ಮಂಡ್ಯ: ಹೊಸದಾಗಿ ಆಧಾರ್ ಕಾರ್ಡ್ ಮಾಡಿಸಲು ಹಾಗೂ ಅವುಗಳ ತಿದ್ದುಪಡಿಗೆ ಜನರು ಪರದಾಡುತ್ತಿರುವ ಸ್ಥಿತಿ ಹೇಳತೀರದಾಗಿದೆ. ನಿತ್ಯವೂ ಗ್ರಾಮೀಣ ಪ್ರದೇಶದಿಂದ ನೂರಾರು ಜನರು ಬ್ಯಾಂಕುಗಳಿಗೆ ಅಲೆದಾಡುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಹಳ್ಳಿಗಾಡಿನ ಜನರಿಗೆ ಅನುಕೂಲವಾಗಲೆಂಬ ಕಾರಣಕ್ಕೆ ಗ್ರಾಮ ಪಂಚಾಯಿತಿ ಕಚೇರಿಗಳಲ್ಲೇ ಆಧಾರ್ ಕೇಂದ್ರ ತೆರೆಯಬೇಕೆಂಬ ಸರ್ಕಾರಿ ಆದೇಶ ಕಾಗದಕ್ಕೆ ಸೀಮಿತವಾಗಿದೆ. ಅದಕ್ಕೆ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಇದರಿಂದ ಆಧಾರ್ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.
20 ಟೋಕನ್ ಮಾತ್ರ: ದಿನವೂ ಸೂರ್ಯ ಉದಯಿಸುವ ಮುನ್ನವೇ ಗ್ರಾಮೀಣ ಪ್ರದೇಶಗಳಿಂದ ಬರುವ ಜನರು ಟೋಕನ್‌ಗಳನ್ನು ಪಡೆಯಲು ಬ್ಯಾಂಕುಗಳ ಬಾಗಿಲ ಬಳಿ ಬಂದು ನಿಲ್ಲುತ್ತಿದ್ದಾರೆ. ಬೆಳಗ್ಗೆ 10.30ಕ್ಕೆ ಬ್ಯಾಂಕುಗಳು ಬಾಗಿಲು ತೆರೆಯುವುದನ್ನೇ ಕಾದು ಟೋಕನ್ ಪಡೆಯುತ್ತಿದ್ದಾರೆ. ಬ್ಯಾಂಕುಗಳಲ್ಲಿ ಪ್ರತಿದಿನ ಜನರಿಗೆ 20 ಟೋಕನ್ ಮಾತ್ರ ವಿತರಣೆ ಮಾಡುತ್ತಿದೆ. ಇದರಿಂದ ಹೊಸದಾಗಿ ಆಧಾರ್ ಕಾರ್ಡ್ ಮಾಡಿಸುವವರಿಗೆ ಹಾಗೂ ಕಾರ್ಡ್ ತಿದ್ದುಪಡಿ ಮಾಡಿಸುವವರಿಗೆ ತೀವ್ರ ತೊಂದರೆಯಾಗುತ್ತಿದೆ.
ಗ್ರಾಪಂಗಳಲ್ಲಿ ಕೇಂದ್ರ ತೆರೆದಿಲ್ಲ: ಪುಟ್ಟ ಮಕ್ಕಳಿಗೂ ಆಧಾರ್ ಕಾರ್ಡ್ ಮಾಡಿಸಲು ಅವುಗಳೊಂದಿಗೆ ಜನರು ಬ್ಯಾಂಕುಗಳ ಬಳಿ ಬಂದು ನಿಲ್ಲುತ್ತಿದ್ದು, ತಿಂಡಿಯನ್ನೂ ತಿನ್ನದೆ ಹಸಿವಿನಿಂದ ಆಧಾರ್ ಕಾರ್ಡ್‌ಗಾಗಿ ಕಾದು ಕೂರುವ ಸನ್ನಿವೇಶ ಎಲ್ಲರ ಮನಕಲಕುತ್ತಿದೆ. ಹೊಸ ಆಧಾರ್ ಕಾರ್ಡ್ ಹಾಗೂ ತಿದ್ದುಪಡಿಗೆ ಜನರ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಕಚೇರಿಗಳಲ್ಲೇ ಆಧಾರ್ ಕೇಂದ್ರಗಳನ್ನು ತೆರೆಯುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ. ಆದೇಶ ಹೊರಬಿದ್ದು ವರ್ಷವಾಗುತ್ತಿದೆ. ಅಧಿಕಾರಿಗಳು ಮಾತ್ರ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿಲ್ಲ.
ಗ್ರಾಮೀಣರಿಗೆ ಅಲೆದಾಟ: ಸರ್ವರ್ ಸಮಸ್ಯೆಯ ನೆಪವೊಡ್ಡಿ ಪಂಚಾಯಿತಿ ಕಚೇರಿಗಳಲ್ಲಿ ಆಧಾರ್ ಕೇಂದ್ರಗಳನ್ನು ತೆರೆಯದೆ ಗ್ರಾಮೀಣರು ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ಅಲೆದಾಡುವಂತೆ ಮಾಡುತ್ತಿದ್ದಾರೆ. ಇದರಿಂದ ಹಳ್ಳಿಗಾಡಿನ ಜನರು ನಿತ್ಯ ತೊಂದರೆಗೆ ಸಿಲುಕಿದ್ದಾರೆ. ಬ್ಯಾಂಕುಗಳ ಎದುರು ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಿರುವುದರಿಂದ ಬ್ಯಾಂಕಿನ ಕಾರ್ಯಚಟುವಟಿಕೆಗಳೂ ಸುಗಮವಾಗಿ ನಡೆಯುವುದಕ್ಕೆ ಅಡ್ಡಿಯಾಗಿದೆ.
ತಿದ್ದುಪಡಿಗೂ ಅವಕಾಶ: ಈ ಹಿಂದೆ ತಾಲೂಕು ಕಚೇರಿ, ಅಂಚೆ ಕಚೇರಿ ಹಾಗೂ ಜಿಲ್ಲಾಡಳಿತದಿಂದ ಅನುಮತಿ ಪಡೆದ ಕೆಲವೊಂದು ಖಾಸಗಿ ಏಜೆನ್ಸಿಗಳು ಹೊಸ ಆಧಾರ್ ಕಾರ್ಡ್ ಹಾಗೂ ಆಧಾರ್ ತಿದ್ದುಪಡಿ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆ ಸಮಯದಲ್ಲಿ ಹಳ್ಳಿಗಾಡಿನ ಜನರು ಸುಲಭವಾಗಿ ತಮ್ಮ ವಾಸಸ್ಥಳದ ದೃಢೀಕರಣ ಪತ್ರ ಸೇರಿದಂತೆ ಇನ್ನಿತರ ದಾಖಲಾತಿಗಳನ್ನು ನೀಡಿ ಸುಲಭವಾಗಿ ಹೊಸ ಕಾರ್ಡ್ ಮತ್ತು ಅದರಲ್ಲಿನ ತಿದ್ದುಪಡಿಯನ್ನು ಮಾಡಿಸಿಕೊಳ್ಳುತ್ತಿದ್ದರು. ಇದು ಒಂದು ರೀತಿಯಲ್ಲಿ ಜನರಿಗೆ ಅನುಕೂಲವಾಗಿತ್ತು.
ಪ್ರಾಧಾನ್ಯತೆ ನೀಡುತ್ತಿಲ್ಲ: ಇದೀಗ ಹೊಸದಾಗಿ ಆಧಾರ್ ಕಾರ್ಡ್ ಮಾಡುವುದು ಹಾಗೂ ತಿದ್ದುಪಡಿ ಮಾಡುವ ಜವಾಬ್ದಾರಿಯನ್ನು ಖಾಸಗಿ ಏಜೆನ್ಸಿಗಳಿಂದ ಹಿಂಪಡೆದು ಬ್ಯಾಂಕುಗಳಿಗೆ ಮಾತ್ರ ವಹಿಸಲಾಗಿದೆ. ಬ್ಯಾಂಕಿನವರು ಆಧಾರ್ ಕಾರ್ಡ್ ಮಾಡುವ ಪ್ರಕ್ರಿಯೆಗೆ ಅಷ್ಟೊಂದು ಪ್ರಾಧಾನ್ಯತೆ ನೀಡುತ್ತಿಲ್ಲ. ಬ್ಯಾಂಕಿನ ಕೆಲಸ ಕಾರ್ಯಗಳೇ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಲವು ಬ್ಯಾಂಕುಗಳು ಆಧಾರ್ ಕಾರ್ಡ್, ತಿದ್ದುಪಡಿ ಮಾಡಲಾಗುವುದಿಲ್ಲವೆಂದು ನೇರವಾಗಿ ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. ಕೆಲವೊಂದು ಬ್ಯಾಂಕುಗಳು ಸರ್ವರ್ ಸಿಗುತ್ತಿಲ್ಲವೆಂಬ ನೆಪ ಹೇಳಿ ಗ್ರಾಮೀಣ ಜನರನ್ನು ಅಲೆಯುವಂತೆ ಮಾಡುತ್ತಿದ್ದಾರೆ.
ಈಗ ಆಧಾರ್ ಕಾರ್ಡ್ ಪುಟ್ಟ ಮಕ್ಕಳಿಂದ ಆರಂಭವಾಗಿ ದೊಡ್ಡವರವರೆಗೂ ಅವಶ್ಯಕವಾಗಿ ಬೇಕಿದೆ. ಅದಕ್ಕಾಗಿ ಎಲ್ಲರೂ ಬ್ಯಾಂಕುಗಳಿಗೆ ಎಡತಾಕುತ್ತಿದ್ದಾರೆ. ಬ್ಯಾಂಕುಗಳನ್ನು ಹೊರತುಪಡಿಸಿ ಮತ್ತೆಲ್ಲಿಯೂ ಆಧಾರ್ ಕಾರ್ಡ್ ಹಾಗೂ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿಲ್ಲ. ಇದರಿಂದ ನಿತ್ಯವೂ ಬ್ಯಾಂಕುಗಳೆದುರು ಗಂಟೆಗಟ್ಟಲೆ ಕಾದು ಕೂರುವುದು ಸಾಮಾನ್ಯವಾಗಿದೆ.
ಗ್ರಾಮ ಪಂಚಾಯಿತಿ ಕೇಂದ್ರಗಳ ಬೇಜವಾಬ್ದಾರಿ ತನದಿಂದಾಗಿ ಗ್ರಾಮೀಣ ಜನತೆ ತೊಂದರೆ ಎದುರಿಸುತ್ತಿದ್ದಾರೆ. ಆಧಾರ್ ಕೇಂದ್ರ ಆರಂಭಿಸುವ ಸತ್ಯವನ್ನು ಮರೆ ಮಾಚಿ ಕೇವಲ ಪಂಚಾಯಿತಿ ಕೆಲಸಗಳಿಗಷ್ಟೇ ತಮ್ಮ ಕಾರ್ಯ ಸೀಮಿತಗೊಳಿಸಿ ಕೊಂಡು ಗ್ರಾಮ ಪಂಚಾಯಿತಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ನಡೆಸಿವೆ.