Advertisement

ಹೈಟೆಕ್‌ ಶೈಲಿಯ ‘ರೋಟರಿ ಬ್ಲಿಡ್‌ ಮೊಬೈಲ್‌’ಗೆ ಇಂದು ಚಾಲನೆ

09:45 AM Nov 06, 2017 | Team Udayavani |

ಮಹಾನಗರ: ರಕ್ತದಾನ ಮಾಡಲು ಆಸಕ್ತರಿರುವ ದಾನಿಗಳಿಂದ ರಕ್ತ ಸಂಗ್ರಹ ಮಾಡಲು ರೋಟರಿ ಮಂಗಳೂರು ನೇತೃತ್ವದಲ್ಲಿ ಸಿದ್ದಪಡಿಸಿದ ಅತ್ಯಾಧುನಿಕ ಹಾಗೂ ಸುಸಜ್ಜಿತ ‘ರೋಟರಿ ಬ್ಲಡ್‌ ಮೊಬೈಲ್‌’ ಬಸ್‌ಗೆ ನ.6ರಂದು ಮಂಗಳೂರಿನಲ್ಲಿ ಚಾಲನೆ ದೊರೆಯಲಿದೆ.

Advertisement

ರೋಟರಿ ಮಂಗಳೂರು ವತಿಯಿಂದ ಆಯೋಜಿತವಾಗಿರುವ ಈ ಬಸ್‌ ಯೋಜನೆಗೆ ರೋಟರಿ ಫೌಂಡೇಶನ್‌ ಗ್ಲೋಬಲ್‌ ಗ್ರ್ಯಾಂಟ್‌ನಡಿ ರೋಟರಿ ಕ್ಲಬ್‌ ಆಫ್‌ ಶೆರೇರ್‌ವಿಲ್ಲೆ ಸಹಯೋಗ ನೀಡಿದೆ. ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಸಿದ್ದಪಡಿಸಲಾಗಿರುವ ನೂತನ ಬಸ್‌ ಸೇವೆಯನ್ನು ದ.ಕ. ರೆಡ್‌ಕ್ರಾಸ್‌ ಸಂಸ್ಥೆಗೆ ಕೊಡುಗೆಯಾಗಿ ನೀಡುವ ಕಾರ್ಯಕ್ರಮ ನ.6ರಂದು ಬೆಳಗ್ಗೆ 10 ಗಂಟೆಗೆ ಸಂತ ಅಲೋಶಿಯಸ್‌ ಕಾಲೇಜಿನ ಲೊಯೋಲಾ ಸಭಾಂಗಣದ ಮುಂಭಾಗದಲ್ಲಿ ನಡೆಯಲಿದೆ.

ಜಿಲ್ಲಾಧಿಕಾರಿ ಹಾಗೂ ರೆಡ್‌ಕ್ರಾಸ್‌ ಜಿಲ್ಲಾ ಅಧ್ಯಕ್ಷ ಶಶಿಕುಮಾರ್‌ ಸೆಂಥಿಲ್‌ ಅವರು ನೂತನ ಬಸ್‌ ಸೇವೆಯನ್ನು ಪಡೆದುಕೊಳ್ಳಲಿದ್ದಾರೆ. ಡಾ| ಜಿ.ಶಂಕರ್‌ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಪ್ರಸ್ತುತ ರೆಡ್‌ಕ್ರಾಸ್‌ ವತಿಯಿಂದ ರಕ್ತದಾನ ಶಿಬಿರ ನಡೆಸುವುದಾದರೆ, ರೆಡ್‌ ಕ್ರಾಸ್‌ ವೈದ್ಯರು, ಸಿಬಂದಿ ಜತೆಗೆ ನಿಗದಿತ ಪ್ರದೇಶಕ್ಕೆ ಹೋಗುತ್ತಾರೆ.ಅಲ್ಲಿ ಬೆಡ್‌ ಹಾಕುವ ಮೂಲಕ ದಾನಿಗಳಿಂದ ರಕ್ತ ಸಂಗ್ರಹಿಸಿ, ಅದನ್ನು ಐಸ್‌ ಬಾಕ್ಸ್‌ನಲ್ಲಿಟ್ಟು ಲೇಡಿಗೋಶನ್‌ನ ರೆಡ್‌ಕ್ರಾಸ್‌ ಬ್ಲಿಡ್‌ ಬ್ಯಾಂಕ್‌ನಲ್ಲಿ ತಪಾಸಣೆ ನಡೆಸಿ, ಸಂಗ್ರಹ ಮಾಡಲಾಗುತ್ತಿದೆ. ಆದರೆ ರೋಟರಿ ಬ್ಲಡ್‌ ಮೊಬೈಲ್‌ ಬಂದ ಮೇಲೆ ಇಂತಹ ಪ್ರಮೇಯವಿಲ್ಲ. ಯಾಕೆಂದರೆ, ಬಸ್‌ ನಿಗದಿತ ಸ್ಥಳಕ್ಕೆ ತೆರಳಿ ರಕ್ತ ಸಂಗ್ರಹಣೆ ಮಾಡಲಿದೆ.

ಬಸ್‌ನಲ್ಲಿ ಸಂಗ್ರಹ ಮಾಡಿಟ್ಟಿರುವ ರಕ್ತವನ್ನು ಮಂಗಳೂರಿನ ರಕ್ತನಿಧಿ ಕೇಂದ್ರಕ್ಕೆ ತರಿಸಲಾಗುತ್ತದೆ. ಆ ಬಳಿಕ ರಕ್ತದ ತಪಾಸಣೆ ಹಾಗೂ ಪರಿಶೀಲನೆ ನಡೆಸಿ, ರಕ್ತನಿಧಿ ಕೇಂದ್ರದಲ್ಲಿ ಮುಂದಿನ ಬಳಕೆಗೆ ಉಪಯೋಗಿಸಲಾಗುತ್ತದೆ. 

Advertisement

ಬಸ್‌ನಲ್ಲೇನಿದೆ?
ರಾಜ್ಯದಲ್ಲಿಯೇ ಅಪರೂಪವೆನಿಸುವ ಹೈಟೆಕ್‌ ಶೈಲಿಯ ಈ ಬಸ್‌ನಲ್ಲಿ ಸುರಕ್ಷಿತವಾಗಿ ರಕ್ತದಾನ ಮಾಡಲು ಎಲ್ಲ ವ್ಯವಸ್ಥೆ ರೂಪಿಸಲಾಗಿದೆ. ಏಕಕಾಲದಲ್ಲಿ 4 ಮಂದಿ ಈ ಬಸ್‌ನಲ್ಲಿ ರಕ್ತದಾನ ಮಾಡಬಹುದಾಗಿದೆ. 8 ಜನರು ರಕ್ತ ನೀಡಲು ಕಾಯುವ ಸ್ಥಳಾವಕಾಶವೂ ಬಸ್‌ನಲ್ಲಿದೆ. ಇದು ಗ್ರಾಮಾಂತರ ಭಾಗಕ್ಕೆ ತೆರಳಿ ರಕ್ತದಾನದ ಬಗ್ಗೆ ಮಾಹಿತಿ ಹಾಗೂ ಶಿಬಿರ ನಡೆಸಲು ಕೂಡ ಸಾಧ್ಯವಾಗಲಿದೆ. ಹವಾನಿಯಂತ್ರಿತ ವ್ಯವಸ್ಥೆ ಇದರಲ್ಲಿದೆ. ಸಂಗ್ರಹಣೆ ಮಾಡಿದ ರಕ್ತ ಇಡಲು ಸುಸಜ್ಜಿತ ವಿಭಾಗಗಳು ಇರಲಿವೆ. ನುರಿತ ವೈದ್ಯರ ತಂಡ ಹಾಗೂ ಸಿಬಂದಿ ಬಸ್‌ನ ಒಳಗಡೆ ಕಾರ್ಯನಿರ್ವಹಿಸಲಿದ್ದಾರೆ ಎಂದು ರೋಟರಿ ಪ್ರಮುಖರಾದ ಯತೀಶ್‌ ಬೈಕಂಪಾಡಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next