ಕನಕಪುರ: ಲೋಕಸಭಾ ಚುನಾವಣೆಯಲ್ಲಿ ಸಂವಿಧಾನ ನೀಡಿರುವ ಹಕ್ಕನ್ನು ಪ್ರತಿಯೊಬ್ಬರು ಚಲಾಯಿಸುವ ಮೂಲಕ ಸರ್ಕಾರವನ್ನು ರಚಿಸಬೇಕಾಗಿದೆ. ಚುನಾವಣೆಯಲ್ಲಿ ಶೇ.100ರಷ್ಟು ಮತದಾನ ಮಾಡುವ ಮೂಲಕ ಚುನಾವಣೆಯನ್ನು ಯಶಸ್ವಿಗೊಳಿಸಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಎನ್.ಆರ್. ಉಮೇಶ್ ಹೇಳಿದರು.
ನಗರದ ನೂತನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಸ್ವೀಪ್ ಕಮಿಟಿ ಹಾಗೂ ತಾಲೂಕಿನ ವಿವಿಧ ಇಲಾಖೆಯಿಂದ ನಡೆದ ಮತದಾನ ಜಾಗೃತಿ ಜಾಥದಲ್ಲಿ ಮಾತನಾಡಿದ ಅವರು,
ಮತದಾನದ ಮೌಲ್ಯವನ್ನು ಅರಿತು ಮತದಾನ ಮಾಡಬೇಕು. ಇದು ಭಾರತ ದೇಶದ ಭವಿಷ್ಯವನ್ನು ನಿರ್ಧರಿಸಲಿದೆ. ಅಂತಹ ಅಧಿಕಾರವನ್ನು ಸಾಮಾನ್ಯರಿಗೆ ನೀಡಲಾಗಿದೆ.
ಮತದಾರರು ದೇಶದ ಅಭಿವೃದ್ಧಿ ಹರಿಕಾರರನ್ನು ಚುನಾಯಿಸಿ, ದೇಶದ ಚುಕ್ಕಾಣಿಯನ್ನು ಅವರ ಕೈಗೆ ನೀಡಿ ಸದೃಢ ಭಾರತವನ್ನು ಕಟ್ಟುವ ಜವಾಬ್ದಾರಿ ನಿಮ್ಮದಾಗಿದೆ. ಅದಕ್ಕಾಗಿ ಯಾರು ಮತದಾನವನ್ನು ತಪ್ಪಿಸಿಕೊಳ್ಳದಂತೆ ಮತಕೇಂದ್ರಕ್ಕೆ ಬಂದು ಮತದಾನ ಮಾಡಬೇಕು ಎಂದರು.
ಮತದಾನಕ್ಕೆ ಅಡ್ಡಿ ಕಾನೂನು ಉಲ್ಲಂಘನೆ: ಇಇಒ ಶಿವರಾಮು ಮಾತನಾಡಿ, ನಮ್ಮನ್ನಾಳುವವರನ್ನು ನಿರ್ಧರಿಸುವವರು ನಾವೇ. ಅಂತಹ ಅವಕಾಶ ನಮ್ಮದಾಗಿದೆ. ನಮ್ಮನ್ನು ಯಾರು ದೇಶದಲ್ಲಿ ಪ್ರತಿನಿಧಿಸಬೇಕು ಎಂಬ ಅಧಿಕಾರವನ್ನು ನಾಗರಿಕರಿಗೆ ನೀಡಲಾಗಿದೆ. ಇದಕ್ಕೆ ಯಾರು ಅಡ್ಡಿ ಮಾಡುವಂತಿಲ್ಲ, ಬಲವಂತ ಮಾಡುವಂತಿಲ್ಲ, ಮತದಾನಕ್ಕೆ ಅಡ್ಡಿ ಮಾಡಿದರೆ ಅದು ಕಾನೂನು ಉಲ್ಲಂಘನೆಯಾಗಲಿದೆ ಎಂದು ತಿಳಿಸಿದರು.
ಚುನಾವಣೆಯಲ್ಲಿ ಮತದಾನಕ್ಕೆ ಆಗುತ್ತಿರುವ ಅಡ್ಡಿಯನ್ನು ಸರಿಪಡಿಸಿಕೊಳ್ಳಲು ಚುನಾವಣೆ ಆ್ಯಪ್ ನೀಡಿದೆ. ಚುನಾವಣೆಯ ಸಮಸ್ಯೆಗಳನ್ನು ಇದರಲ್ಲಿ ಸಮೂದಿಸಿದರೆ, ಅಂತಹ ಸಮಸ್ಯೆಗಳನ್ನು ಬಗೆಹರಿಸಿ ಚುನಾವಣೆ ನಡೆಸಲು ಆಯೊಗ ಸರ್ವ ಸನ್ನದ್ದವಾಗಿದೆ. ಅದಕ್ಕಾಗಿ ಮತದಾನದ ಜಾಗೃತಿ ಮೂಡಿಸಲು ಇಂತಹ ಜಾಥಗಳನ್ನು ಮಾಡಲಾಗುತ್ತಿದೆ ಎಂದರು.
ಮತದಾನ ಜಾಗೃತಿಗೆ ಜಾಥ: ಮತದಾನದ ಪ್ರಯೋಜನದ ನಾಮ ಫಲಕಗಳನ್ನು ಹಿಡದು ವಿವಿಧ ಇಲಾಖೆಯ ಸಿಬ್ಬಂದಿ ಹಾಗೂ ನೂರಾರು ಮಂದಿ ಬೈಕ್‌ರ್ಯಾಲಿ ಮತ್ತು ಎತ್ತಿನಗಾಡಿ ಜಾಥ ನಡೆಸಿದರು. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮತದಾನ ಜಾಗೃತಿ ಮೂಡಿಸುವ ಬರಹಗಳನ್ನು ಪ್ರದರ್ಶಿಸುವ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಮೂಡಿಸಿದರು.