ಉಡುಪಿ: ದೇವಸ್ಥಾನಗಳು ಅಭಿವೃದ್ಧಿ ಹೊಂದಿದಲ್ಲಿ ಗ್ರಾಮವು ಅಭಿವೃದ್ಧಿ ಹೊಂದಿದಂತೆ. ಭಕ್ತ ಜನರ ಶ್ರೇಯೋಭಿವೃದ್ಧಿಗೆ ದೇವಸ್ಥಾನಗಳ ಅಭಿವೃದ್ಧಿ ಮಹತ್ವವಾಗಿರುತ್ತದೆ ಎಂದು ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದರು.
ಸೋಮವಾರ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶರ್ವಾಣಿ ಮಂಟಪ ಮತ್ತು ಯಾಗ ಶಾಲೆಯ ಲೋಕಾರ್ಪಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾ ಟಿಸಿ ಆಶೀರ್ವಚನ ನೀಡಿದ ಅವರು, ದುಷ್ಟಜನರನ್ನು ಸಂಹರಿಸಿ, ಜನರ ಕಷ್ಟಗಳನ್ನು ನಿವಾರಿಸಿ ಭಕ್ತ ಜನಕ್ಕೆ ಕೋಟೆಯಂತೆ ಕಾಯುವವಳು ಶ್ರೀ ಮಹಿಷಮರ್ದಿನಿ.
ಬ್ರಹ್ಮಕಲಶ ಆದ ಬಳಿಕವೂ ದೇವಸ್ಥಾನದ ವತಿಯಿಂದ ಸಮಾಜಮುಖೀ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರಿಯುತ್ತಿರುವುದು ಶ್ಲಾಘನೀಯ. ಗ್ರಾಮದ ಕಟ್ಟಕಡೆಯ ವ್ಯಕ್ತಿಯೂ ದೇವಸ್ಥಾನಕ್ಕೆ ನೀಡಿದ ದೇಣಿಗೆ ಇನ್ನೊಂದು ರೀತಿಯಲ್ಲಿ ಕಟ್ಟಕಡೆಯ ವ್ಯಕ್ತಿಗೂ ಸಹಾಯಕ್ಕೆ ಬರಲಿ ಎಂದವರು ಹಾರೈಸಿದರು.
ಶರ್ವಾಣಿ ಮಂಟಪ ಉದ್ಘಾಟಿಸಿದ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ವಿವಿಧ ಜಿಲ್ಲೆ, ರಾಜ್ಯಗಳ ಭಕ್ತರು ಕಡಿಯಾಳಿಗೆ ಬರುತ್ತಿದ್ದಾರೆ. ಸಮಾಜಮುಖೀ ನೆಲೆಯಲ್ಲಿ ಶರ್ವಾಣಿ ಮಂಟಪ ಬಡ ಜನರಿಗೆ ಉಚಿತವಾಗಿ ನೀಡಲಾಗುತ್ತಿದ್ದು, ಮುಂದೊಂದು ದಿನ ಬಹುಬೇಡಿಕೆಯ ಮಂಟಪವಾಗಲಿದೆ ಎಂದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ| ಕಟ್ಟೆ ರವಿರಾಜ ವಿ. ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಾಗೇಶ ಹೆಗ್ಡೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಪಿ. ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ ಕಲ್ಮಾಡಿ, ನಗರಸಭೆ ಸ್ಥಾಯೀ ಸಮಿತಿ ಅಧ್ಯಕ್ಷ ಡಿ. ಬಾಲಕೃಷ್ಣ ಶೆಟ್ಟಿ, ಸದಸ್ಯೆ ಗೀತಾ ಶೇಟ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ನಾಗರಾಜ ಶೆಟ್ಟಿ, ಕೆ. ಮಂಜುನಾಥ್ ಹೆಬ್ಟಾರ್, ರಮೇಶ್ ಶೇರಿಗಾರ್, ಗಣೇಶ್ ನಾಯ್ಕ, ಸಂಧ್ಯಾ ಪ್ರಭು, ಶಶಿಕಲಾ ಭರತ್, ಅರ್ಚಕ ಕೆ. ಶ್ರೀನಿಧಿ ಉಪಾಧ್ಯ ಉಪಸ್ಥಿತರಿದ್ದರು.
ದೇಗುಲದ ತಿರುಗುವ ಮುಚ್ಚಿಗೆ ರೂಪಿಸಿದ ಸುದರ್ಶನ್ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು. ಜೀರ್ಣೋ ದ್ಧಾರ ಸಮಿತಿ ಪ್ರ. ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಸ್ವಾಗತಿಸಿ, ನಿರೂಪಿಸಿದರು. ವ್ಯವಸ್ಥಾಪನ ಸಮಿತಿ ಸದಸ್ಯ ಕಿಶೋರ್ ಸಾಲ್ಯಾನ್ ವಂದಿಸಿದರು.