Advertisement

ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ: ದೂರದೃಷ್ಟಿ ಅಗತ್ಯ

11:07 PM Sep 22, 2022 | Team Udayavani |

ಅಮೆರಿಕ ಮತ್ತು ಬ್ರಿಟನ್‌ನ ಕೇಂದ್ರೀಯ ಬ್ಯಾಂಕ್‌ಗಳಾಗಿರುವ ಫೆಡರಲ್‌ ರಿಸರ್ವ್‌ ಮತ್ತು ಬ್ಯಾಂಕ್‌ ಆಫ್ ಇಂಗ್ಲೆಂಡ್‌ ಬಡ್ಡಿ ದರಗಳನ್ನು ಹೆಚ್ಚಿಸಿರುವ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಸೃಷ್ಟಿಯಾದ ಕಂಪನದ ಪರಿ­ಣಾಮ ಭಾರತದ ಕರೆನ್ಸಿಯಾಗಿರುವ ರೂಪಾಯಿಯ ಮೌಲ್ಯವು ಡಾಲರ್‌ ಎದುರು ಸಾರ್ವಕಾಲಿಕ ಕುಸಿತವನ್ನು ಕಂಡಿದೆ. ಗುರುವಾರ ದಿನಾಂತ್ಯಕ್ಕೆ ರೂಪಾಯಿ ಡಾಲರ್‌ ಎದುರು 6 ತಿಂಗಳುಗಳಲ್ಲೇ ಗರಿಷ್ಠ 90 ಪೈಸೆಗ­ಳಷ್ಟು ಕುಸಿತ ಕಂಡು 80.86 ರೂ. ಗೆ ತನ್ನ ವ್ಯವಹಾರವನ್ನು ಕೊನೆಗೊಳಿಸಿದೆ.

Advertisement

ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಹಣದುಬ್ಬರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಲ್ಲಿನ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿದರವನ್ನು ಹೆಚ್ಚಿಸುವ ನಿರ್ಧಾರವನ್ನು ಪ್ರಕಟಿಸಿದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಯಿತು. ಇದರ ಪರಿಣಾಮವಾಗಿ ಭಾರತೀಯ ಷೇರು ಮಾರುಕಟ್ಟೆ ಸತತ ಎರಡನೇ ದಿನವೂ ಹಿನ್ನಡೆ ಅನುಭವಿಸಿತು. ಇದರ ಪರಿಣಾಮ ಡಾಲರ್‌ ಎದುರು ರೂಪಾಯಿಯ ಮೌಲ್ಯ ಮತ್ತಷ್ಟು ಕುಸಿತವನ್ನು ದಾಖಲಿಸಿತು. ಐಎಂಎಫ್ ಮತ್ತು ವಿಶ್ವಬ್ಯಾಂಕ್‌, ಅಮೆರಿಕ ಹಾಗೂ ಐರೋಪ್ಯ ರಾಷ್ಟ್ರಗಳು ಮುಂದಿನ ದಿನಗಳಲ್ಲಿ ಅದರಲ್ಲೂ 2023ರಲ್ಲಿ 1970ರ ಬಳಿಕ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದ ಆರ್ಥಿಕ ಹಿಂಜರಿಕೆಯನ್ನು ಕಾಣಲಿದ್ದು ಅಭಿವೃದ್ಧಿಶೀಲ ಮತ್ತು ಹಿಂದುಳಿದ ದೇಶಗಳ ಮೇಲೆ ಗಂಭೀರ ಪರಿಣಾಮವನ್ನು ಬೀರಲಿದೆ ಎಂದು ವಾರದ ಹಿಂದೆಯಷ್ಟೇ ಎಚ್ಚರಿಕೆ ನೀಡಿದ್ದವು. ಹೆಚ್ಚುತ್ತಿರುವ ಹಣದುಬ್ಬರ, ಇಂಧನ ಬೆಲೆಯಲ್ಲಿನ ಏರಿಳಿತಗಳು, ರಷ್ಯಾ-ಉಕ್ರೇನ್‌ ಯುದ್ಧ, ಕೊರೊನಾ ಹೊಡೆತದಿಂದ ಹೊರಬರಲು ಚೀನ ಇನ್ನೂ ಒದ್ದಾಟ ನಡೆಸುತ್ತಿರು­ವುದು… ಇವೇ ಮೊದಲಾದ ಕಾರಣಗಳಿಂದಾಗಿ ಜಾಗತಿಕವಾಗಿ ಆರ್ಥಿಕತೆಯ ಮೇಲೆ ಬಲುದೊಡ್ಡ ಹೊಡೆತ ಬಿದ್ದಿದೆ.

ಕೆಲವೊಂದು ದೇಶಗಳಲ್ಲಿ ಆಹಾರದ ಅಭಾವ ತಲೆ­ದೋರಿದ್ದು ತೀವ್ರ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಹಣದುಬ್ಬರ­ದಿಂದ ಪಾರಾಗಲು ಅಮೆರಿಕ ಮತ್ತು ಬ್ರಿಟನ್‌ನ ಕೇಂದ್ರೀಯ ಬ್ಯಾಂಕ್‌ಗಳು ಗುರುವಾರದಂದು ಬಡ್ಡಿದರಗಳನ್ನು ಪರಿಷ್ಕರಿಸಿ ಆದೇಶ ಹೊರಡಿ­ಸಿದ್ದೇ ಅಲ್ಲದೆ ಬೆಂಕಿಗೆ ತುಪ್ಪ ಸುರಿಯಲೋ ಎಂಬಂತೆ ಮುಂದಿನ ದಿನಗ­ಳಲ್ಲಿ ಭಾರೀ ಪ್ರಮಾಣದಲ್ಲಿ ಬಡ್ಡಿದರಗಳನ್ನು ಹೆಚ್ಚಿಸುವ ಸುಳಿವನ್ನು ನೀಡಿವೆ.

ವಿಶ್ವಬ್ಯಾಂಕ್‌ನ ಎಚ್ಚರಿಕೆಯ ಹೊರತಾಗಿಯೂ ಭಾರತದ ಆರ್ಥಿಕ­ತೆಯು ಮುಂಬರುವ ಜಾಗತಿಕ ಆರ್ಥಿಕ ಹಿಂಜರಿಕೆಯನ್ನು ಎದುರಿಸಲು ಸಮರ್ಥವಾಗಿದೆ ಎಂದು ಆರ್ಥಿಕ ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಗುರುವಾರದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಲ್ಲಿ ಭಾರತೀಯ ಕರೆನ್ಸಿಯ ಮೌಲ್ಯ ಕುಸಿಯುತ್ತಿರುವುದು ಮತ್ತು ದೇಶದ ಆರ್ಥಿಕತೆಯನ್ನು ಜಾಗತಿಕ ಆರ್ಥಿಕತೆಯಿಂದ ಪ್ರತ್ಯೇಕಿಸಿ ನೋಡಲು ಸಾಧ್ಯವಾಗದು ಎಂಬ ಮುನ್ನೆಚ್ಚರಿಕೆಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಕೇಂದ್ರ ಸರಕಾರಕ್ಕೆ ರವಾನಿಸಿದಂತಿದೆ.

ಷೇರು ಮಾರುಕಟ್ಟೆ ಮತ್ತು ರೂಪಾಯಿ ಮೌಲ್ಯದ ಕುಸಿತದಿಂದಾಗಿ ಭವಿಷ್ಯದ ಬಗೆಗೆ ಅಷ್ಟೇನೂ ಭಯಭೀತರಾಗುವ ಆವಶ್ಯಕತೆ ಇಲ್ಲವಾದರೂ ಡಾಲರ್‌ ಎದುರು ರೂಪಾಯಿ ಸ್ಥಿರತೆ ಕಾಯ್ದು­ಕೊಳ್ಳಬೇಕು ಮತ್ತು ದೇಶದಲ್ಲಿ ಹಣದುಬ್ಬರವನ್ನು ನಿಯಂತ್ರಣದಲ್ಲಿಡಲೇಬೇಕು. ರೂಪಾಯಿ ಮೌಲ್ಯ ಕುಸಿತ ತಡೆಯಲು ಆರ್‌ಬಿಐ ನಿರಂತರವಾಗಿ ವಿದೇಶಿ ವಿನಿಮ ಯವನ್ನು ವ್ಯಯಿಸುತ್ತಲೇ ಬಂದಿದೆ. ಇದು ಅಷ್ಟೇನೂ ಫ‌ಲಪ್ರದವಾಗಿಲ್ಲ. ಹೀಗಾಗಿ ದೂರದೃಷ್ಟಿತ್ವದ ಕ್ರಮಗಳತ್ತ ಗಮನಹರಿಸುವುದು ಸೂಕ್ತ.

Advertisement
Advertisement

Udayavani is now on Telegram. Click here to join our channel and stay updated with the latest news.

Next