Advertisement

ಹೊನ್ನಾವರ ಮತ್ತೆ ಉದ್ವಿಗ್ನ

06:00 AM Dec 15, 2017 | |

ಹೊನ್ನಾವರ: ವಾರದಿಂದ ಹೊತ್ತಿ ಉರಿದಿದ್ದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಗುರುವಾರ ಬೆಳಗ್ಗೆ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಮಾಗೋಡ ಸಮೀಪದ ಕುಚ್ಚಡಿ ಬಳಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ, ಕಟ್ಟಡವೊಂದಕ್ಕೆ ಬೆಂಕಿ ಹಚ್ಚಿದ್ದಾರೆ.

Advertisement

ಹೊನ್ನಾವರ ನಗರದಿಂದ 35 ಕಿಮೀ ದೂರ ಶರಾವತಿ ಎಡದಂಡೆಯಲ್ಲಿರುವ ಮಾಗೋಡ ಕೊಡ್ಲಗದ್ದೆಯಿಂದ ಮುಂಜಾನೆ 7 ಗಂಟೆಗೆ ಸುಮಾರಿಗೆ 8ನೇ ತರಗತಿಯ ವಿದ್ಯಾರ್ಥಿನಿ ಕಾವ್ಯಾ ಶೇಖರ ನಾಯ್ಕ ಶಾಲೆಗೆ ಹೊರಟಿದ್ದಳು. 2 ಕಿಮೀ ದೂರ ಸಾಗುವಷ್ಟರಲ್ಲಿ ರಸ್ತೆಗೆ ಹೊಂದಿದ ಕಾಡಿನಲ್ಲಿ ಗಿಡಗಳು ಅಲ್ಲಾಡಿದಂತಾಗಿದೆ. ಸೊಪ್ಪು ಕತ್ತರಿಸುತ್ತಿರಬೇಕು ಎಂದುಕೊಳ್ಳುತ್ತಿದ್ದಂತೆ ಮರೆಯಿಂದ ಇಬ್ಬರು ಹಿಂದಿನಿಂದ ಬಂದು ಮುಖಕ್ಕೆ ಬಟ್ಟೆ ಹಾಕಿ ಕೈ ಹಿಡಿದುಕೊಂಡಿದ್ದಾರೆ. 

ತಪ್ಪಿಸಿಕೊಳ್ಳಲು ಕೊಸರಾಡಿದಾಗ ಕೈಗೆ ಹರಿತವಾದ ಆಯುಧದಿಂದ ಗಾಯ ಮಾಡಿದ್ದಾರೆ. ಹಿಂದಿನಿಂದ ಬೈಕ್‌ ಶಬ್ದ ಕೇಳಿದಾಗ ಕೈ ಬಿಟ್ಟು ಓಡಿ ಹೋಗಿದ್ದಾರೆ. ನಂತರ ಓಡುತ್ತಲೇ ಸಂಬಂಧಿಕರ ಮನೆಗೆ ಬಂದು ವಿಷಯ ತಿಳಿಸಿದಾಗ ಪೊಲೀಸರಿಗೆ ಸಂದೇಶ ನೀಡಿ ಬಾಲಕಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸುದ್ದಿ ಹರಡುತ್ತಿದ್ದಂತೆ ಮತ್ತೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕಲ್ಲು ತೂರಾಟ, ನಡೆಸಿ ಪ್ರತಿಭಟನೆ ನಡೆಸಲಾಗಿದೆ. ಮಾಗೋಡ ಅರಣ್ಯ ಪ್ರದೇಶಗಳಲ್ಲಿನ ಹಸಿ ಮರಗಳನ್ನು ಧರೆಗುರುಳಿಸಲಾಗಿದೆ. ಸ್ವಯಂ ಘೋಷಿತ ಬಂದ್‌ ಮುಂದುವರೆದಿದೆ. ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

62 ಜನರಿಗೆ ಮಧ್ಯಂತರ ಜಾಮೀನು
ಶಿರಸಿ:
ಪರೇಶ್‌ ಮೇಸ್ತ ಕೊಲೆ ಪ್ರಕರಣದ ಬಳಿಕ ಶಿರಸಿಯಲ್ಲಿ ನಡೆದ ಬಂದ್‌ ಹಾಗೂ ನಂತರದ ಘಟನೆಗಳಿಗೆ ಸಂಬಂಧಿ ಸಿದಂತೆ ಬಂಧಿ ಸಿ ಧಾರವಾಡ ಕಾರಾಗೃಹಕ್ಕೆ ಕಳಿಸಲಾಗಿದ್ದ 62 ಜನರಿಗೆ ಮಧ್ಯಂತರ ಜಾಮೀನು ಲಭಿಸಿದೆ. ಬಂಧಿ ತರಾಗಿದ್ದ 62 ಜನರಿಗೆ ಶಿರಸಿ 1ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಾಂತವೀರ ಶಿವಪ್ಪ ಗುರುವಾರ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ನ್ಯಾಯವಾದಿ ಸದಾನಂದ ಭಟ್ಟ, 34 ಹಿರಿಯ ವಕೀಲರ ಸಹಕಾರದೊಂದಿಗೆ ಒಟ್ಟು 150ಕ್ಕೂ ಹೆಚ್ಚು ವಕೀಲರ ಜೊತೆಗೂಡಿ ಜಾಮೀನು ಮನವಿ ಸಲ್ಲಿಸಿ, ಮಧ್ಯಂತರ ಜಾಮೀನಿಗೆ ಮನವಿ ಮಾಡಿದ್ದೆವು. ಹಿರಿಯ ವಕೀಲರ ವಾದದೊಂದಿಗೆ ನಡೆದ ವಿಚಾರಣೆಯಲ್ಲಿ ಮಧ್ಯಂತರ ಜಾಮೀನು ದೊರೆಕಿದೆ ಎಂದರು.

Advertisement

62 ಜನರನ್ನು ಧಾರವಾಡ ಜೈಲಿಗೆ ಕಳುಹಿಸಿದ್ದು, 4 ಜನರನ್ನು ಬಾಲಾಪರಾಧ ಪ್ರಕರಣದಲ್ಲಿ ಕಾರವಾರಕ್ಕೆ ಕಳುಹಿಸಿದ್ದರು. 62 ಜನರಿಗೆ 307 ಕಲಂ ಅಡಿ ಪ್ರಕರಣ ದಾಖಲಿಸಲಾಗಿತ್ತು. ಇವರಿಗೆ ಮಧ್ಯಂತರ ಜಾಮೀನು ದೊರೆತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next