ಬೀದರ: “ಬಡವರ ಬಂಧು’ ಯೋಜನೆಗೆ ನ.22ರಂದು ರಾಜ್ಯಾದ್ಯಂತ ಚಾಲನೆ ನೀಡಲಾಗುತ್ತಿದ್ದು, ಬೀದಿ ವ್ಯಾಪಾರಿಗಳಿಗೆ ಬಡ್ಡಿ ರಹಿತವಾಗಿ 2 ಸಾವಿರದಿಂದ 10 ಸಾವಿರ ರೂ.ವರೆಗೆ ಸಾಲ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಬೀದಿ ವ್ಯಾಪಾರಿಗಳ ಸಮಸ್ಯೆಗಳನ್ನು ತಿಳಿದುಕೊಂಡಿದ್ದೇನೆ. ಸಣ್ಣ ವ್ಯಾಪಾರಕ್ಕೆ ಶೇ.10ರಿಂದ 20ರವರೆಗೆ ಬಡ್ಡಿಯಲ್ಲಿ ಹಣ ತಂದು ವ್ಯಾಪಾರ ಮಾಡುವ ವ್ಯಾಪಾರಸ್ಥರ ಕೈ ಹಿಡಿಯುವ ನಿಟ್ಟಿನಲ್ಲಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ.
ಯಾವುದೇ ಖಾತ್ರಿ ಅಥವಾ ಬಡ್ಡಿ ಇಲ್ಲದ ಸಾಲ ಇದ್ದಾಗಿದ್ದು, ಸಾಲ ಪಡೆಯುವ ಜನರು ಪ್ರಾಮಾಣಿಕವಾಗಿ ಮರುಪಾವತಿ ಮಾಡಬೇಕು. ಸೂಕ್ತ ಸಮಯಕ್ಕೆ ಮರು ಪಾವತಿ ಮಾಡದಿದ್ದರೆ ಯೋಜನೆಯ ಉದ್ದೇಶ ಹಾಳಾಗುತ್ತದೆ. ಯೋಜನೆ ಮುಂದುವರಿಸಲು ಕಷ್ಟವಾಗುತ್ತದೆ ಎಂದರು.
ಸಾಲ ಮನ್ನಾ ಯೋಜನೆ ಅನುಷ್ಠಾನಕ್ಕೆ ಯಾವುದೇ ಸಮಸ್ಯೆ ಇಲ್ಲ. ನವೆಂಬರ್ ಅಂತ್ಯದೊಳಗೆ 1200 ಕೋಟಿ ರೂ.ಬಿಡುಗಡೆ ಮಾಡಲಾಗುವುದು. ಈ ಕುರಿತು ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸಂಪೂರ್ಣ ಮಾಹಿತಿ ಇಲ್ಲ. ಬರುವ ಜೂನ್‌ವರೆಗೆ ಸಹಕಾರಿ ಬ್ಯಾಂಕ್‌ಗಳಿಗೆ ಸಂಬಂಧಿಸಿದಂತೆ 9,450 ಕೋಟಿ ರೂ. ಬಿಡುಗಡೆ ಮಾಡಲಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ 6500 ಕೋಟಿ ರೂ. ಸಾಲಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲಾಗುತ್ತಿದೆ. ಮಾಹಿತಿ ಪಡೆಯುವುದಕ್ಕಾಗಿಯೇ ಪ್ರತ್ಯೇಕ ಘಟಕ ಆರಂಭಿಸಲಾಗಿದೆ. ಸಾಲ ಮನ್ನಾ ಅನುಷ್ಠಾನಕ್ಕೆ ಹಣಕಾಸು ಸಮಸ್ಯೆ ಇಲ್ಲ. ಮುಂದಿನ ಬಜೆಟ್‌ಗೆ ಮೊದಲೇ ಅಗತ್ಯ ಹಣಕಾಸು ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ ಎಂದರು.
ರಾಜ್ಯದಲ್ಲಿ 100 ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲಾಗಿದೆ. ಬರದಿಂದಾಗಿ 16,000 ಕೋಟಿ ರೂ.ಬೆಳೆ ಹಾನಿಯಾಗಿದ್ದು, ಈ ಕುರಿತು ಕೇಂದ್ರಕ್ಕೆ ಮಾಹಿತಿ ನೀಡಲಾಗಿದೆ. ನ.17ರಂದು ಕೇಂದ್ರದ ತಂಡ ರಾಜ್ಯಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಲಿದೆ. ಇದಾದ ನಂತರ ಪರಿಹಾರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಅತಿವೃಷ್ಟಿ ಪೀಡಿತ ಜಿಲ್ಲೆಗಳಿಗೆ ಕೇಂದ್ರ ಸರ್ಕಾರದಿಂದ ಯಾವುದೇ ಹೆಚ್ಚುವರಿ ಅನುದಾನ ಬಂದಿಲ್ಲ. ಬರಪೀಡಿತ ತಾಲೂಕುಗಳಿಗೆ ಕುಡಿಯುವ ನೀರು ಮತ್ತಿತರ ವ್ಯವಸ್ಥೆಗಾಗಿ ತಲಾ 50 ಲಕ್ಷ ರೂ.ಬಿಡುಗಡೆ ಮಾಡಲಾಗಿದೆ ಎಂದರು.