Advertisement

ಗ್ರಾಪಂ ಚುನಾವಣೆಯತ್ತ ಗ್ರಾಮೀಣರ ಒಲವು

05:07 PM Oct 22, 2020 | Suhan S |

ದಾವಣಗೆರೆ: ಅಧಿಕಾರ ವಿಕೇಂದ್ರೀಕರಣದಲ್ಲಿ ಗ್ರಾಮಾಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸುತ್ತಿರುವ ಗ್ರಾಮ ಪಂಚಾಯತಿಗಳ ಚುನಾವಣೆ ನಡೆಸಲುಹಗ್ಗಜಗ್ಗಾಟ ನಡೆಯುತ್ತಿದೆ.

Advertisement

ಗ್ರಾಮಗಳಿಗೆ ಅನುದಾನ ಬರುವಂತಾಗಲು, ಮೂಲಭೂತ ಕೆಲಸಗಳಾಗಲು ಆದಷ್ಟು ಬೇಗ ಗ್ರಾಮ ಪಂಚಾಯತ್‌ ಚುನಾವಣೆ ನಡೆಯುವಂತಾಗಬೇಕು ಎಂಬ ಒತ್ತಾಯ ಗ್ರಾಮೀಣ ಪ್ರದೇಶದ ಜನರಿಂದ ಕೇಳಿ ಬರುತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವ್ಯವಸ್ಥೆಯ ಮೂಲಕ ಗ್ರಾಮ ಪಂಚಾಯಿತಿಗಳಿಗೆ ಪರಮೋತ್ಛ ಅಧಿಕಾರ ನೀಡಿರುವ ಜೊತೆಗೆ ಸದಸ್ಯರ ಅನುಗುಣವಾಗಿ ಅನುದಾನ ಸಹ ಹರಿದು ಬರುತ್ತಿರುವುದರಿಂದ ಈಗ ಗ್ರಾಮಗಳ ಚಿತ್ರಣ ಬದಲಾಗುತ್ತಿದೆ. ರಸ್ತೆ, ಕುಡಿಯುವ ನೀರು, ಚರಂಡಿ, ಸ್ವಚ್ಛತೆ, ನರೇಗಾ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಂದ ಯಾವುದೇ ಮೂಲಭೂತ ಸೌಲಭ್ಯವೇ ಕಾಣದೇ ಇರುತ್ತಿದ್ದ ಹಳ್ಳಿಗಳಲ್ಲೂ ಮೂಲಭೂತ ಸೌಲಭ್ಯದ ಸ್ಪರ್ಶ ಕಂಡು ಬರುತ್ತಿದೆ. ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಒತ್ತಾಸೆಯಂತೆ ಒಂದಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.

2015ರ ಮೇ 2 ರಂದು ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದಿತ್ತು. ಕೆಲವಗ್ರಾಪಂಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಗ್ರಾಮ ಪಂಚಾಯಿತಿಗಳ ಅಧಿಕಾರದ ಅವಧಿ ಮುಗಿದಿರುವುದರಿಂದ ಈಗ ಗ್ರಾಪಂಗಳಲ್ಲಿ ಜನಪ್ರತಿನಿಧಿಗಳು ಇಲ್ಲದಂತಾಗಿದೆ.ಅಧಿಕಾರದಅವಧಿ ಮುಗಿದ ಹಿನ್ನೆಲೆಯಲ್ಲಿ ಸರ್ಕಾರನೇಮಕ ಮಾಡಿದ್ದಂತಹ ಆಡಳಿತಾಧಿಕಾರಿಗಳ ಅಧಿಕಾರವಧಿಯೂ ಮುಗಿದು ಹೋಗಿರುವ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಆಗಲೇಬೇಕಾದ ಕೆಲಸ ಕಾರ್ಯಗಳು ಕುಂಠಿತವಾಗುತ್ತಿವೆ. ಕಾರ್ಯದರ್ಶಿ, ಪಿಡಿಒಗಳಿಂದ ಎಲ್ಲಾ ಕೆಲಸಗಳನ್ನು ನಿಭಾಯಿಸುವುದು ಕಷ್ಟ ಸಾಧ್ಯ. ಹಾಗಾಗಿ ಗ್ರಾಪಂ ಚುನಾವಣೆ ನಡೆಸುವುದೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಗ್ರಾಮಗಳಲ್ಲಿ ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪ, ಚರಂಡಿ ಮುಂತಾದ ಸಣ್ಣ ಪುಟ್ಟ ಕೆಲಸಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ.ಗ್ರಾಪಂ ಸದಸ್ಯರುಗಳಿದ್ದಲ್ಲಿ ಅವರ ಮೂಲಕ ಕೆಲಸ ಮಾಡಿಸಿಕೊಳ್ಳ ಬಹುದಿತ್ತು. ಈಗ ಯಾರೂ ಇಲ್ಲ. ಎಲ್ಲವನ್ನೂ ಅಧಿಕಾರಿಗಳೇ ಮಾಡಲಿಕ್ಕೆ ಆಗುತ್ತಿಲ್ಲ ಎಂಬ ಕೊರಗು ಗ್ರಾಮೀಣ ಜನರನ್ನು ಕಾಡುತ್ತಿದೆ.

ಕೋವಿಡ್ ಕಾರಣಕ್ಕೆ ಚುನಾವಣೆ ಮುಂದೂಡುವುದು ಸೂಕ್ತ ಎಂಬ ಮಾತು ಸಹ ಕೇಳಿಬರುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಶೇ.1 ರಿಂದ 2 ರಷ್ಟು ಪ್ರಮಾಣದಲ್ಲಿ ಕೋವಿಡ್ ಇದೆ. ಕೋವಿಡ್ ನಡುವೆಯೇ ವಿಧಾನ ಸಭಾ ಉಪಚುನಾವಣೆ, ವಿಧಾನ ಪರಿಷತ್‌ ಚುನಾವಣೆ ನಡೆಸಲಿಕ್ಕೆ ಸಾಧ್ಯ ಆಗುತ್ತದೆ. ಕಡಿಮೆ ಮತದಾರರು ಹೊಂದಿರುವಂತಹ ಗ್ರಾಮ ಪಂಚಾಯಿತಿಗಳ ಚುನಾವಣೆ ನಡೆಸಲು ಏಕೆ ಸಾಧ್ಯ ಇಲ್ಲ ಎಂಬ ಪ್ರಶ್ನೆಗಳೂ ಉದ್ಭವಿಸಿವೆ. ಪ್ರತಿ ವಾರ್ಡ್‌ನಲ್ಲಿ 350 ರಿಂದ 1,500ರ ವರೆಗೆ ಮತದಾರರು ಇರುತ್ತಾರೆ. 1 ಸಾವಿರ ಮತದಾರರಿಗೆಒಂದು ಬೂತ್‌ ನಿಗದಿ ಮಾಡಲಾಗಿದೆ. ಹಳ್ಳಿಗಳಲ್ಲಿ ಅಬ್ಬಾ ಎಂದರೂ ಶೇ. 70-80 ರಷ್ಟು ಮತದಾನ ಆಗಬಹುದು. ಹಾಗಾಗಿ ಕೊರೊನಾಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿ ಅನ್ವಯ ಸಾಮಾಜಿಕ ಅಂತರ ಕಾಪಾಡಿಕೊಂಡು ಚುನಾವಣೆ ನಡೆಸಬಹುದು ಎಂಬುದು ಕೆಲವರ ಅಂಬೋಣ.

Advertisement

ಈಗ ಅಲ್ಲದೇ ಹೋದರೂ ಮುಂದೆ ಚುನಾವಣೆ ಮಾಡಲೇಬೇಕಾಗುತ್ತದೆ. ಕೋವಿಡ್ ನಿಯಂತ್ರಣಕ್ಕೆ ಬಂದೇ ಬರುತ್ತದೆ ಎಂದು ಯಾವ ಆಧಾರದಲ್ಲಿ ಆಗ ಚುನಾವಣೆ ನಡೆಸಲಿಕ್ಕೆ ಸಾಧ್ಯವಾಗುತ್ತದೆ ಎಂದು ಪ್ರಶ್ನೆಗಳೂ ಇವೆ. ಕೋವಿಡ್ ಮುಂಜಾಗ್ರತಾ ಕ್ರಮಗಳೊಂದಿಗೆ ಗ್ರಾಪಂ ಚುನಾವಣೆ ನಡೆಸಿದಲ್ಲಿ ಜನಪ್ರತಿನಿಧಿಗಳು ಬರುವಂತಾಗುತ್ತದೆ. ಅನುದಾನವೂ ಬರುತ್ತದೆ. ಹಳ್ಳಿಗಳಲ್ಲಿ ಒಂದಷ್ಟು ಅಭಿವೃದ್ಧಿ ಕಾರ್ಯ ಕಾಣಲು ಸಾಧ್ಯ ಎನ್ನಲಾಗುತ್ತಿದೆ.

ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷಾತೀತವಾಗಿ ನಡೆಯುತ್ತವೆ. ಗ್ರಾಪಂನಲ್ಲಿ ಜನಪ್ರತಿನಿಧಿಗಳು ಇಲ್ಲದೆ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ. 15ನೇ ಹಣಕಾಸು ಅನುದಾನದ ನಂತರ ಅನುದಾನವೂ ಬರುತ್ತಿಲ್ಲ. ಅಧಿಕಾರಿಗಳಿಂದ ಅನುದಾನ ತರಲಿಕ್ಕೆ ಆಗುವುದಿಲ್ಲ. ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಗ್ರಾಪಂ ಚುನಾವಣೆ ನಡೆಸುವಂತಾಗಲಿ.- ಅಣಬೇರು ಶಿವಮೂರ್ತಿ, ಅಧ್ಯಕ್ಷರು, ಜಿಲ್ಲಾ ಗ್ರಾಮ ಪಂಚಾಯಿತಿ ಸದಸ್ಯರುಗಳ ಒಕ್ಕೂಟ.

ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಬೇಕೆಂದರೆ ಚುನಾವಣೆ ನಡೆಯಬೇಕು. ಅನುದಾನ ಯಾವ ರೀತಿ ಬಳಕೆ ಆಗುತ್ತದೆ ಎಂಬುದನ್ನ ನೋಡುವುದಕ್ಕೆ ಸದಸ್ಯರ ಅವಶ್ಯಕತೆ ಇದೆ. ಹಾಗಾಗಿ ಚುನಾವಣೆ ನಡೆಸಬೇಕು. –ಸಂಡೂರು ರಾಜಶೇಖರ್‌, ಸಮಾಜಸೇವಕರು, ಮಾಯಕೊಂಡ

 

-ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next