Advertisement

ಪಾಳು ಬಿದ್ದ ಕೊಳಚೆ ನೀರು ಸಂಸ್ಕರಣ ಘಟಕ

09:41 PM Jan 15, 2020 | Lakshmi GovindaRaj |

ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆನೀರು ಸಂರಕ್ಷಣೆ ಮಾಡಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಮೂಲಕ ಜನಜಾಗೃತಿ ಅಭಿಯಾನವನ್ನು ನಡೆಸಲಾಗುತ್ತದೆ. ಆದರೆ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಪಂನ ಗಾಂಡ್ಲಚಿಂತೆಯಲ್ಲಿ ಕೊಳಚೆ ನೀರು ಸಂಸ್ಕರಣೆ ಮಾಡಲು ನಿರ್ಮಿಸಿರುವ ಘಟಕ ಸೂಕ್ತ ನಿರ್ವಹಣೆ ಇಲ್ಲದೇ ಪಾಳುಬಿದ್ದಿದೆ.

Advertisement

ಇದ್ದು ಇಲ್ಲದಂತಾಗಿದೆ: ಕೃಷಿ ಇಲಾಖೆಯಿಂದ ವಾಟರ್‌ಶೆಡ್‌ ಯೋಜನೆಯಡಿ ಕೊಳಚೆನೀರು ಶೇಖರಣೆ ಮಾಡಿ ಶುದ್ಧೀಕರಣ ಮಾಡಿ ಕೃಷಿ ಚಟುವಟಿಕೆಗಳಿಗಾಗಿ ನೀರು ಬಳಕೆ ಮಾಡಲು ಘಟಕ ನಿರ್ಮಿಸಲಾಗಿತ್ತು. ಆದರೆ ಗ್ರಾಮದಲ್ಲಿರುವ ಚರಂಡಿ ಅಥವಾ ಕೊಳಚೆನೀರು ಸರಾಗವಾಗಿ ಹರಿಯಲು ಸೂಕ್ತ ವ್ಯವಸ್ಥೆ ಮಾಡದಿರುವುದರಿಂದ ಘಟಕದಲ್ಲಿ ಕೊಳಚೆನೀರು ಬರಲು ಮಾರ್ಗಗಳು ಎಲ್ಲಾ ಮುಚ್ಚಿ ಹೋಗಿದ್ದು, ಘಟಕ ಇದ್ದರೂ ಸಹ ಇಲ್ಲದಂತಾಗಿದೆ.

ಅವೈಜ್ಞಾನಿಕ ನಿರ್ಮಾಣ: ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಘಟಕ ಬಳಕೆ ಮಾಡುವ ಮೊದಲೇ ಹಾಳಾಗಿದ್ದು, ಯೋಜನೆಯ ಮೂಲ ಉದ್ದೇಶಕ್ಕೆ ತಿಲಾಂಜಲಿ ಇಡಲಾಗಿದೆ. ಘಟಕ ಅವೈಜ್ಞಾನಿಕವಾಗಿ ನಿರ್ಮಿಸಿದ್ದು ಕಾಮಗಾರಿಗೆ ಹೆಚ್ಚಿನ ವೆಚ್ಚವಾಗಿದೆ ಎಂಬ ಅನುಮಾನ ಮೂಡಿದ್ದು, ಇಲಾಖೆಯ ಹಿರಿಯ ಅಧಿಕಾರಿಗಳು ತನಿಖೆ ನಡೆಸಬೇಕಾಗಿದೆ.

ಪೈಪ್‌ಗಳು ನಾಶ: ಕ್ಷೇತ್ರದಲ್ಲಿ ಹಿಂದುಳಿದ ಮತ್ತು ಜಿಲ್ಲೆಯಲ್ಲಿ ಪವಿತ್ರ ಯಾತ್ರ ಸ್ಥಳವಾಗಿರುವ ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗಾಂಡ್ಲಚಿಂತೆ ಗ್ರಾಮದ ಹೊರವಲಯದಲ್ಲಿ ಚರಂಡಿ ಮತ್ತು ಕೊಳಚೆನೀರು ಶೇಖರಣೆ ಮಾಡಲು ನಿರ್ಮಿಸಿರುವ ಈ ಘಟಕ ಸಂಪೂರ್ಣವಾಗಿ ಹಾಳಾಗಿದೆ. ಚರಂಡಿ ನೀರು ಘಟಕದಲ್ಲಿ ಹರಿಯಲು ಸೂಕ್ತ ವ್ಯವಸ್ಥೆಗಳಿಲ್ಲ. ಹಾಕಿರುವ ಪೈಪ್‌ಗ್ಳು ಸಹ ನಾಶವಾಗಿದ್ದು ಗಿಡಗಂಟಿಗಳು ಬೆಳೆದು ವಿಷಜಂತುಗಳಿಗೆ ಆಶ್ರಯತಾಣವಾಗಿ ಪರಿವರ್ತನೆಗೊಂಡಿದೆ.

ಯಾವ ಉದ್ದೇಶಕ್ಕಾಗಿ ಈ ಘಟಕ: ಮಳೆನೀರು ಮತ್ತು ಕೊಳಚೆ ನೀರು ಸಂರಕ್ಷಣೆ ಮಾಡಲು ಮತ್ತು ಶೇಖರಣೆಯಾಗುವ ಕೊಳಚೆನೀರು ಸಂಸ್ಕೃರಿಸಿ ಅದನ್ನು ಶುದ್ಧೀಕರಿಸಿದ ಬಳಿಕ ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡುವ ಜೊತೆಗೆ ಅಂರ್ತಜಲಮಟ್ಟವನ್ನು ಸಂರಕ್ಷಣೆ ಮಾಡುವುದು ಈ ಯೋಜನೆಯ ಉದ್ದೇಶವಾಗಿತ್ತು. ಆದರೆ ಘಟಕ ಮಾತ್ರ ಪಾಳುಬಿದ್ದಿದ್ದು, ಅಂರ್ತಜಲಮಟ್ಟ ಕುಸಿದಿರುವ ಪ್ರದೇಶದಲ್ಲಿ ನಿರ್ವಹಣೆ ಮಾಡಲು ಇಲಾಖಾಧಿಕಾರಿಗಳು ವಿಫ‌ಲರಾಗಿದ್ದಾರೆ ಎಂಬ ಅನುಮಾನ ಮೂಡಿದೆ.

Advertisement

ಗ್ರಾಮದ ಹೊರ ವಲಯದಲ್ಲಿ ಕೊಳಚೆ ನೀರು ಸಂರಕ್ಷಣೆ ಮಾಡಲು ತೊಟ್ಟಿ ನಿರ್ಮಿಸಲಾಗಿದೆ. ಆದರೆ ಗ್ರಾಮದಿಂದ ಕೊಳಚೆನೀರು ಬರುವ ಮಾರ್ಗಗಳು ಎಲ್ಲಾ ಮುಚ್ಚಿ ಹೋಗಿದ್ದು, ಘಟಕ ಆಟಕ್ಕುಂಟು ಲೆಕ್ಕೆಕ್ಕಿಲ್ಲ ಎಂಬಂತಾಗಿದೆ. ಜಿಲ್ಲೆಯಲ್ಲಿ ಅಂರ್ತಜಲಮಟ್ಟ ವೃಧಿಸಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿದ್ದಾರೆ. ಆದರೆ ಸುಮಾರು 5-6 ವರ್ಷಗಳ ಹಿಂದೆಯೇ ನಿರ್ಮಿಸಿರುವ ಕೊಳಚೆನೀರು ಸಂಸ್ಕರಣಾ ಘಟಕ ಸೂಕ್ತ ನಿರ್ವಹಣೆ ಇಲ್ಲದೇ ಪಾಳುಬಿದ್ದಿದ್ದು ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

ಗಾಂಡ್ಲಚಿಂತೆ ಗ್ರಾಮದಲ್ಲಿ ಕೊಳಚೆ ನೀರು ಸಂಸ್ಕರಣೆ ಮಾಡಲು ನಿರ್ಮಿಸಿರುವ ಘಟಕ ಸೂಕ್ತ ನಿರ್ವಹಣೆ ಇಲ್ಲದೇ ಪಾಳುಬಿದ್ದಿರುವುದು ತಮ್ಮ ಗಮನಕ್ಕೆ ಇಲ್ಲ. ಅದನ್ನು ಯಾವ ಇಲಾಖೆಯವರು ನಿರ್ಮಿಸಿದರು ಎಂಬುದು ಗೊತ್ತಿಲ್ಲ. ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ಅಸ್ತಿತ್ವಕ್ಕೆ ಬಂದ ಹೊಸದರಲ್ಲಿ ನಿರ್ಮಿಸಿರಬಹುದು. ಅದನ್ನು ಪತ್ತೆಹಚ್ಚುವ ಕೆಲಸ ಮಾಡುತ್ತೇನೆ.
-ಶ್ರೀನಿವಾಸ್‌ರೆಡ್ಡಿ, ಅಧ್ಯಕ್ಷ, ತಲಕಾಯಲಬೆಟ್ಟ ಗ್ರಾಪಂ

ಗ್ರಾಮದಲ್ಲಿ ಮಳೆನೀರು ಮತ್ತು ಕೊಳಚೆನೀರು ಶೇಖರಣೆ ಮಾಡಿ ಶುದ್ಧೀಕರಿಸಲು ಘಟಕ ನಿರ್ಮಿಸಿ ಅದನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಆದರೆ ಅದು ಸೂಕ್ತ ನಿರ್ವಹಣೆ ಇಲ್ಲದೇ ಪಾಳುಬಿದ್ದಿರುವುದು ತಮ್ಮ ಗಮನಕ್ಕೆ ಇಲ್ಲ. ನಾವು ಕಾಮಗಾರಿ ನಡೆಯುವ ವೇಳೆಯಲ್ಲಿ ಉಸ್ತುವಾರಿ ವಹಿಸಿದ್ದೇವೆ. ಆದರೆ ನಿರ್ವಹಣೆ ಮಾತ್ರ ಗ್ರಾಮ ಪಂಚಾಯಿತಿಯದ್ದಾಗಿದೆ.
-ಕೇಶವಮೂರ್ತಿ, ಜೆ.ಇ. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ

ತಲಕಾಯಲಬೆಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಅಂರ್ತಜಲಮಟ್ಟ ಸಂರಕ್ಷಣೆ ಮಾಡಲು ಆದ್ಯತೆ ನೀಡಲಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ಸೂಚನೆಗಳನ್ವಯ ಕಾರ್ಯ ನಿರ್ವಹಿಸುತ್ತಿದ್ದೇವೆ. ಗಾಂಡ್ಲಚಿಂತೆ ಗ್ರಾಮದಲ್ಲಿ ನಿರ್ಮಿಸಿರುವ ಕೊಳಚೆನೀರು ಸಂಸ್ಕರಣೆ ಘಟಕ ಪಾಳುಬಿದ್ದಿರುವ ಕುರಿತು ಮಾಹಿತಿ ಇಲ್ಲ. ಈ ಸಂಬಂಧ ಮಾಹಿತಿ ಪಡೆದುಕೊಂಡು ಘಟಕ ಪುನಶ್ಚೇತನಗೊಳಿಸಲು ಕ್ರಮ ಕೈಗೊಳ್ಳುತ್ತೇವೆ.
-ಗೌಸಪೀರ್‌, ಪಿಡಿಒ, ತಲಕಾಯಲಬೆಟ್ಟ ಗ್ರಾಪಂ

* ಎಂ.ಎ.ತಮೀಮ್‌ ಪಾಷ

Advertisement

Udayavani is now on Telegram. Click here to join our channel and stay updated with the latest news.

Next