ಅದೊಂದು ನಿರ್ಜನ ಪ್ರದೇಶ. ಮನಮೋಹಕ ಪ್ರಾಕೃತಿಕ ಸೌಂದರ್ಯ ಮತ್ತು ಹೇರಳವಾದ ಸಂಪತ್ತನ್ನು ತನ್ನೊಳಗೆ ಹುದುಗಿಸಿಕೊಟ್ಟುಕೊಂಡ ಆ ಜಾಗದ ಹೆಸರು “ರುಧೀರ ಕಣಿವೆ. ಜನಸಾಮಾನ್ಯರು ಹೋಗಲು ಭಯಪಡುವ ಇಂಥ ಜಾಗದ ಮೇಲೆ ನಿಧಿ ಕಳ್ಳರ ಕಣ್ಣು ಬೀಳುತ್ತದೆ. “ರುಧೀರ ಕಣಿವೆ’ಯ ಒಡಲಿನಲ್ಲಿರುವ ಸಂಪತ್ತಿಗೆ ಕನ್ನ ಹಾಕಲು ತಂಡ ಕೂಡಾ ಸಿದ್ಧವಾಗುತ್ತದೆ. ಕಣಿವೆಯ ಒಡಲನ್ನು ಬಗೆಯಲು ಅಲ್ಲಿಗೆ ಹೋದವರಿಗೆ ಅನಿರೀಕ್ಷಿತ ಆಘಾತಗಳು ಒಂದರ ಹಿಂದೊಂದು ಎದುರಾಗುತ್ತದೆ. ಅಂತಿಮವಾಗಿ ಸಂಪತ್ತಿನ ಮೇಲೆ ಕಣ್ಣಿಟ್ಟು, “ರುಧೀರ ಕಣಿವೆ’ಗೆ ಕಾಲಿಟ್ಟವರ ಕಥೆ ಏನಾಗುತ್ತದೆ ಎಂಬುದೇ ಈ ವಾರ ತೆರೆಗೆ ಬಂದಿರುವ “ರುಧೀರ ಕಣಿವೆ’ ಸಿನಿಮಾದ ಕ್ಲೈಮ್ಯಾಕ್ಸ್.
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ರುಧೀರ ಕಣಿವೆ’ ಒಂದು ಹಾರರ್ ಕಂ ಥ್ರಿಲ್ಲರ್ ಶೈಲಿಯ ಸಿನಿಮಾ. ಇದರ ನಿಧಿ ಹುಡುಕಾಟದ ಜೊತೆಗೊಂದು ಪುನರ್ಜನ್ಮದ ಪ್ರೇಮಕಥೆಯನ್ನು ಜೋಡಿಸಿ ಚಿತ್ರವನ್ನು ತೆರೆಮೇಲೆ ತರಲಾಗಿದೆ. ಒಂದಷ್ಟು ಸಸ್ಪೆನ್ಸ್, ಥ್ರಿಲ್ಲರ್, ಹಾರರ್ ಅಂಶಗಳ ಜೊತೆಗೆ ಹಾಡು, ಡ್ಯಾನ್ಸ್, ಕಾಮಿಡಿ ಹೀಗೆ ಎಲ್ಲ ತರದ ಕಮರ್ಷಿಯಲ್ ಎಂಟರ್ ಟೈನ್ಮೆಂಟ್ ಪ್ಯಾಕೇಜ್ ಸಿನಿಮಾದಲ್ಲಿದೆ.
ಒಂದು ಪ್ರಯತ್ನವಾಗಿ ಚಿತ್ರತಂಡದ ಶ್ರಮವನ್ನು ಮೆಚ್ಚಬಹುದು. ಚಿತ್ರದ ನಿರೂಪO ಮತ್ತು ವೇಗ ಇನ್ನಷ್ಟು ಹೆಚ್ಚಾಗಿದ್ದರೆ, “ರುಧೀರ ಕಣಿವೆಯ’ ಥ್ರಿಲ್ಲಿಂಗ್ ಅನುಭವ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿದ್ದವು. ನವ ಪ್ರತಿಭೆ ಕಾರ್ತಿಕ್, ನಾಯಕಿಯರಾದ ದಿಶಾ ಪೂವಯ್ಯ, ಅಮೃತಾ, ಅನುಭವಿ ಕಲಾವಿದರಾದ ಶೋಭರಾಜ್, ಬಲರಾಜವಾಡಿ, ಹನುಮಂತೇಗೌಡ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಸ್ವಾಮಿ ಛಾಯಾಗ್ರಹಣ “ರುಧೀರ ಕಣಿವೆ’ಯ ಅಂದವನ್ನು ತೆರೆಮೇಲೆ ಹೆಚ್ಚಿಸಿದೆ. ಸಂಕಲನ ಮತ್ತು ಹಿನ್ನೆಲೆ ಸಂಗೀತ ಕಡೆಗೆ ಚಿತ್ರತಂಡ ಇನ್ನಷ್ಟು ಗಮನ ಕೊಡಬಹುದಿತ್ತು. ಒಟ್ಟಾರೆ “ರುಧೀರ ಕಣಿವೆ’ ಹೊಸಬರ ಪ್ರಯತ್ನವಾಗಿದ್ದು, ಕಣಿವೆಗೆ ಕನ್ನ ಹಾಕಲು ಹೋಗುವವರ ಹಾರರ್-ಥ್ರಿಲ್ಲರ್ ಜರ್ನಿ ಹೇಗಿರಲಿದೆ ಎಂಬುದನ್ನು ತಿಳಿಯುವ ಕುತೂಹಲವಿದ್ದರೆ, ವಾರಾಂತ್ಯದಲ್ಲಿ ಒಮ್ಮೆ “ರುಧೀರ ಕಣಿವೆ’ಯ ಕಡೆಗೆ ಮುಖ ಮಾಡಬಹುದು
ಜಿ. ಎಸ್ ಕಾರ್ತಿಕ ಸುಧನ್