ದೇವದುರ್ಗ: ಸ್ಥಳೀಯ ಎಪಿಎಂಸಿ ವತಿಯಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಮಳಿಗೆಗಳ ಟೆಂಡರ್ ಪ್ರಕ್ರಿಯೆ ವಿಳಂಬವಾಗಿದ್ದರಿಂದ ವರ್ತಕರಿಗೆ ಮಳಿಗೆಗಳು ಹಂಚಿಕೆಯಾಗದೇ ಎಪಿಎಂಸಿ ಮಾರುಕಟ್ಟೆ ರೈತರಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸಿದೆ.
ಸ್ಥಳೀಯ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಮಳಿಗೆಗಳ ನಿರ್ಮಾಣ ಕಾಮಗಾರಿ ವೇಗದಿಂದ ಸಾಗಿದೆ. ಕಳೆದ ಮೂರ್‍ನಾಲ್ಕು ವರ್ಷಗಳ ಹಿಂದೆ ಒಳಗೆ ನಿರ್ಮಿಸಿದ ಬಹುತೇಕ ಮಳಿಗೆಗಳ ಟೆಂಡರ್ ಕರೆದು ವರ್ತಕರಿಗೆ ಹಂಚಿಕೆ ಮಾಡದ್ದರಿಂದ ವ್ಯಾಪಾರ ವಹಿವಾಟಿಗೆ ಬಳಕೆಯಾಗದೇ ನಿರುಪಯುಕ್ತವಾಗಿವೆ.ನಿರ್ವಹಣೆ ಕೊರತೆಯಿಂದ ಆರೇಳು ಮಳಿಗೆಗಳು ಪಾಳು ಬಿದ್ದಿವೆ. ಹೊಸದಾಗಿ ನಿರ್ಮಿಸಲಾದ 9 ಮಳಿಗೆಗಳು ವರ್ಷಗಳೇ ಗತಿಸಿದರೂ ಟೆಂಡರ್ ಪ್ರಕ್ರಿಯೆ ಆಗಿಲ್ಲ. ಅಧಿಕಾರಿಗಳು ಟೆಂಡರ್ ಪ್ರಕ್ರಿಯೆ ನಡೆಸಲು ಮೀನ-ಮೇಷ ಎಣಿಸುತ್ತಿರುವುದು ಅನುಮಾನಕ್ಕೆಡೆ ಮಾಡಿದೆ.
ಎಪಿಎಂಸಿ ಮಾರುಕಟ್ಟೆಯಲ್ಲಿ ವಾಣಿಜ್ಯಿಕ ಚಟುವಟಿಕೆಗಳು ನಡೆಯದ್ದರಿಂದ ರೈತರ ಕೃಷಿ ಉತ್ಪನ್ನ ದಾಸ್ತಾನಿಗೆ ನಿರ್ಮಿಸಿದ ಬೃಹತ್ ಗೋದಾಮು ಕೂಡ ನಿರುಪಯುಕ್ತವಾಗಿವೆ. ಇಲ್ಲಿನ ಕೃಷಿ ಮಾರುಕಟ್ಟೆಯನ್ನು ಪದೇಪದೆ ರಾಯಚೂರು ಎಪಿಎಂಸಿಗೆ ವಿಲೀನ ಮಾಡುವುದರಿಂದ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ರೈತಪರ ಹಲವು ಸಂಘಟನೆಗಳು ವಿಲೀನ ವಿರೋಧಿಸಿ ಹೋರಾಟ ಕೈಗೊಂಡರೂ, ರಾಜಕೀಯ ನಾಯಕರ ಪ್ರಭಾವದಿಂದಾಗಿ ಫಲ ಸಿಗದೇ ವಿಫಲವಾಗಿದೆ. ಹೀಗಾಗಿ ತಾಲೂಕಿನ ನೂರಾರು ರೈತರು ತಮ್ಮ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಬೇರೆ ತಾಲೂಕು, ಜಿಲ್ಲೆಗೆ ತೆರಳುವುದು ಅನಿವಾರ್ಯವಾಗಿದೆ.
ತಾಲೂಕಿನವರೇ ಸಂಸದ, ಶಾಸಕರು, ವಿಧಾನ ಪರಿಷತ್ ಸದಸ್ಯರಿದ್ದರೂ ಇಲ್ಲಿನ ಎಪಿಎಂಸಿಯಲ್ಲಿ ವ್ಯಾಪಾರ ವಹಿವಾಟು ಆರಂಭಿಸಲು ಮುಂದಾಗದಿರುವುದರಿಂದ ಪಟ್ಟಣ ವಾಣಿಜ್ಯ ಕೇಂದ್ರವಾಗಿ ಬೆಳೆಯಲು ಹಿನ್ನಡೆ ಆಗುತ್ತಿದೆ.
ಕಲ್ಯಾಣ ಮಂಟಪ ಅನಾಥ: ಇನ್ನು ಎಪಿಎಂಸಿ ಆವರಣದಲ್ಲಿ ನಿರ್ಮಿಸಿದ ಕಲ್ಯಾಣ ಮಂಟಪ ನಿರ್ವಹಣೆಗೆ ಅಧಿಕಾರಿಗಳು ಹಿಂದೇಟು ಹಾಕಿದ ಪರಿಣಾಮ ಸಭೆ, ಸಮಾರಂಭ ನಡೆಯುತ್ತಿಲ್ಲ.
ಇನ್ನಾದರೂ ಚುನಾಯಿತ ಜನಪ್ರತಿನಿಧಿಗಳು ಕೃಷಿ ಮಾರುಕಟ್ಟೆಯಲ್ಲಿನ ವಾಣಿಜ್ಯ ಮಳಿಗೆಗಳನ್ನು ಟೆಂಡರ್ ಕರೆದು ವರ್ತಕರಿಗೆ ಹಂಚಿಕೆ ಮಾಡುವ ಮೂಲಕ ವಾಣಿಜ್ಯ ಚಟುವಟಿಕೆ ಆರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಕೆಆರ್‌ಎಸ್ ಸಂಘಟನೆ ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ಆಗ್ರಹಿಸಿದ್ದಾರೆ.