Advertisement

ಓಡುತಾ ದೂರಾ ದೂರ…

04:32 PM Apr 28, 2018 | |

“ವಿಮಾನ ಸಂಚಾರಕ್ಕಾಗಿ ಪ್ರತ್ಯೇಕ ರಸ್ತೆ ಬೇಕು. ಅಷ್ಟೇ ಅಲ್ಲ, ಅದು ಅತ್ಯುತ್ಕೃಷ್ಟ ಗುಣಮಟ್ಟದ್ದಾಗಿರಬೇಕು’ ಇದು ವಿಮಾನವನ್ನು ಆವಿಷ್ಕರಿಸಿದ ಸಹೋದರರಲ್ಲೊಬ್ಬರಾದ ಆರ್ವಿಲ್‌ ರೈಟ್‌ 1919ರಲ್ಲಿ ಹೇಳಿದ ಮಾತು. ಜಗತ್ತಿನ ಪ್ರಪ್ರಥಮ ರನ್‌ವೇ ಹುಟ್ಟಿದ್ದು ಹೀಗೆ. ರನ್‌ವೇ ಎಂದರೆ ಅದು ಬರೀ ರಸ್ತೆಯಲ್ಲ. ಅಲ್ಲಿ ನೋಡುವವರ ಕಣ್ಣಿಗೆ ವಿಮಾನ ಹಾರುವುದು, ಇಳಿಯುವುದು ಕಾಣುತ್ತದೆಯಷ್ಟೆ.

Advertisement

ಆದರೆ, ಅತ್ಯಾಧುನಿಕ ತಂತ್ರಜ್ಞಾನಗಳು ಕಾರ್ಯಾಚರಿಸುತ್ತಿರುವುದು, ಸುತ್ತಮುತ್ತ ಬಣ್ಣ ಬಣ್ಣದ ಪುಟ್ಟ ಟ್ಯೂಬ್‌ಲೈಟ್‌ಗಳನ್ನು ಹಿಡಿದ ಸಮವಸ್ತ್ರಧಾರಿಗಳು ಸಂಜ್ಞೆ ನೀಡುವುದು ಅಷ್ಟು ಪಕ್ಕನೆ ಗೋಚರವಾಗುವುದಿಲ್ಲ. ಕತ್ತಲಿನಲ್ಲಿ ರನ್‌ವೇ ಅಕ್ಕಪಕ್ಕಗಳಲ್ಲಿ ಬಲುºಗಳು ಹೊತ್ತಿಕೊಂಡು ಪೈಲಟ್‌ಗಳಿಗೆ ದಾರಿತೋರುತ್ತವೆ. ಆದರೆ ಮಂಜು, ಮಳೆಯ ಸಂದರ್ಭಗಳಲ್ಲಿ ರನ್‌ವೇ ಕಾಣಿಸದೇಹೋಗಬಹುದು. ಅಂಥ ಸಂದರ್ಭಗಳಲ್ಲಿ ಕಂಪ್ಯೂಟರ್‌ ಆಧಾರಿತ ಲ್ಯಾಂಡಿಂಗ್‌ಗಾಗಿ ವಿಶೇಷ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತೆ. 

ಇಷ್ಟು ಗುಟ್ಟನ್ನು ಹೊತ್ತ ರನ್‌ ವೇ ಮೇಲೆ ಎಂದಾದರೂ ನಡೆದಾಡಿದ್ದೀರಾ? ಯೋಚಿಸುವುದಕ್ಕೇ ರೋಮಾಂಚನವಾದರೆ, ಇನ್ನು ಆ ಕನಸು ನನಸಾದರೆ ಹೇಗಿರುತ್ತೆ ಊಹಿಸಿಕೊಳ್ಳಿ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ ವೇ ಸಮೀಪ ಸಾರ್ವಜನಿಕರಿಗೆ ಪ್ರದೇಶ ನಿಷಿದ್ಧ. ಆದರೆ ಮೇ 8ರಂದು, ಮಧ್ಯಾಹ್ನ 12.45ರಿಂದ ವಿಮಾನ ನಿಲ್ದಾಣ ಸ್ಥಗಿತಗೊಳ್ಳಲಿದೆ. ಆ ಅರ್ಧ ದಿನ ರನ್‌ವೇ ಮೇಲೆ ವಿಮಾನಗಳು ಓಡುವುದಿಲ್ಲ. ಬದಲಾಗಿ ಮ್ಯಾರಥಾನ್‌ ಸ್ಪರ್ಧಿಗಳು ಓಡಲಿದ್ದಾರೆ! 

ಓಡುವುದು ಏಕೆ ಗೊತ್ತಾ?: ನ್ಯೂಯಾರ್ಕ್‌ನ ಜೆ.ಎಫ್.ಕೆ, ಲಂಡನ್‌ನ ಹೀಥ್ರೂನಂಥ ಪ್ರಸಿದ್ಧ ವಿಮಾನ ನಿಲ್ದಾಣಗಳ ರನ್‌ ವೇಗಳಲ್ಲಿ ಮ್ಯಾರಥಾನ್‌ ನಡೆಸುವ ಪರಿಪಾಠ ತುಂಬಾ ಹಳೆಯದು. ಆದರೆ, ಭಾರತದಲ್ಲಿ ಇದೇ ಮೊತ್ತ ಮೊದಲ ಬಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮ್ಯಾರಥಾನ್‌ ಹಮ್ಮಿಕೊಳ್ಳಲಾಗಿದೆ. ಆ ಮೂಲಕ ದೇಶದಲ್ಲಿ ಮೊದಲಿಗನಾಗಿ ಹೊರಹೊಮ್ಮುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯೇ ಸರಿ.

ಅಂದ ಹಾಗೆ ಈ ಮ್ಯಾರಥಾನ್‌ ಅನ್ನು ಆಯೋಜಿಸುತ್ತಿರುವುದರ ಹಿಂದೊಂದು ವಿಶೇಷವಿದೆ. ದೇಶದ 3ನೇ ಅತ್ಯಂತ ಬ್ಯುಸಿ ನಿಲ್ದಾಣ ಎಂಬ ಖಾತಿಗೆ ಪಾತ್ರವಾಗಿರುವ ನಮ್ಮ ಬೆಂಗಳೂರು ವಿಮಾನ ನಿಲ್ದಾಣ ಪ್ರಾರಂಭವಾಗಿ ಮೇ 8 ಕ್ಕೆ 10 ವರ್ಷ ತುಂಬುತ್ತದೆ. ಅದರ ಪ್ರಯುಕ್ತ ಆಡಳಿತ ಮಂಡಳಿ “ರವ್‌ವೇ 10ಕೆ’ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. 10 ವರ್ಷ ಪೂರ್ತಿಯಾದ ಹಿನ್ನೆಲೆಯಲ್ಲಿ ಸ್ಪರ್ಧಿಗಳು 10 ಕಿ.ಮೀ. ಓಡಲಿದ್ದಾರೆ.

Advertisement

ಪಾಲ್ಗೊಳ್ಳುವುದು ಹೇಗೆ?: ಈ ಮ್ಯಾರಥಾನ್‌ನಲ್ಲಿ ಭಾಗವಹಿಸಲಿಚ್ಚಿಸುವವರು ಮಾಡಬೇಕಾಗಿರುವುದಿಷ್ಟೆ. ತಮ್ಮ ಹೆಸರನ್ನು ಆನ್‌ಲೈನ್‌ನಲ್ಲಿ ನೋಂದಾಯಿಸಬೇಕು. ಅಲ್ಲಿ ಕೇಳಲಾಗಿರುವ ವಿವರ ಮತ್ತು ದಾಖಲಾತಿಗಳನ್ನು ಒದಗಿಸಬೇಕು. ಬಂದ ಅರ್ಜಿಗಳಲ್ಲಿ 100 ಮಂದಿಯನ್ನು ಸಂಘಟಕರು ಆರಿಸಲಿದ್ದಾರೆ. ಆಯ್ಕೆಯಾದ ಸ್ಪರ್ಧಿಗಳಿಗೆ ವಿಶೇಷ ಎಂಟ್ರಿ ಪಾಸ್‌ಗಳನ್ನು ನೀಡಲಾಗುವುದು. ಸ್ಪರ್ಧಿಗಳನ್ನು ಹೊರತುಪಡಿಸಿ ಯಾರಿಗೂ ಈ ಕಾರ್ಯಕ್ರಮಕ್ಕೆ ಪ್ರವೇಶವಿಲ್ಲ. ಹೀಗಾಗಿ ಸ್ಪರ್ಧಿಗಳು ತಮ್ಮೊಡನೆ ಸ್ನೇಹಿತರು ಅಥವಾ ಕುಟುಂಬ ಸದಸ್ಯರನ್ನು ಕರೆತರುವ ಹಾಗಿಲ್ಲ. ಅಂದಹಾಗೆ, 18 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಈ ಓಟದಲ್ಲಿ ಪಾಲ್ಗೊಳ್ಳಬಹುದು.

ಕಂಡೀಷನ್ಸ್‌ ಅಪ್ಲೈ
– ವಿಮಾನ ನಿಲ್ದಾಣ ಅತಿ ಸೂಕ್ಷ್ಮವಾದ ಪ್ರದೇಶವಾಗಿರುವುದರಿಂದ ಅಲ್ಲಿ ತುಂಬಾ ಕಟ್ಟುನಿಟ್ಟಾಗಿ ನಿಬಂಧನೆಗಳನ್ನು ಪಾಲಿಸಬೇಕಾಗುತ್ತದೆ.
– ಸ್ಪರ್ಧಿಗಳು ಸಂಘಟಕರು ನೀಡುವ ಉಡುಗೆಯನ್ನೇ ಧರಿಸಬೇಕು.
– ನಿಯಮಗಳಿಗೆ ವಿರುದ್ಧವಾಗಿ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಬಾರದು.
– ಸ್ಪರ್ಧಿಗಳನ್ನು ಒಳಬಿಡುವ ಅಧಿಕಾರ ಕೇಂದ್ರ ಭದ್ರತಾ ದಳದವರಿಗೆ ಮಾತ್ರ ಸೇರಿದ್ದು. ಭದ್ರತೆಯ ಕಾರಣದಿಂದ ಅವರು ಸ್ಪರ್ಧಿಯ ಪ್ರವೇಶಕ್ಕೆ ಅನುಮತಿ ನಿರಾಕರಿಸಿದರೆ, ಅದಕ್ಕೆ ಸಂಘಟಕರು ಜವಾಬ್ದಾರರಾಗಿರುವುದಿಲ್ಲ.
– ಸ್ಪರ್ಧಿಗಳು ವೈದ್ಯರಿಂದ ವೈದ್ಯಕೀಯ ದೃಢೀಕರಣ ಪತ್ರ ತರುವುದು ಕಡ್ಡಾಯ.
– ನಿಬಂಧನೆಗಳನ್ನು ಸ್ಥೂಲವಾಗಿ ಇಲ್ಲಿ ತಿಳಿದುಕೊಳ್ಳಬಹುದು: goo.gl/hxTprp 

* ಹೆಸರು ನೋಂದಾಯಿಸಲು “goo.gl/4BEXGC’ ಜಾಲತಾಣಕ್ಕೆ ಭೇಟಿ ನೀಡಿ
* ನೋಂದಣಿಗೆ ಕಡೆಯ ದಿನಾಂಕ ಏಪ್ರಿಲ್‌ 30
* ಓಟದ ದಿನಾಂಕ ಮೇ 8, 2018
* ಓಟದ ಸಮಯ ಮಧ್ಯಾಹ್ನ 12.45ರಿಂದ 2.15

ರನ್‌ವೇ ಅಳತೆ
-13,123 ಅಡಿ ಉದ್ದ
-148 ಅಡಿ ಅಗಲ

* ಹವನ

Advertisement

Udayavani is now on Telegram. Click here to join our channel and stay updated with the latest news.

Next