಉತ್ಪನ್ನಗಳು ತಯಾರಿಸುತ್ತಿದ್ದಾರೆ. ಅವರು ಉತ್ಪಾದಿಸುವ ಸಾವಿರಕ್ಕೂ ಅಧಿಕ ಉತ್ಪನ್ನಗಳಿಗೆ ಈಗಾಗಲೇ ಬ್ರ್ಯಾಂಡಿಂಗ್ ಸಹ ಮಾಡಲಾಗಿದೆ. ಅವುಗಳನ್ನು ವಿದೇಶ ಮಟ್ಟಕ್ಕೆ ಪರಿಚಯಿಸುವ ಉದ್ದೇಶದಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಳಿಗೆ ತೆರೆಯಲಾಗುತ್ತಿದೆ.
ಒಂದೇ ಸೂರಲ್ಲಿ 31ಜಿಲ್ಲೆಗಳ ಉತ್ಪನ್ನ: ಪ್ರಸ್ತುತ ವಿಮಾನ ನಿಲ್ದಾಣದಲ್ಲಿ ತೆರೆಯಲಿರುವ ಮಳಿಗೆಯಲ್ಲಿ ರಾಜ್ಯ 31 ಜಿಲ್ಲೆಗಳ ಮಹಿಳಾ ಸದಸ್ಯರು ತಯಾರಿಸಿದ ಬ್ರ್ಯಾಂಡಿಂಗ್ ಹಾಗೂ ಇತರೆ ಉತ್ಪನ್ನಗಳು ಇರಲಿದೆ. ಈಗಾಗಲೇ ಜಿಯೋ ಟ್ಯಾಗ್ ಆಗಿರುವ ಸೀರೆಗಳು, ಗುಣಮಟ್ಟದ ಹ್ಯಾಂಡ್‌ಮೇಡ್ ಬ್ಯಾಗ್‌ಗಳು, ಕ್ಯಾಂಡಲ್‌ಗಳು, ಬಿದಿರಿನ ಬುಟ್ಟಿ , ದೇಸಿ ಗೋ ಉತ್ಪನ್ನಗಳು, ವಿವಿಧ ಬಗೆಯ ತಿಂಡಿ, ತಿನಿಸುಗಳು, ಪೂಜಾ ಸಾಮಗ್ರಿ, ಆರೋಗ್ಯಕರ ಪೇಯ, ಗುಣಮಟ್ಟ ಹಾಗೂ ಆರೋಗ್ಯಕರ ಸಾವಯವ ಉತ್ಪನ್ನಗಳು, ಇತರೆ ಅಪರೂಪದ ಕರಕುಶಲ ವಸ್ತುಗಳು ಒಂದೇ ಸೂರಿನಡಿ ದೊರೆಯಲಿವೆ.
ಪ್ರಯೋಜನವೇನು?: ವಿಮಾನ ನಿಲ್ದಾಣದಲ್ಲಿ ಗ್ರಾಮೀಣ ಭಾಗದ ಸ್ವದೇಶಿ ಉತ್ಪನ್ನಗಳ ಮಳಿಗೆ ಪ್ರಾರಂಭವಾದರೆ ರಾಜ್ಯದ 31 ಜಿಲ್ಲೆಗಳ ಬ್ರ್ಯಾಂಡ್ ಉತ್ಪನ್ನಗಳು ಒಂದೇ ಮಳಿಗೆಯಲ್ಲಿ ಸಿಗಲಿದೆ. ಇದರಿಂದಾಗಿ ವಿದೇಶಿ ವಿಮಾನ ಪ್ರಯಾಣಿಕರಿಗೆ ಗ್ರಾಮೀಣ ಭಾಗದ ವಿಶೇಷ ಉತ್ಪನ್ನಗಳು ಮಳಿಗೆಯಲ್ಲಿ ಸಿಗಲಿದೆ. ಇದರಿಂದಾಗಿ ಪ್ರವಾಸಿಗರ ಸಮಯವು ಉಳಿತಾಯ ಆಗುವುದರ ಜತೆಗೆ ಮಹಿಳಾ ಉದ್ದಿಮೆದಾರರಿಗೆ ಆದಾಯಯೂ ಸಿಗುತ್ತದೆ. ಜತೆಗೆ ಭಾರತಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಒಂದೇ ಸೂರಿನಡಿಯಲ್ಲಿ ನಮ್ಮ ಗ್ರಾಮೀಣ ಉತ್ಪನ್ನಗಳು ಪರಿಚಯವಾಗಲಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಳಿಗೆಯಲ್ಲಿ ಎನ್‌ಆರ್‌ಎಲ್‌ಎಂನಲ್ಲಿ ನೋಂದಾಯಿಸಿಕೊಂಡ ಮಹಿಳಾ ಸ್ವಸಹಾಯ ಗುಂಪುಗಳ ಉತ್ಪನ್ನಗಳು ಮಾರಾಟ ಹಾಗೂ ಪ್ರದರ್ಶನಕ್ಕೆ ಇಡಲು ಅವಕಾಶ ಲಭ್ಯವಾಗಲಿದೆ. ಇದರ ಮಾತುಕತೆಗಳು ನಡೆಯುತ್ತಿದೆ.
-ಡಾ.ಆರ್.ರಾಗಪ್ರಿಯಾ, ನಿರ್ದೇಶಕಿ, ರಾಷ್ಟ್ರೀಯ ಜೀವನೋಪಾಯ ಅಭಿಯಾನ.
– ತೃಪ್ತಿ ಕುಮ್ರಗೋಡು