Advertisement
ಜನಸಾಮಾನ್ಯರೊಂದಿಗೆ ಸದಾ ಇರುವ ಸಂಸ್ಥೆಗಳಾಗಿ ಗುರುತಿಸಿಕೊಂಡ ಸಹಕಾರ ಸಂಘಗಳು ಕಳೆದ ವರ್ಷ ಕೊರೊನಾ ಸಂದರ್ಭ ಸಾಕಷ್ಟು ಸಮಾಜಮುಖೀ ಚಟುವಟಿಕೆಗಳನ್ನು ಮಾಡುವ ಮೂಲಕ ಜನರ ವಿಸ್ವಾಸಕ್ಕೆ ಪಾತ್ರವಾಗಿವೆ. ಹಾಗೆಯೇ ಈ ಬಾರಿ ಅಪ್ಪಳಿಸಿದ ಕೊರೊನಾ ಎರಡನೇ ಅಲೆಯ ಸಂದರ್ಭ ಸಹಕಾರ ಸಂಘಗಳು ತಮ್ಮಷ್ಟಕ್ಕೆ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿವೆ. ಪ್ರಸ್ತುತ ಲಾಕ್‌ಡೌನ್ ಇರುವುದರಿಂದ ಜನರಿಗೆ ಕೆಲಸ ಕಾರ್ಯಗಳಿಲ್ಲದೆ ಮನೆಯೊಳಗೆ ಕುಳಿತುಕೊಳ್ಳಬೇಕಾದ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ನಿಗದಿಪಡಿಸಿ ವಿತರಿಸುತ್ತಿದ್ದ ಪಡಿತರವನ್ನೇ ನೆಚ್ಚಿಕೊಂಡವರಿದ್ದಾರೆ.
Related Articles
Advertisement
ರೈತರಿಂದ ಖರೀದಿಸಹಕಾರಿ ಸಂಘಗಳು ರೈತರಿಗೆ ತಮ್ಮ ಬೆಳೆ ಬೆಳೆಯಲು ಯಾವುದೇ ರೀತಿಯಲ್ಲೂ ತೊಂದರೆಯಾಗ ಬಾರದೆನ್ನುವ ದೆಸೆಯಲ್ಲಿ ರಸಗೊಬ್ಬರ, ಬಿತ್ತನೆಯ ಬೀಜ, ಮೈಲುತುತ್ತ ಇತ್ಯಾದಿ ಅವಶ್ಯಕ ವಸ್ತುಗಳನ್ನು ಒದಗಿಸುತ್ತಿವೆ. ರೈತರು ಬೆಳೆದ ಪ್ರಮುಖ ಬೆಳೆಗಳಾದ ಅಡಿಕೆ, ಮೆಣಸಿನ ಕಾಳು, ಕೊಕ್ಕೊ, ರಬ್ಬರ್ ಇತ್ಯಾದಿಗಳನ್ನು ಖರೀದಿಸಲಾಗುತ್ತಿದೆ. ಸಾಧ್ಯವಾದಷ್ಟು ರೈತರಿಗೆ ಅವರು ಬೆಳೆ ಮಾರಾಟ ಮಾಡಿದ ದಿನವೇ ಅವರಿಗೆ ಹಣ ಪಾವತಿ ಮಾಡಲೂ ಪ್ರಯತ್ನಿಸಲಾಗುತ್ತಿದೆ. ಅಲ್ಲದೆ ಹಾಪ್‌ಕಾಮ್ಸ್‌ನಂತಹ ಸಂಸ್ಥೆಗಳು ಸ್ಥಳೀಯವಾಗಿ ಬೆಳೆದ ಬೆಳೆಗಳನ್ನು ಖರೀದಿಸುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುತ್ತಿವೆ. ಸಾಲ ವಿತರಣೆ, ನೆರವು ಒದಗಣೆ
ರಾಜ್ಯ ಸರಕಾರವು ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲದ ಅವಧಿಯನ್ನು ಜೂನ್ 30ರ ವರೆಗೆ ಮುಂದುವರಿಸಿ ಸರಕಾರವೇ ಮುಂದೂಡಲ್ಪಟ್ಟ ಅವಧಿಯ ಬಡ್ಡಿಯನ್ನು ತುಂಬುವುದು ರೈತಾಪಿ ವರ್ಗಕ್ಕೆ ವರದಾನವಾಗಿದೆ ಎನ್ನಬಹುದು. ರೈತರು ಬಹುತೇಕ ಮೇ ತಿಂಗಳಲ್ಲಿ ಕೃಷಿ ಸಾಲ ಪಡೆಯುತ್ತಾರೆ. ಇದೀಗ ಜೂನ್ ತಿಂಗಳ ವರೆಗೆ ಸಾಲ ಮರುಪಾವತಿ ಅವಧಿಯನ್ನು ಮುಂದುವರಿಸಿರುವುದು ರೈತರಿಗೆ ಸ್ವಲ್ಪಮಟ್ಟಿಗೆ ಚೇತರಿಕೆ ಕಂಡುಕೊಳ್ಳಲು ಸಹಕಾರಿಯಾಗಿದೆ. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್/ಪಿಎಲ್‌ಡಿ ಬ್ಯಾಂಕ್ ಮುಖಾಂತರ ನೀಡಿದ ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲದ ಮರುಪಾವತಿ ಅವಧಿಯನ್ನು ಮುಂದೂಡಿರುವುದು ಸುಮಾರು 2 ಲಕ್ಷ ರೈತರಿಗೆ ಸುಮಾರು 14 ಕೋ.ರೂ.ಗಳಷ್ಟು ಮೊತ್ತವು ಕಷ್ಟದ ಸಮಯದಲ್ಲಿ ಜೀವದಾನವಾಗಿದೆ. ತಾಲೂಕು ಆಸ್ಪತ್ರೆಗಳು, ಸ್ಥಳೀಯ ಅಂಗನವಾಡಿ ಗಳು ಹಾಗೂ ಅಪೇಕ್ಷಿತರ ಬೇಡಿಕೆಗನುಸಾರ ಸಹಕಾರ ಸಂಘಗಳು ಸಾಮಾಜಿಕ ಬದ್ಧತೆಯಡಿ ಆಕ್ಸಿಮೀಟರ್, ಮಾಸ್ಕ್, ಸ್ಯಾನಿಟೈಸರ್‌ಗಳ ಕೊಡುಗೆಗಳೊಂದಿಗೆ ಆಕ್ಸಿಜನ್ ಘಟಕ ನಿರ್ಮಾಣಕ್ಕೂ ನೆರವಾಗಿದ್ದಾರೆ. ಅಲ್ಲದೆ ಕೊರೊನಾ ವಿರುದ್ಧ ಹೋರಾಡಲು ಸ್ಥಳೀಯ ಸಂಘ-ಸಂಸ್ಥೆಗಳೊಂದಿಗೆ ಸಹಕಾರ ಸಂಘಗಳು ಕೈಜೋಡಿಸಿ ಕೊರೊನಾ ಮಹಾಮಾರಿಯನ್ನು ದೂರೀಕರಿಸಲು ಶ್ರಮಿಸುತ್ತಿವೆ. ಕೋವಿಡ್ ವಾರಿಯರ್ಸ್ ಗಳಾಗಿ ಪರಿಗಣಿಸಿ
ಅವಿಭಜಿತ ದ.ಕ. ಜಿಲ್ಲೆಯ ಆರ್ಥಿಕ ವ್ಯವಸ್ಥೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸರಿಸಮನಾಗಿ ಸಹಕಾರಿ ಸಂಸ್ಥೆಗಳು ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿವೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ಸಹಕಾರಿ ಸಂಸ್ಥೆಯ ಸಿಬಂದಿಗಳು ಕೊರೊನಾ ವಾರಿಯರ್ ಮಾದರಿಯಲ್ಲಿ ತಮ್ಮ ಗ್ರಾಹಕರಿಗೆ ಬ್ಯಾಂಕಿಂಗ್ ಹಾಗೂ ಪಡಿತರ ವಿತರಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸಹಕಾರಿ ಕ್ಷೇತ್ರದ ಸಿಬಂದಿಗಳ ಈ ಅಮೂಲ್ಯ ಸೇವೆಯನ್ನು ಪರಿಗಣಿಸಿ ಸರಕಾರ ಆದ್ಯತೆಯ ಮೇರೆಗೆ ಕೊರೊನಾ ಲಸಿಕೆ ವಿತರಣೆ ಹಾಗೂ ಇತರ ಕೊರೊನಾ ವಾರಿಯರ್ಗಳ ಸೌಲಭ್ಯವನ್ನು ಸಿಬಂದಿಗಳಿಗೆ ವಿಸ್ತರಿಸಲಿ.
-ಯಶ್‌ಪಾಲ್ ಎ. ಸುವರ್ಣ, ನಿರ್ದೇಶಕರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್