ರಾಯಚೂರು: ಲಾಕ್‌ಡೌನ್ ನಿಯಮ ಸಂಪೂರ್ಣ ಉಲ್ಲಂಘಿಸಿ ಮಾದಕ ವಸ್ತುಗಳನ್ನು ಮನಸೋ ಇಚ್ಛೆ ದರಕ್ಕೆ ಮಾರಾಟ ಮಾಡಿದ ಏಜೆನ್ಸಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಟಿಯುಸಿಐ ಸಂಘಟನೆ ಸದಸ್ಯರು ಒತ್ತಾಯಿಸಿದರು.
ಈ ಕುರಿತು ಶನಿವಾರ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿ, ಕೋವಿಡ್ ವೈರಸ್ ಹರಡದಂತೆ ತಡೆಯಲು ಮಾ.24ರಂದು ದೇಶಾದ್ಯಂತ ಲಾಕ್‌ಡೌನ್ ಜಾರಿ ಮಾಡಲಾಯಿತು. ಅಲ್ಲಿಂದ 53 ದಿನ ಬಳಕೆ ವಸ್ತುಗಳು ಹೊರತುಪಡಿಸಿ ಬೇರೆ ವಸ್ತುಗಳ ಸಾಗಣೆ ನಿಷೇಧಿಸಲಾಗಿತ್ತು. ಆದರೂ ಲಾಕ್ ಡೌನ್ ಜಾರಿಯಲ್ಲಿದ್ದಾಗಲೇ ಜಿಲ್ಲಾದ್ಯಂತ ರಾಜಾರೋಷವಾಗಿ ಗುಟ್ಕಾ, ತಂಬಾಕು, ಸಿಗರೇಟ್ ಹಾಗೂ ಮದ್ಯ ಮಾರಾಟ ಮಾಡಲಾಗಿದೆ. ಒಂದಕ್ಕೆ ದುಪ್ಪಟ್ಟು
ದರ ಪಡೆಯಲಾಗಿದೆ. ಅಂಥ ಅಂಗಡಿ ಹಾಗೂ ಏಜೆನ್ಸಿಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಒತ್ತಾಯಿಸಿದರು. ಈ ಬಗ್ಗೆ ಗೊತ್ತಿದ್ದರೂ ದಿನಸಿ ಅಂಗಡಿಗಳ ಬೆಲೆ ನಿಯಂತ್ರಾಣಾಧಿಕಾರಿಗಳು, ಮಾದಕ ವಸ್ತುಗಳ ಮಾರಾಟದ ಅಂಗಡಿಗಳ ಮಾಲೀಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
ಸರಾಫ್ ಬಜಾರದಲ್ಲಿನ ರಘುರಾಮಚಂದ್ ಸಿಗರೇಟ್ ಮತ್ತು ವಿಮಲ್ ಏಜೆನ್ಸಿ, ಕೆಡಬ್ಲೂಟಿ ಶಾಲೆ ಹತ್ತಿರದ ಜಿ. ಅಬ್ದುಲ್ ರಜಾಕ್ ನಾರ್ಥ್ಪೂಲ್ ಸಿಗರೇಟ್ ಏಜೆನ್ಸಿ, ಶಶಿಮಹಲ್ ರೋಡ್ ಜಾವೇದ್ ಹೀರಾ ಗುಟಕಾ ಏಜೆನ್ಸಿ ಹಾಗೂ ಪಟೇಲ್ ಬಜಾರ್‌ದಲ್ಲಿರುವ ಗಣೇಶ್ ಟ್ರೇಡ್‌ರ್ನ ಮಾಲೀಕರು ಬೇಕಾಬಿಟ್ಟ ದರಕ್ಕೆ ಮಾರಿದ್ದಾರೆ ಎಂದು ದೂರಿದರು. ಸರ್ಕಾರಕ್ಕೆ ವಂಚನೆ ಮಾಡಿ ಕೋಟ್ಯಂತರ ರೂ. ಹಣ ಗಳಿಸಿದ ಈ ಅಂಗಡಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಬೆಲೆ ನಿಯಂತ್ರಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕ್ರಿಮಿನಲ್ ಮೊಕದ್ದಮೆ ಹೂಡಿ ಜೈಲಿಗೆ ಕಳುಹಿಸಿ ಆಸ್ತಿ ಮುಟ್ಟುಗೋಲು ಹಾಕುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಟಿಯುಸಿಐ ಸಂಘಟನೆ ಜಿಲ್ಲಾಧ್ಯಕ್ಷ ಜಿ. ಅಮರೇಶ, ಸದಸ್ಯರಾದ ರವಿ ದಾದಾಸ್, ಜಿ. ಅಡವಿರಾವ್, ರವಿಚಂದ್ರ, ಅಡಿವಪ್ಪ, ಶೇಖಹುಸೇನ್ ಭಾಷಾ ಇತರರು ಇದ್ದರು.