ನವದೆಹಲಿ:ತಮ್ಮ ಮದುವೆಗೆ ಕುಟುಂಬ ಸದಸ್ಯರ ವಿರೋಧ ಇದ್ದಿರುವ ಹಿನ್ನೆಲೆಯಲ್ಲಿ ತಮಗೆ ರಕ್ಷಣೆ ನೀಡಬೇಕೆಂದು ಕೋರಿ ಕೋರ್ಟ್ ಮೆಟ್ಟಿಲೇರಿದ ನವ ವಧುವರನಿಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿರುವ ಘಟನೆ ನಡೆದಿದೆ.
ಕುತೂಹಲಕಾರಿ ವಿಷಯ ಎಂಬಂತೆ, ತಮ್ಮ ಮದುವೆಗೆ ಕುಟುಂಬಸ್ಥರ ವಿರೋಧವಿದ್ದು, ತಮಗೆ ರಕ್ಷಣೆ ಕೊಡಲು ಸೂಚನೆ ನೀಡಬೇಕೆಂದು ಕೋರಿ ಕೋರ್ಟ್ ಮೆಟ್ಟಿಲೇರಿದ್ದ ವೇಳೆ ನ್ಯಾಯಾಧೀಶರು ವಿವಾಹದ ಫೋಟೋ ಗಮನಿಸಿದ ಸಂದರ್ಭದಲ್ಲಿ ಇಬ್ಬರೂ ಮಾಸ್ಕ್ ಧರಿಸಿಲ್ಲ ಎಂಬುದನ್ನು ಪತ್ತೆಹಚ್ಚಿದ್ದರು.
ದಂಪತಿ ದೂರಿನಲ್ಲಿ ಲಗತ್ತಿಸಿದ್ದ ಫೋಟೋಗಳನ್ನು ಹೈಕೋರ್ಟ್ ಪೀಠದ ಜಸ್ಟೀಸ್ ಹರಿ ಪಾಲ್ ವರ್ಮಾ ಅವರು, ಮಾಸ್ಕ್ ಧರಿಸದಿರುವುದನ್ನು ಕಂಡು ಹತ್ತು ಸಾವಿರ ರೂಪಾಯಿ ದಂಡ ವಿಧಿಸಿರುವುದಾಗಿ ವರದಿ ವಿವರಿಸಿದೆ.
ದೂರಿನ ಅನ್ವಯ ಫೋಟೋ 4ರಲ್ಲಿ ಮದುವೆ ನಡೆದ ವೇಳೆ ದೂರುದಾರರು ಹಾಗೂ ಇತರರು ಮಾಸ್ಕ್ ಧರಿಸಿಲ್ಲ. ಕೋವಿಡ್ 19 ಸಂದರ್ಭದಲ್ಲಿ ಮಾಸ್ಕ್ ಅಗತ್ಯ. ಈ ಹಿನ್ನೆಲೆಯಲ್ಲಿ ದೂರುದಾರರು 15 ದಿನದೊಳಗೆ ಹೋಶಿಯಾರ್ ಪುರ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹತ್ತು ಸಾವಿರ ರೂಪಾಯಿ ಠೇವಣಿ ಇಡುವಂತೆ ನ್ಯಾಯಾಧೀಶರು ಆದೇಶ ನೀಡಿದ್ದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಠೇವಣಿ ಇಡುವ ಈ ಹಣವನ್ನು ಹೋಶಿಯಾರ್ ಪುರ್ ಜನರಿಗೆ ಮಾಸ್ಕ್ ನೀಡುವ ಉದ್ದೇಶಕ್ಕೆ ಬಳಸಬೇಕು ಎಂದು ಹೈಕೋರ್ಟ್ ಪೀಠ ಹೇಳಿದೆ.