Advertisement
ಹಾಗಿದ್ದರೂ ಭಾರತೀಯರಿಗೆ ವಿಮೆ ಅಂದರೆ ಅಲರ್ಜಿ ಮತ್ತು ಭಾರತೀಯರ ವಿಮಾ ನಿರ್ಲಕ್ಷ್ಯ ಜಗತ್ ಪ್ರಸಿದ್ಧ ಎನ್ನುವುದನ್ನು ನಾವು ಹಿಂದಿನ ಕಂತಿನಲ್ಲಿ ಕಂಡುಕೊಂಡಿದ್ದೇವೆ. ಆದರೂ ಸಾಮಾಜಿಕ ಭದ್ರತೆಯ ಯತ್ನವಾಗಿ ಸರಕಾರ ಮತ್ತು ವಿಮಾ ಕಂಪೆನಿಗಳು ಜನರಿಗೆ ವಿಮೆಯ ಮಹತ್ವವನ್ನು ಮನದಟ್ಟು ಮಾಡಿಕೊಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಿವೆ. ಭಾರತೀಯ ಜೀವ ವಿಮಾ ನಿಗಮವು ಭಾರತ ಸರಕಾರದ ಒಡೆತನದಲ್ಲಿ, ಕಳೆದ ಆರು ದಶಕಗಳಿಂದ (ಸ್ಥಾಪನೆ : ಸೆಪ್ಟಂಬರ್ 1, 1956) ವಿಮಾ ಕ್ಷೇತ್ರದಲ್ಲಿ ಸೇವಾ ನಿರತವಾಗಿದೆ.
Related Articles
Advertisement
ಭಾರತದ ಅತ್ಯಂತ ಹಳೆಯ ಅಂಚೆ ಇಲಾಖೆ ಕೂಡ ಜೀವ ವಿಮಾ ಮತ್ತು ಹಣಕಾಸು ಸೇವಾ (ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ – IPPB ) ಕ್ಷೇತ್ರದಲ್ಲಿ ಅಬ್ಬರದಿಂದ ಕಾರ್ಯವೆಸಗುತ್ತಿರುವುದು ಗಮನಾರ್ಹವಾಗಿದೆ. ಅಂಚೆ ಇಲಾಖೆಯ ಗ್ರಾಮೀಣ ಅಂಚೆ ವಿಮಾ ಯೋಜನೆಯು ಅತ್ಯಂತ ಕಡಿಮೆ ವೆಚ್ಚದಲ್ಲಿ ಜನರಿಗೆ ಜೀವ ವಿಮಾ ಸೌಲಭ್ಯ ನೀಡುವುದು, ಗ್ರಾಮೀಣ ಜನತೆಯನ್ನು ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶವನ್ನು ಹೊಂದಿದೆ. ಅಂತೆಯೇ ಈ ಯೋಜನೆ ಸಮಾಜದ ಎಲ್ಲ ವರ್ಗಗಳ ಜನರಿಗೆ ಲಾಭದಾಯಕವೂ ಆಕರ್ಷಕವೂ ಆಗಿದೆ.
ಗ್ರಾಮೀಣ ಅಂಚೆ ಜೀವ ವಿಮೆಯ ಕೆಲವು ಮಹತ್ವದ ಮಾಹಿತಿಗಳನ್ನು ಈ ರೀತಿಯಾಗಿ ಗುರುತಿಸಬಹುದು :
* ಗ್ರಾಮೀಣ ಪ್ರದೇಶದ ಭಾರತೀಯನಿಗಾಗಿ ಭಾರತ ಸರಕಾರ ಆರಂಭಿಸಿರುವ ವಿಶಿಷ್ಟ ಜೀವ ವಿಮೆ ಯೋಜನೆ ಇದು.
* ಕನಿಷ್ಠ 19 ವರ್ಷ ಮತ್ತು ಗರಿಷ್ಠ 55 ವರ್ಷ ವಯಸ್ಸಿನ ಒಳಗಿನವರು (ಮುಂದಿನ ಜನ್ಮದಿನಕ್ಕೆ ಅನುಗುಣವಾಗಿ) ಈ ಯೋಜನೆಗೆ ಸೇರಲು ಅರ್ಹರು.
* ಕನಿಷ್ಠ ವಿಮೆ ಮೊತ್ತ 10,000 ರೂ; ಗರಿಷ್ಠ ವಿಮಾ ಮೊತ್ತ 10 ಲಕ್ಷ ರೂ. – ವಿವಿಧ ಯೋಜನೆಗಳಲ್ಲಿ ವಿಮಾ ಸೌಲಭ್ಯ – ವೈದ್ಯಕೀಯ ಪರೀಕ್ಷೆಗೆ ಒಳಪಟ್ಟು .
ಗ್ರಾಮೀಣ ಜೀವ ವಿಮಾ ಪಾಲಿಸಿಯ ಲಾಭಗಳನ್ನು ಈ ಕೆಳಗಿನಂತೆ ಗುರುತಿಸಬಹುದು :
1. ಅತೀ ಕಡಿಮೆ ಕಂತು : ಇತರ ಜೀವ ವಿಮಾ ಕಂಪೆನಿಗಳಿಗೆ ಹೋಲಿಸಿದರೆ ಗ್ರಾಮೀಣ ಅಂಚೆ ಜೀವ ವಿಮೆಗೆ ಅನ್ವಯವಾಗುವ ಪ್ರೀಮಿಯಂ ಪ್ರಮಾಣ ಅತೀ ಕಡಿಮೆ ಇರುತ್ತದೆ.
2. 20,000 ರೂ. ಮತ್ತು ಅದಕ್ಕೂ ಹೆಚ್ಚಿನ ಮೊತ್ತದ ಅಶ್ವಾಸಿತ ಮೊಬಲಿಗಿಗೆ ಕಂತಿನಲ್ಲಿ ಪ್ರತೀ 20,000 ರೂ.ಗಳಿಗೆ 1ರೂ. ನಂತೆ ರಿಯಾಯಿತಿ ಇರುತ್ತದೆ.
3. ಗ್ರಾಮೀಣ ಅಂಚೆ ವಿಮೆಗೆ ನೀಡಲಾಗುವ ಬೋನಸ್ ಅತ್ಯಧಿಕವಾಗಿರುತ್ತದೆ.
ಉದಾಹರಣೆಗೆ 30 ವರ್ಷ ವಯಸ್ಸಿನ ವ್ಯಕ್ತಿಯು ನಿಗದಿತ ವಯೋಮಿತಿ ವಿಮಾ ಯೋಜನೆ (ಗ್ರಾಮ ಸಂತೋಷ) ಅಡಿ ಪಾಲಿಸಿ ಪಡೆದಲ್ಲಿ ಆತ 60 ವರ್ಷ ಮುಗಿಸಿದಾಗ ಆತನಿಗೆ ಸಿಗುವ ಮೊತ್ತ ಈ ರೀತಿ ಇರುತ್ತದೆ :
ವಿಮಾದಾರನ ವಯಸ್ಸು : 30 ವರ್ಷಅಶ್ವಾಸಿತ ಮೊಬಲಗು : 1,00,000 ರೂ.
ತಿಂಗಳ ಕಂತು (ಪ್ರೀಮಿಯಂ) : 270 ರೂ.
ವಿಮಾದಾರರ ಕಟ್ಟುವ ಹಣ : 93,960 ರೂ.
ಸಿಗುವ ಬೋನಸ್ (ಈಗಿನ ದರದಲ್ಲಿ) : 1,45,000 ರೂ.
ವಿಮೆ ಪಕ್ವವಾಗುವಾಗ ದೊರಕುವ ಒಟ್ಟು ಹಣ : 2,45,000 ರೂ. ಅಂಚೆ ವಿಮಾದಾರನಿಗೆ ಯಾವೆಲ್ಲ ಸೌಕರ್ಯಗಳಿರುತ್ತವೆ ಎಂಬುದನ್ನು ಈ ಕೆಳಗಿನಂತೆ ಗುರುತಿಸಬಹುದು : 1. ಗ್ರಾಮೀಣ ಅಂಚೆ ಜೀವ ವಿಮೆಗೆ ನಾಮ ನಿರ್ದೇಶನದ ಸೌಕರ್ಯವಿದೆ. 2. ಮುಂಗಡ ಪ್ರೀಮಿಯಂ ಪಾವತಿಗೆ ರಿಯಾಯಿತಿ ಇರುತ್ತದೆ. ಎಂದರೆ 12 ತಿಂಗಳ ಪ್ರೀಮಿಯಂ ಅನ್ನು ಮುಂಗಡವಾಗಿ ಪಾವತಿಸಿದರೆ ಶೇ.2, 6 ತಿಂಗಳ ಮುಂಗಡ ಪಾವತಿಸಿದರೆ ಶೇ.1, ಮೂರು ತಿಂಗಳ ಮುಂಗಡ ಪಾವತಿಸಿದರೆ ಶà.0.5 ರಿಯಾಯಿತಿ ಸಿಗುತ್ತದೆ. 3. ಆದಾಯ ತೆರಿಗೆ ವಿನಾಯಿತಿ ಇರುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆ.88ರ ಅನ್ವಯ ವರ್ಷವೊಂದರಲ್ಲಿ ವಿಮಾದಾರನು ಪಾವತಿಸುವ ಪ್ರೀಮಿಯಂ ಮೊತ್ತದ ಮೇಲೆ ಆದಾಯ ತೆರಿಗೆ ರಿಯಾಯಿತಿ ಸಿಗುತ್ತದೆ. 4. ಪ್ರತೀ ತಿಂಗಳು, ಅರ್ಧ ವರ್ಷ ಅಥವಾ ವರ್ಷಕ್ಕೊಮ್ಮೆ ಪಾವತಿಸಬೇಕಿರುವ ಪ್ರೀಮಿಯಂ ಮೊತ್ತವನ್ನು ದೇಶದ ಯಾವುದೇ ಅಂಚೆ ಕಚೇರಿಯಲ್ಲಿ, ವಿಮಾದಾರನಿಗೆ ನಿಕಟವಿರುವ ಅಂಚೆ ಕಚೇರಿಯಲ್ಲಿ, ಪಾವತಿಸಬಹುದಾಗಿದೆ. 5. ಯಾವುದೇ ಕಾರಣಕ್ಕೆ ಸ್ಥಗಿತಗೊಂಡಿರುವ ಪಾಲಿಸಿಯನ್ನು ಪುನಶ್ಚೇತನಗೊಳಿಸುವುದಕ್ಕೆ ಅವಕಾಶ ಇರುತ್ತದೆ. 6. ಮೂರು ವರ್ಷಗಳಿಗೂ ಹೆಚ್ಚು ಕಾಲ ಪ್ರೀಮಿಯಂ ಹಣ ಪಾವತಿಯಾಗಿರುವ ಪಾಲಿಸಿಗಳಿಗೆ ಸಂಬಂಧಿಸಿ ಮುಂದೆ ಪ್ರೀಮಿಯಂ ಪಾವತಿಯಾಗದಿದ್ದರೂ, ಆ ಪಾಲಿಸಿಗಳು ರದ್ದಾಗುವುದಿಲ್ಲ. ಅವುಗಳು ತಂತಾನೇ ಸ್ಥಗಿತಗೊಳಿಸಲ್ಪಟ್ಟು ಆಶ್ವಾಸಿತ ಮೊಬಲಗು ಪಾವತಿಯಾದ ಕಂತಿನ ಮೊತ್ತಕ್ಕೆ ಇಳಿಯುವದು ಮತ್ತು ಆ ಸ್ಥಗಿತದ ಮೊಬಲಗಿಗೆ ಬೋನಸ್ ಕೂಡ ದೊರಕುತ್ತದೆ. ವಿವಿಧ ಬಗೆಯ ಅಂಚೆ ವಿಮಾ ಯೋಜನೆಗಳಿಗೆ ಈ ರೀತಿಯ ಹೆಸರುಗಳಿವೆ : 1. ನಿಗದಿತ ವಯೋಮಿತಿ ವಿಮಾ ಯೋಜನೆ : ಗ್ರಾಮ ಸಂತೋಷ
2. ಆಜೀವ ವಿಮಾ ಯೋಜನೆ : ಗ್ರಾಮ ಸುರಕ್ಷಾ
3. ಪರಿವರ್ತನೀಯ ಆಜೀವ ವಿಮಾ ಯೋಜನೆ : ಗ್ರಾಮ ಸುವಿಧಾ
4. 20 ಅಥವಾ 15 ವರ್ಷ ಅವಧಿಯ ನಿರೀಕ್ಷಿತ ವಯೋಮಿತಿ ವಿಮಾ ಯೋಜನೆ: ಗ್ರಾಮ ಸುಮಂಗಳ
5. 10 ವರ್ಷ ಅವಧಿಯ ವಿಮಾ ಯೋಜನೆ : ಗ್ರಾಮೀಣ ಜೀವ ವಿಮೆ ಸ್ವತಃ ಭಾರತ ಸರಕಾರವೇ ಅಂಚೆ ಇಲಾಖೆ ಮೂಲಕ ನಡೆಸುವ ಈ ವಿಮಾ ಯೋಜನೆಗಳು ವಿಮಾದಾರರಿಗೆ ಸುಭದ್ರತೆಯ ಭರವಸೆಯನ್ನು ಕೊಡುತ್ತದೆ. ಇಂದು ಭಾರತೀಯ ಅಂಚೆ ಇಲಾಖೆ ಅತ್ಯಂತ ವೇಗದಲ್ಲಿ ಡಿಜಿಟಲ್ ಆಗುತ್ತಿದೆ. ದೇಶದ ಹಳ್ಳಿ ಹಳ್ಳಿಗಳ ಮೂಲೆಯಲ್ಲಿರುವ ಜನರಿಗೆ ಹಣಕಾಸು ಸೇವೆಯನ್ನು ಕಲ್ಪಿಸುವ ಸಲುವಾಗಿ ಭಾರತೀಯ ಅಂಚೆ ಇಲಾಖೆ ಈಚೆಗೆ “ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್’ ಆರಂಭಿಸಿದೆ. ಅಂಚೆಯ ಅಣ್ಣಂದಿರೇ ಇನ್ನು ಮುಂದೆ ಜನರ ಮನೆ ಬಾಗಿಲಿಗೆ ಬಂದು ತಮ್ಮ ಕೈಯಲ್ಲೇ ಇರಿಸಿಕೊಂಡಿರುವ ಪಾಯಿಂಟ್ ಆಫ್ ಸೇಲ್ ಮಶೀನ್ ಗಳ ಮೂಲಕ ಜನರಿಗೆ ಹಣಕಾಸು/ಹಣ ವರ್ಗಾವಣೆಯ ಸೇವೆಯನ್ನು ನೀಡುತ್ತಾರೆ. ಜನರಲ್ಲಿ ಕೈಯಲ್ಲಿ ತಮ್ಮ ಆಧಾರ್ ನಂಬ್ರ ಮತ್ತು ಬ್ಯಾಂಕ್ ಖಾತೆ ನಂಬ್ರ ಇದ್ದರಾಯಿತು. ತಾವಿರುವಲ್ಲೇ ಆನ್ಲೈನ್ ಹಣಕಾಸು ಚಟುವಟಿಕೆಯನ್ನು ನಡೆಸಬಹುದಾಗಿರುತ್ತದೆ. ಈ ಎಲ್ಲ ಹಿನ್ನೆಲೆಯಲ್ಲಿ ಭಾರತೀಯ ಅಂಚೆ ಇಲಾಖೆಯ ಗ್ರಾಮೀಣ ಅಂಚೆ ವಿಮಾ ಯೋಜನೆಗಳು ಜನರಿಗೆ ಸಾಮಾಜಿಕ ಭದ್ರತೆ ಒದಗಿಸುವ ಮೂಲಕ ಎಲ್ಲರನ್ನೂ ದೇಶದ ಆರ್ಥಿಕಾಭಿವೃದ್ದಿಯಲ್ಲಿ ತೊಡಗಿಸಿಕೊಳ್ಳುವ ಕ್ರಾಂತಿಕಾರಕ ಮತ್ತು ಲಾಭದಾಯಕ ಯೋಜನೆಗಳಾಗಿವೆ ಎನ್ನಲು ಅಡ್ಡಿಯಿಲ್ಲ.