ಮೈಸೂರು: ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ ಎಂದರೆ ಅದು ಬಿಜೆಪಿ. ಈ ದಾಖಲೆ ಮುರಿಯಲು ಮತ್ತೆ ಸದಸ್ಯತ್ವ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ ಹೇಳಿದರು. ಮೈಸೂರು ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದಲ್ಲಿ ಮತ್ತೂಮ್ಮೆ ಬಿಜೆಪಿ ಸದಸ್ಯತ್ವ ಅಭಿಯಾನ ಪ್ರಾರಂಭ ಮಾಡಿದೆ. ಕಳೆದ ಬಾರಿಯೂ ಅಭಿಯಾನ ಕೈಗೊಂಡು ವಿಶ್ವದಾಖಲೆ ಮಾಡಿತ್ತು. ಈ ಬಾರಿ ಮತ್ತೂಮ್ಮೆ ಆ ದಾಖಲೆ ಮುರಿಯಲು ಸದಸ್ಯತ್ವ ಅಭಿಯಾನವನ್ನು ಬೂತ್ ಮಟ್ಟದಲ್ಲಿ ಮಾಡಲು ಅಣಿಯಾಗಿದ್ದೇವೆ. ಅಭಿಯಾನ ಯಶಸ್ವಿಗೆ ಎಲ್ಲರೂ ಶ್ರಮವಹಿಸಬೇಕಿದೆ ಎಂದರು.
ದೊಡ್ಡ ಪ್ರಮಾಣದಲ್ಲಿ ಜನರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಜೊತೆಗೆ ಯುವಕರು ಬಿಜೆಪಿಗೆ ಸೇರಲು ಉತ್ಸುಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸದಸ್ಯತ್ವ ನೋಂದಣಿ ಅಭಿಯಾನ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ ಬೂತ್‌ನಲ್ಲಿಯೂ 100 ಮಂದಿ ಸದಸ್ಯರು ನೋಂದಾಯಿಸಿಕೊಳ್ಳುವಂತೆ ಮಾಡಬೇಕಿದೆ ಎಂದು ಹೇಳಿದರು.
ಈ ಬಾರಿ ಮೈಸೂರಿನಲ್ಲಿ 2 ಲಕ್ಷ ಮಂದಿ ಸದಸ್ಯರನ್ನು ನೋಂದಾಯಿಸುವ ಗುರಿ ಇದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತಮಗೆ ವಹಿಸಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಕೆಳಮಟ್ಟದಿಂದ ಅಭಿಯಾನ ನಡೆಸಬೇಕಿದೆ. ಯುವಕರನ್ನು ಒಳಗೊಂಡಂತೆ ಎಲ್ಲರನ್ನೂ ಸದಸ್ಯತ್ವ ಮಾಡಬೇಕೆಂದರು.
ಕಾರ್ಯಾಗಾರದಲ್ಲಿ ಶಾಸಕ ಎಸ್.ಎ.ರಾಮದಾಸ್, ಬಿಜೆಪಿ ನಗರಾಧ್ಯಕ್ಷ ಡಾ.ಮಂಜುನಾಥ್, ವಿಧಾನ ಪರಿಷತ್ತಿನ ಮಾಜಿ ಸದಸ್ಯ ತೋಂಟದಾರ್ಯ, ಮುಖಂಡರಾದ ಫಣೀಶ್, ರಾಜೇಂದ್ರ, ಸುರೇಶ್ ಬಾಬು, ಸತೀಶ್, ಪಾಲಿಕೆ ಸದ್ಯಸರಾದ ಮಂಜುನಾಥ್, ಶಿವಕುಮಾರ್ ಮತ್ತಿತರರಿದ್ದರು.