Advertisement

ರೂಪಾಯಿ @ 80 : ಇಳಿಯುತ್ತಿರುವುದೇಕೆ ರೂಪಾಯಿ ಮೌಲ್ಯ? ಹೆಚ್ಚು ಬಲಗೊಳ್ಳುತ್ತಿರುವ ಡಾಲರ್‌!

05:35 PM Jul 20, 2022 | Team Udayavani |

ಒಂದು ಕಡೆ ಕೊರೊನಾದಿಂದ ಕುಸಿದಿರುವ ದೇಶದ ಆರ್ಥಿಕತೆ, ಮತ್ತೂಂದು ಕಡೆ ಉಕ್ರೇನ್‌ ಮೇಲಿನ ಆಕ್ರಮಣದಿಂದಾಗಿ ಬೇಡಿಕೆ ಮತ್ತು ಪೂರೈಕೆ ನಡುವಿನ ಅಸಮತೋಲನ… ಈ ಸಂಗತಿಗಳು ಇಡೀ ಜಗತ್ತಿನ ಆರ್ಥಿಕತೆಯನ್ನೇ ನಲುಗಿಸಿಬಿಟ್ಟಿವೆ. ಇದರ ನಡುವೆಯೇ ಅಚ್ಚರಿ ಎಂಬಂತೆ ಅಮೆರಿಕದ ಡಾಲರ್‌ ಚಿಗಿತುಕೊಳ್ಳುತ್ತಿದ್ದು, ಭಾರತವೂ ಸೇರಿದಂತೆ ಉಳಿದೆಲ್ಲ ಕರೆನ್ಸಿಗಳು ಮೌಲ್ಯ ಕಳೆದುಕೊಳ್ಳುತ್ತಿವೆ. ಈಗ ಭಾರತದ ರೂಪಾಯಿ 80ರ ಅಂಚಿಗೆ ಬಂದು ನಿಂತಿದೆ. ಹಾಗಾದರೆ ರೂಪಾಯಿ ಮೌಲ್ಯ ಕುಸಿದರೆ ಆಗುವ ಪರಿಣಾಮಗಳೇನು ಎಂಬ ಕುರಿತ ಒಂದು ಸಮಗ್ರ ನೋಟ ಇಲ್ಲಿದೆ.

Advertisement

ರೂಪಾಯಿ ಮೌಲ್ಯ ಕುಸಿಯುವುದೆಂದರೇನು?
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಪ್ರತಿದಿನವೂ ಡಾಲರ್‌ನ ವಹಿವಾಟು ನಡೆಯುತ್ತದೆ. ಅಲ್ಲಿ ಡಾಲರ್‌ ಅನ್ನು ಖರೀದಿಸಲು ನಾವು ಎಷ್ಟು ರೂಪಾಯಿಯನ್ನು ವ್ಯಯ ಮಾಡುತ್ತೇವೆ ಎಂಬುದರ ಮೇಲೆ ನಮ್ಮ ರೂಪಾಯಿಯ ಮೌಲ್ಯ ನಿರ್ಧಾರವಾಗುತ್ತದೆ. ಅಂದರೆ 2012ರಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಸುಮಾರು 50 ರೂ.ಗಳ ಆಸುಪಾಸಿನಲ್ಲಿತ್ತು. ಆದರೆ 2022ರ ವೇಳೆಗೆ 80ರ ಆಸುಪಾಸಿಗೆ ಬಂದಿದೆ. ಇದರ ಅರ್ಥ 2012ರಲ್ಲಿ ನಾವು ಒಂದು ಡಾಲರ್‌ ಖರೀದಿಗೆ ಸುಮಾರು 50 ರೂ. ವ್ಯಯ ಮಾಡುತ್ತಿದ್ದೆವು. ಈಗ 80 ರೂ. ವ್ಯಯಿಸಬೇಕಾಗಿದೆ. ಪ್ರತೀ ಡಾಲರ್‌ ಖರೀದಿಗೂ ನಾವು ಹೆಚ್ಚೆಚ್ಚು ವ್ಯಯಿಸುತ್ತಿದ್ದು, ಇದಕ್ಕೇ ರೂಪಾಯಿ ಮೌಲ್ಯ ಕಡಿಮೆಯಾಗಿದೆ ಎಂದು ಹೇಳುವುದು.

ನಮಗೆ ಡಾಲರ್‌ ಏಕೆ ಬೇಕು?
ಸದ್ಯ ಜಗತ್ತಿನ ಮಾರುಕಟ್ಟೆಯಲ್ಲಿ ಯಾವುದೇ ಖರೀದಿ ಮತ್ತು ಮಾರಾಟಕ್ಕೆ ಬಳಕೆ ಮಾಡಲಾಗುತ್ತಿರುವ ಕರೆನ್ಸಿ ಎಂದರೆ ಡಾಲರ್‌. ಹೀಗಾಗಿ ನಮ್ಮ ಆಮದು ಮತ್ತು ರಫ್ತಿಗೆ ಡಾಲರ್‌ ಬೇಕೇಬೇಕು. ಈ ವ್ಯವಹಾರ ಮಾಡುವ ಸಲುವಾಗಿ ನಾವು ಡಾಲರ್‌ ಅನ್ನು ಖರೀದಿಸಬೇಕು. ಎಲ್ಲದಕ್ಕಿಂತ ಪ್ರಮುಖವಾಗಿ ರೂಪಾಯಿ ಮೌಲ್ಯ ಇಳಿದು, ಡಾಲರ್‌ ಮೌಲ್ಯ ಹೆಚ್ಚಾದಂತೆ ನಮಗೆ ಮೊದಲಿಗೆ ಪೆಟ್ಟು ಬೀಳುವುದು ತೈಲ ಮಾರುಕಟ್ಟೆಯಲ್ಲಿ. ಅಂದರೆ, ನಾವೀಗ ಕಚ್ಚಾ ತೈಲ ಖರೀದಿಗೆ ಹೆಚ್ಚು ಹಣ ವ್ಯಯಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ರೂಪಾಯಿ ಮೌಲ್ಯ ಇಳಿಯಲು ಕಾರಣವೇನು?
ಕೊರೊನಾ ಆರಂಭವಾದಾಗಿನಿಂದಲೂ ಜಗತ್ತಿನ ಯಾವುದೇ ಆರ್ಥಿಕ ಮಾರುಕಟ್ಟೆಯೂ ಸರಿಯಾಗಿ ನಡೆಯುತ್ತಿಲ್ಲ. ಪ್ರಮುಖವಾಗಿ ಸಮಸ್ಯೆಯಾಗಿರುವುದೇ ಬೇಡಿಕೆ ಮತ್ತು ಪೂರೈಕೆ ಮೇಲೆ. ಅಂದರೆ, ನಮ್ಮಲ್ಲಿ ಕಚ್ಚಾ ತೈಲಕ್ಕೆ ಭಾರೀ ಬೇಡಿಕೆ ಇದೆ. ಇದಕ್ಕೆ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಅಲ್ಲದೆ, ಅಡುಗೆ ಎಣ್ಣೆ ವಿಚಾರದಲ್ಲಿಯೂ ಇದೇ ಸಮಸ್ಯೆಯಾಗಿದೆ. ಭಾರತ ಪ್ರಮುಖವಾಗಿ ಮಲೇಷ್ಯಾ ಮತ್ತು ಉಕ್ರೇನ್‌ ಮೇಲೆ ಸೂರ್ಯಕಾಂತಿ ಎಣ್ಣೆಗಾಗಿ ಅವಲಂಬಿಸಿತ್ತು. ಉಕ್ರೇನ್‌ ಯುದ್ಧದಿಂದಾಗಿ ಏಕಾಏಕಿ ಇದೂ ನಿಂತಿತು. ಈ ಬೆಳವಣಿಗೆಗಳಿಂದಾಗಿ ಭಾರತದಲ್ಲಿ ಹಣದುಬ್ಬರ ಹೆಚ್ಚಾಗಿದೆ. ಅಂದರೆ, ಅಗತ್ಯ ವಸ್ತುಗಳ ದರ ಏರಿಕೆಯಾಗಿದೆ. ಇದನ್ನು ಬಿಟ್ಟರೆ, ಚೀನದಲ್ಲಿನ ಕೊರೊನಾ ಲಾಕ್‌ಡೌನ್‌, ಬೇರೆ ಬೇರೆ ದೇಶಗಳ ಕೇಂದ್ರ ಬ್ಯಾಂಕ್‌ಗಳ ಬಿಗಿ ಹಣಕಾಸು ನೀತಿಯೂ ರೂಪಾಯಿ ಮೌಲ್ಯ ಇಳಿಕೆಗೆ ಕಾರಣವಾಗಿದೆ. ಜತೆಗೆ ಅಮೆರಿಕದಲ್ಲಿ ಫೆಡ ರ ಲ್‌ ಬಡ್ಡಿ ಹೆಚ್ಚಾಗಿದ್ದು, ಇದರಿಂದಾಗಿ ಬಹಳಷ್ಟು ವಿದೇಶಿ ಹೂಡಿಕೆದಾರರು ಭಾರತದ ಮಾರುಕಟ್ಟೆಯಿಂದ ಹಣವನ್ನು ವಾಪಸ್‌ ತೆಗೆಯುತ್ತಿದ್ದಾರೆ. ರೂಪಾಯಿ ಮೌಲ್ಯ ಇಳಿಕೆಗೆ ಇದೂ ಒಂದು ಕಾರಣ ಎಂದು ವಿಶ್ಲೇಷಕರು ಹೇಳುತ್ತಾರೆ. ಒಂದು ಅಂದಾಜಿನ ಪ್ರಕಾರ, 2022-23ರಲ್ಲಿ ವಿದೇಶಿ ಹೂಡಿಕೆದಾರರು ಸುಮಾರು 14 ಬಿಲಿಯನ್‌ ಡಾಲರ್‌ನಷ್ಟು ಹಣವನ್ನು ಭಾರತದ ಮಾರುಕಟ್ಟೆಯಿಂದ ವಾಪಸ್‌ ತೆಗೆದಿದ್ದಾರೆ.

ಡಾಲರ್‌ ಮೌಲ್ಯ ಏರಿಕೆಯಿಂದ ಪ್ರಯೋಜನವಿದೆಯೇ?
ಒಂದು ಲೆಕ್ಕಾಚಾರದಲ್ಲಿ ಹೇಳುವುದಾದರೆ, ಲಾಭವೂ ಇದೆ. ಅಂದರೆ, ನಮ್ಮಿಂದ ಬೇರೆ ದೇಶಕ್ಕೆ ರಫ್ತು ಮಾಡುವ ವಸ್ತುಗಳಿಗೆ ಹೆಚ್ಚಿನ ದರ ಸಿಗುತ್ತದೆ. ಪ್ರಮುಖವಾಗಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಲಾಭ ಸಿಗಲಿದೆ. ಇವರು ಡಾಲರ್‌ನಲ್ಲಿಯೇ ವಹಿವಾಟು ಮಾಡುವುದರಿಂದ, ಇಲ್ಲಿಗೆ ಬಂದಾಗ ರೂಪಾಯಿಗೆ ವರ್ಗಾಯಿಸಿದಾಗ ಹೆಚ್ಚಿನ ಹಣ ಸಿಕ್ಕಂತಾಗುತ್ತದೆ. ಹೀಗಾಗಿಯೇ ಕೆಲವು ಆರ್ಥಿಕ ವಿಶ್ಲೇಷಕರು ಭಾರತದಲ್ಲಿ ವಿದೇಶಿ ಹೂಡಿಕೆದಾರರು ಬಂಡವಾಳ ಹಾಕಲು ಇದೇ ಸಕಾಲ ಎಂದಿದ್ದಾರೆ. ಅಂದರೆ, ಅದರಲ್ಲೂ ಉತ್ಪಾದಕ ವಲಯದಲ್ಲಿ ಹೂಡಿಕೆ ಮಾಡಬಹುದು ಎಂದು ಹೇಳುತ್ತಾರೆ.

Advertisement

ಶ್ರೀಸಾಮಾನ್ಯನ ಮೇಲೇನು ಪರಿಣಾಮ?
– ರೂಪಾಯಿ ಮೌಲ್ಯ ಇಳಿಕೆಯಾಗುವುದರಿಂದ ಜನಸಾಮಾನ್ಯನ ಮೇಲಾಗುವ ಮೊದಲ ಪರಿಣಾಮವೇ ಬೆಲೆ ಏರಿಕೆ. ಅಂದರೆ, ಜನರು ಬಳಕೆ ಮಾಡುವ ಬಹುತೇಕ ವಸ್ತುಗಳು ವಿದೇಶದಿಂದ ಆಮದಾಗುತ್ತವೆ. ನಮಗೆ ಮಾರಾಟ ಮಾಡುವವರು, ಹೆಚ್ಚು ಬೆಲೆ ನೀಡಿ, ವಿದೇಶದಿಂದ ಖರೀದಿ ಮಾಡುತ್ತಾರೆ. ಈ ಹೊರೆಯನ್ನು ಅವರು ಜನರ ಮೇಲೆ ಹಾಕುತ್ತಾರೆ.

– ಇನ್ನು ತೈಲ, ಅಡುಗೆ ಅನಿಲದ ದರವೂ ಹೆಚ್ಚಾಗುತ್ತದೆ. ಏಕೆಂದರೆ ಭಾರತ ಬಳಕೆ ಮಾಡುವ ಒಟ್ಟಾರೆ ತೈಲೋತ್ಪನ್ನ ವಸ್ತುಗಳಲ್ಲಿ ಶೇ.85ರಷ್ಟನ್ನು ವಿದೇಶದಿಂದಲೇ ತರಿಸಿಕೊಳ್ಳುವುದು.

– ಕಾರು ಸೇರಿದಂತೆ ವಾಹನಗಳ ಬೆಲೆಯೂ ಹೆಚ್ಚಾಗುತ್ತದೆ. ಕಾರು ನಿರ್ಮಾಣಕ್ಕೆ ಬಳಕೆ ಮಾಡುವ ಹೆಚ್ಚಿನ ವಸ್ತುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತೇವೆ.

– ಮೊಬೈಲ್‌ ಫೋನ್‌ಗಳು ಸೇರಿದಂತೆ ಇತರ ಎಲೆಕ್ಟ್ರಾನಿಕ್‌ ವಸ್ತುಗಳ ದರವೂ ಹೆಚ್ಚಾಗುತ್ತದೆ.

– ವಿಮಾನಕ್ಕೆ ಬಳಕೆ ಮಾಡುವ ತೈಲದ ದರವೂ ಹೆಚ್ಚುವುದರಿಂದ ವಿದೇಶಿ ಪ್ರಯಾಣವೂ ತುಟ್ಟಿಯಾಗುತ್ತದೆ.

– ಹೊರದೇಶಕ್ಕೆ ಪ್ರವಾಸಕ್ಕೆ ಹೋಗುವುದು ಕಷ್ಟಕರವಾಗಲಿದೆ. ಆದರೆ ನಮಗಿಂತ ಕಡಿಮೆ ಮೌಲ್ಯದ ಕರೆನ್ಸಿ ಇರುವ ದೇಶಗಳಿಗೆ ಹೋಗಬಹುದು.

ಹೆಚ್ಚು ಬಲಗೊಳ್ಳುತ್ತಿರುವ ಡಾಲರ್‌!

2021ರ ಅಂತ್ಯದಿಂದಲೂ ಡಾಲರ್‌ ಎದುರು ಬೇರೆ ಬೇರೆ ದೇಶಗಳ ಕರೆನ್ಸಿ ಮೌಲ್ಯ ಇಳಿಕೆಯಾಗುತ್ತಲೇ ಇದೆ. ಅಂದರೆ, 2021ರ ಡಿಸೆಂಬರ್‌ 31ರಿಂದ ಇಲ್ಲಿವರೆಗೆ ಮೆಕ್ಸಿಕೋ, ನೈಜೀರಿಯಾ, ವಿಯೆಟ್ನಾಂ, ಕೆನಡಾ, ಸಿಂಗಾಪುರ ದೇಶಗಳ ಕರೆನ್ಸಿ ಮೌಲ್ಯ ಶೇ.5ರಷ್ಟು ಕಡಿಮೆಯಾಗಿದೆ.

ಇನ್ನು ಇಂಡೋನೇಷ್ಯಾ, ಚೀನ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯ, ಸ್ವಿಜರ್ಲೆಂಡ್‌, ಭಾರತ, ಕೊಲಂಬಿಯಾ, ಥಾಯ್ಲೆಂಡ್‌, ಪಿಲಿಪ್ಪಿನ್ಸ್‌, ನ್ಯೂಜಿಲೆಂಡ್‌ ದೇಶಗಳ ಕರೆನ್ಸಿ ಮೌಲ್ಯ ಡಾಲರ್‌ ಎದುರು ಶೇ.10ರಷ್ಟು ಕುಸಿತವಾಗಿದೆ.

ಜೆಕ್‌ ರಿಪಬ್ಲಿಕ್‌, ಇಸ್ರೇಲ್‌, ದಕ್ಷಿಣ ಕೊರಿಯಾ, ಯುರೋ ಝೋನ್‌, ಡೆನ್ಮಾರ್ಕ್‌, ಬ್ರಿಟನ್‌, ನಾರ್ವೆ, ಚಿಲಿ, ಸ್ವೀಡನ್‌ ದೇಶಗಳ ಕರೆನ್ಸಿ ಮೌಲ್ಯ ಶೇ.15ರಷ್ಟು ಇಳಿಕೆಯಾಗಿದೆ. ಪೋಲೆಂಡ್‌, ಈಜಿಪ್ಟ್, ಜಪಾನ್‌, ಹಂಗೇರಿ, ಅರ್ಜೆಂಟೀನಾ ದೇಶಗಳ ಕರೆನ್ಸಿ ಶೇ.20ರಷ್ಟು ಕಡಿಮೆಯಾಗಿದೆ.

ಶೇ.90ರಷ್ಟು ವಹಿವಾಟು
ಜಗತ್ತಿನ ಶೇ.90ರಷ್ಟು ವಹಿವಾಟು ಡಾಲರ್‌ ಮೂಲಕವೇ ನಡೆಯುತ್ತಿದೆ. ಕೊರೊನಾ ಸಾಂಕ್ರಾಮಿಕಕ್ಕೂ ಮುನ್ನ ಪ್ರತಿವರ್ಷ ಸುಮಾರು 6 ಟ್ರಿಲಿಯನ್‌ ಡಾಲರ್‌ನಷ್ಟು ವಹಿವಾಟು ಆಗುತ್ತಿತ್ತು. ಇದರಲ್ಲಿ ಪ್ರವಾಸಿಗರು ಬಳಕೆ ಮಾಡುವ ಕ್ರೆಡಿಟ್‌ ಕಾರ್ಡ್‌ನಿಂದ ಉದ್ಯಮಿಗಳು ಹೂಡಿಕೆ ಮಾಡುವ ಹಣವೂ ಸೇರಿತ್ತು. ಜಗತ್ತಿನ ಅತ್ಯಂತ ಸುರಕ್ಷಿತ ಕರೆನ್ಸಿ ಎಂದೇ ಕರೆಯಲ್ಪಡುವ ಡಾಲರ್‌ನ ಏರಿಕೆ, ಒಂದು ರೀತಿಯಲ್ಲಿ ಹೂಡಿಕೆದಾರರಿಗೆ ಸ್ಥಿರತೆ ತಂದು ಕೊಟ್ಟಿದೆ ಎಂದು ಅಮೆರಿಕದ ಉದ್ಯಮಿಗಳು ಹೇಳುತ್ತಾರೆ. ಆದರೆ ಉಳಿದ ದೇಶಗಳ ಉದ್ಯಮಿಗಳು ಹೇಳುವ ಪ್ರಕಾರ, ಇದರಿಂದಾಗಿ ಮಾರುಕಟ್ಟೆಗಳ ಮೇಲೆ ದೊಡ್ಡ ಹೊಡೆತವೇ ಬೀಳಬಹುದು. ಏಕೆಂದರೆ ಕರೆನ್ಸಿ ಮೌಲ್ಯ ವನ್ನು ಕಾಪಿಟ್ಟುಕೊಳ್ಳುವ ಸಲುವಾಗಿ ಆಯಾ ದೇಶಗಳು ಬಡ್ಡಿದರವನ್ನು ಏರಿಕೆ ಮಾಡುತ್ತಾ ಹೋಗುತ್ತವೆ. ಆಗ ಪ್ರಗತಿ ಮೇಲೆ ಅಡ್ಡ ಪರಿಣಾಮ ಬೀರಬಹುದು.

ಶೇ.90ರಷ್ಟು ವಹಿವಾಟು
ಜಗತ್ತಿನ ಶೇ.90ರಷ್ಟು ವಹಿವಾಟು ಡಾಲರ್‌ ಮೂಲಕವೇ ನಡೆಯುತ್ತಿದೆ. ಕೊರೊನಾ ಸಾಂಕ್ರಾಮಿಕಕ್ಕೂ ಮುನ್ನ ಪ್ರತಿವರ್ಷ ಸುಮಾರು 6 ಟ್ರಿಲಿಯನ್‌ ಡಾಲರ್‌ನಷ್ಟು ವಹಿವಾಟು ಆಗುತ್ತಿತ್ತು. ಇದರಲ್ಲಿ ಪ್ರವಾಸಿಗರು ಬಳಕೆ ಮಾಡುವ ಕ್ರೆಡಿಟ್‌ ಕಾರ್ಡ್‌ನಿಂದ ಉದ್ಯಮಿಗಳು ಹೂಡಿಕೆ ಮಾಡುವ ಹಣವೂ ಸೇರಿತ್ತು. ಜಗತ್ತಿನ ಅತ್ಯಂತ ಸುರಕ್ಷಿತ ಕರೆನ್ಸಿ ಎಂದೇ ಕರೆಯಲ್ಪಡುವ ಡಾಲರ್‌ನ ಏರಿಕೆ, ಒಂದು ರೀತಿಯಲ್ಲಿ ಹೂಡಿಕೆದಾರರಿಗೆ ಸ್ಥಿರತೆ ತಂದು ಕೊಟ್ಟಿದೆ ಎಂದು ಅಮೆರಿಕದ ಉದ್ಯಮಿಗಳು ಹೇಳುತ್ತಾರೆ. ಆದರೆ ಉಳಿದ ದೇಶಗಳ ಉದ್ಯಮಿಗಳು ಹೇಳುವ ಪ್ರಕಾರ, ಇದರಿಂದಾಗಿ ಮಾರುಕಟ್ಟೆಗಳ ಮೇಲೆ ದೊಡ್ಡ ಹೊಡೆತವೇ ಬೀಳಬಹುದು. ಏಕೆಂದರೆ ಕರೆನ್ಸಿ ಮೌಲ್ಯ ವನ್ನು ಕಾಪಿಟ್ಟುಕೊಳ್ಳುವ ಸಲುವಾಗಿ ಆಯಾ ದೇಶಗಳು ಬಡ್ಡಿದರವನ್ನು ಏರಿಕೆ ಮಾಡುತ್ತಾ ಹೋಗುತ್ತವೆ. ಆಗ ಪ್ರಗತಿ ಮೇಲೆ ಅಡ್ಡ ಪರಿಣಾಮ ಬೀರಬಹುದು.

Advertisement

Udayavani is now on Telegram. Click here to join our channel and stay updated with the latest news.

Next