Advertisement

ಮಹಾನಗರಗಳಿಗೆ ಹಳ್ಳಿಗಳೇ ಮಾದರಿ!: ಕೋವಿಡ್19 ನಿಯಂತ್ರಣದಲ್ಲಿ ಗ್ರಾಮ ಟಾಸ್ಕ್ ಫೋರ್ಸ್‌ ಯಶಸ್ವಿ

01:38 AM Jul 22, 2020 | Hari Prasad |

ಬೆಂಗಳೂರು: ರಾಜ್ಯದ ಎಲ್ಲ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್‌ ಮಟ್ಟದ ಸಮಿತಿಗಳೊಂದಿಗೆ ಬೂತ್‌ ಮಟ್ಟದ ಸಮಿತಿ ರಚಿಸಿ, ಕೋವಿಡ್ 19 ಬಗ್ಗೆ ಜಾಗೃತಿ ಮತ್ತು ಸೋಂಕಿಗೆ ಕಡಿವಾಣ ಹಾಕಲು ಸರಕಾರ ಮುಂದಾಗಿದೆ.

Advertisement

ಈಗಾಗಲೇ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಟಾಸ್ಕ್ ಫೋರ್ಸ್‌ ರಚಿಸಲಾಗಿದೆ. ಇವು ತಮ್ಮ ವ್ಯಾಪ್ತಿಯಲ್ಲಿ ಕೋವಿಡ್ 19 ಜಾಗೃತಿ ಮತ್ತು ನಿಯಂತ್ರಣದಲ್ಲಿ ಯಶಸ್ವಿಯಾಗಿವೆ.

ಇದೇ ಮಾದರಿಯಲ್ಲಿ ರಾಜ್ಯದ 281 ನಗರಗಳ 6,800 ವಾರ್ಡ್‌ಗಳಲ್ಲಿ ಸಮಿತಿ ರಚನೆ ಮಾಡಿ, ಸೋಂಕಿಗೆ ಕಡಿವಾಣ ಹಾಕಲು ಸರಕಾರ ಯೋಜನೆ ರೂಪಿಸಿದೆ.

ಚುನಾವಣೆ ಮತಗಟ್ಟೆ ವ್ಯಾಪ್ತಿಯಲ್ಲಿ ಬೂತ್‌ ಮಟ್ಟದ ಸಮಿತಿ ರಚನೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಬೂತ್‌ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ. ಸಮಿತಿ ರಚಿಸಲು ನಿರ್ದೇಶನ ನೀಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 8 ಸಾವಿರ ಬೂತ್‌ ಮತ್ತು ಉಳಿದೆಡೆ 20,636 ಬೂತ್‌ಗಳಿವೆ. ಈಗಾಗಲೇ 7 ಸಾವಿರ ಬೂತ್‌ ಮಟ್ಟದ ಸಮಿತಿಗಳು ರಚನೆಯಾಗಿವೆ ಎಂದು ಜಿಲ್ಲಾಧಿಕಾರಿಗಳು ಸರಕಾರಕ್ಕೆ ವರದಿ ನೀಡಿದ್ದಾರೆ.

ವಾರ್ಡ್‌ ಮಟ್ಟದ ಸಮಿತಿ
ಎಲ್ಲ ಮನಪಾಗಳಲ್ಲಿ ವಾರ್ಡ್‌ ಮಟ್ಟದ ಸಮಿತಿಗಳಿಗೆ ಆಯಾ ವಾರ್ಡ್‌ನ ಪಾಲಿಕೆ ಸದಸ್ಯರೇ ಅಧ್ಯಕ್ಷರಾಗಿರುತ್ತಾರೆ. ವಾರ್ಡ್‌ನಲ್ಲಿ ಸೋಂಕನ್ನು ತಡೆಯುವ ಕ್ರಮಗಳ ಬಗ್ಗೆ ಈ ಸಮಿತಿ ಸಭೆ ನಡೆಸಲಿದೆ. ವಾರ್ಡ್‌ ವ್ಯಾಪ್ತಿಯ ಸಮಸ್ಯೆಗಳನ್ನು ಅಲ್ಲೇ ಪರಿಹರಿಸಲು ಚರ್ಚೆ ನಡೆಸಲಾಗುತ್ತದೆ. ಸಾಧ್ಯವಾಗದೆ ಇರುವುದನ್ನು ಪಾಲಿಕೆ ಆಯುಕ್ತರ ಹಂತದಲ್ಲಿ ಪರಿಹರಿಸಿಕೊಳ್ಳಲಾಗುತ್ತದೆ.

Advertisement

ಬೂತ್‌ ಮಟ್ಟದ ಸಮಿತಿ
ಬೂತ್‌ ಮಟ್ಟದ ಸಮಿತಿಯಲ್ಲಿ ನಾಲ್ವರನ್ನು ಸೇರಿಸಿಕೊಂಡು ಆರೋಗ್ಯ ಕಾಳಜಿ ವಹಿಸಲು ಸೂಚನೆ ನೀಡಲಾಗಿದೆ. ಅಲ್ಲದೆ ಆಯಾ ವಾರ್ಡ್‌ನ ಕಂಟೈನ್ಮೆಂಟ್‌ ಪ್ರದೇಶಗಳ ಮೇಲೂ ಕಣ್ಣಿಡಲಿದೆ.

ಗ್ರಾ.ಪಂ.ಗಳಲ್ಲಿ ಯಶಸ್ವಿ
ಕೋವಿಡ್ 19 ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರಕಾರವು ಗ್ರಾ.ಪಂ. ಮಟ್ಟದಲ್ಲಿ ಟಾಸ್ಕ್ ಫೋರ್ಸ್‌ ರಚನೆ ಮಾಡಿತ್ತು. ಇದರಲ್ಲಿ ಆಯಾ ಗ್ರಾ.ಪಂ. ಅಧ್ಯಕ್ಷರು ಮತ್ತು ಸದಸ್ಯರು ಸದಸ್ಯರಾಗಿದ್ದರು. ಗ್ರಾಮಗಳ ಯುವ ಸಮೂಹವೂ ಕೈಜೋಡಿಸಿತ್ತು. ಲಾಕ್‌ ಡೌನ್‌ ಸಂದರ್ಭವನ್ನು ಗ್ರಾ.ಪಂ.ಗಳು ಜಾಣ್ಮೆಯಿಂದ ಬಳಸಿಕೊಂಡವು.

ಗ್ರಾಮ ಮಟ್ಟದಲ್ಲಿ ನಗರಕ್ಕಿಂತ ಜನಸಂಖ್ಯೆ ಕಡಿಮೆ ಇರುವುದರಿಂದ ಜಾಗೃತಿ ಸುಲಭವಾಗಿದೆ. ಈಗ ಇದೇ ಮಾದರಿಯನ್ನು ನಗರಗಳಲ್ಲೂ ಅಳವಡಿಸಿಕೊಳ್ಳಲು ಸರಕಾರ ಮುಂದಾಗಿದೆ.

ಗ್ರಾ.ಪಂ.ಗಳಲ್ಲಿ  ಟಾಸ್ಕ್ ಫೋರ್ಸ್‌ ರಚನೆ ಮಾಡಲಾಗಿತ್ತು. ಇದರಿಂದ ಗ್ರಾಮಗಳಲ್ಲಿ ಜಾಗೃತಿ ಮೂಡಿದೆ. ಸೋಂಕು ಪ್ರಮಾಣವೂ ಕಡಿಮೆಯಾಗಿದೆ. ಇದೇ ಮಾದರಿಯಲ್ಲಿ ರಾಜ್ಯದ ಮನಪಾ ವ್ಯಾಪ್ತಿಯಲ್ಲಿ ವಾರ್ಡ್‌ ಮತ್ತು ಬೂತ್‌ ಮಟ್ಟದ ಸಮಿತಿ ರಚಿಸಲಾಗುತ್ತಿದೆ.
– ಎಲ್‌.ಕೆ. ಅತೀಕ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next