ಮೈಸೂರು: ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮಿಸಿ ಹುತಾತ್ಮರಾಗಿರುವ ಯೋಧರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದೊಂದಿಗೆ ಸೈನಿಕರಿಗಾಗಿ ಸೈನಿಕರೊಂದಿಗೆ ಓಟ ಎಂಬ ಓಟವೊಂದು ಭಾನುವಾರ ನಡೆಯಿತು.
ಹುತಾತ್ಮ ಯೋಧರ ಕುಟುಂಬದವರಿಗೆ ಸಹಕಾರ ನೀಡಲು ಮುಂಬೈನ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಸುಂದರೇಶ್ ದೇಶಾದ್ಯಂತ ಈ ಓಟವನ್ನು ಕೈಗೊಂಡಿದ್ದು, ಈ ಹಿನ್ನೆಲೆ ನಗರಕ್ಕಾಮಿಸಿದ್ದ ಸುಂದರೇಶ್ ಅವರ ಸಮ್ಮುಖದಲ್ಲಿ ಮೈಸೂರು ರನ್ನರ್ ಸಂಘಟನೆ ವತಿಯಿಂದ 22ನೇ ಓಟ ಕಾರ್ಯಕ್ರಮವನ್ನು ನಡೆಸಲಾಯಿತು.
ನಗರದ ಮಾನಸಗಂಗೋತ್ರಿಯ ಕ್ಲಾಕ್ ಟವರ್‌ನಿಂದ ಮುಂಜಾನೆಯೇ ಆರಂಭಗೊಂಡ ಓಟ 42 ಕಿ.ಮೀ. ನಡೆಯಿತು. ಓಟದಲ್ಲಿ ಹೆಜ್ಜೆ ಹಾಕಿದ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಸುಂದರೇಶ್, ಮಾನಸಗಂಗೋತ್ರಿ, ಕುಕ್ಕರಹಳ್ಳಿ ಕೆರೆ ರಸ್ತೆ ಮಾರ್ಗವಾಗಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಕೆ.ಆರ್.ವೃತ್ತ, ಸಯ್ನಾಜಿ ರಾವ್ ರಸ್ತೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಓಡಿದರು.
ಇವರೊಂದಿಗೆ ನಗರದಲ್ಲಿರುವ ನಿವೃತ್ತ ಯೋಧರು, ನಾಗರಿಕರು ಮತ್ತು ಮೈಸೂರು ರನ್ನರ್ ಸಂಘಟನೆ ಸದಸ್ಯರು ಸಾಥ್ ನೀಡಿದರು. ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಸುಂದರೇಶ್ ಮಾತನಾಡಿ, ದೇಶಾದ್ಯಂತ 50 ನಗರಗಳಲ್ಲಿ ಮ್ಯಾರಾಥಾನ್ ಸಂಘಟಿಸಿ 50 ಲಕ್ಷ ರೂ.ಗಳನ್ನು ಸಂಗ್ರಹಿಸಿ ಸಂಕಷ್ಟದಲ್ಲಿರುವ ಹುತಾತ್ಮ ಯೋಧರ ಕುಟುಂಬದವರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸೈನಿಕರಿಗಾಗಿ ಸೈನಿಕರಿಂದ ಓಟ ನಡೆಸಲಾಗುತ್ತಿದೆ.
50ನೇ ವರ್ಷಕ್ಕೆ ಕಾಲಿಡುತ್ತಿರುವ ತಾವು ಇದನ್ನು ಅರ್ಥಪೂರ್ಣವಾಗಿ ಆಚರಿಸುವ ಹಿನ್ನೆಲೆ ತಮ್ಮ ಕುಟುಂಬದವರ ಸಹಕಾರದಿಂದ ದೇಶಾದ್ಯಂತ ಓಟಕೈ ಗೊಳ್ಳಲಾಗಿದೆ. ಅದರಂತೆ ಈಗಾಗಲೇ ಪುಣೆ, ಡೆಹ್ರಾಡೂನ್, ಮಣಿಪುರ, ಅಮೃತಸರ ಹೀಗೆ ನಾನಾ ಕಡೆಗಳಲ್ಲಿನ ಓಟದಲ್ಲಿ ಭಾಗವಹಿಸಿದ್ದು, ಮೈಸೂರಿನ ನಂತರ ಸಿಕ್ಕಿಂ, ಕಾರ್ಗರ್, ವೆಲ್ಲೂರುಗಳಲ್ಲಿ ಮ್ಯಾರಥಾನ್ ನಡೆಸಿ, ಸೈನಿಕರ ತ್ಯಾಗ, ಸೇವೆಯನ್ನೂ ತಿಳಿಸುತ್ತಿದ್ದೇನೆ ಎಂದರು.
ಓಟದಲ್ಲಿ ಮೈಸೂರು ರನ್ನರ್ನ ಅಜಿತ್ ತಾಂಡೂರ್, ವಿಜಯ್, ರಂಗಯ್ಯ, ನವೀನ್ ಸೋಲಂಕಿ, ಪ್ರಜ್ವಲ್ ಪ್ರಸಾದ್, ಅನಿಲ್, ಅಭಿ, ಡಾ.ಸುಜಿತ ಶೆಟ್ಟಿ, ಉಷಾ ಹೆಗಡೆ, ಶ್ರೀಧರ್, ದೀಪಕ್ ಪಟೇಲ್, ಶ್ರೀರಾಮ್ ಇತರರು ಇದ್ದರು.