ಬೆಂಗಳೂರು: ಹೋಟೆಲ್‌ನಲ್ಲಿ ಮಹಿಳಾ ಗ್ರಾಹಕಿ ಜತೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ ಗ್ಯಾಸ್ ಸಿಲಿಂಡರ್ ಡೆಲಿವರಿ ಬಾಯ್‌ನನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಂಕದಕಟ್ಟೆ ನಿವಾಸಿ ಚಂದನ್(28) ಬಂಧಿತ.
ಆರೋಪಿ ವಿಜಯನಗರದ ಆರ್‌ಪಿಸಿ ಲೇಔಟ್‌ನಲ್ಲಿರುವ ನಮ್ಮೂಟ ಹೆಸರಿನ ಹೋಟೆಲ್‌ನಲ್ಲಿ 2023ರ ಡಿ.30ರಂದು ಮಹಿಳಾ ಗ್ರಾಹಕಿ ಜತೆ ಅಸಭ್ಯವಾಗಿ ವರ್ತಿಸಿದ್ದ. ಈ ಸಂಬಂಧ ಹೋಟೆಲ್‌ನ ಕ್ಯಾಶಿಯರ್ ಸುಕನ್ಯಾ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
2023ರ ಡಿ.30 ರಂದು ಸಂಜೆ ನಮ್ಮೂಟ ಹೆಸರಿನ ಹೋಟೆಲ್‌ಗೆ ಮೂವರು ಅಪರಿಚಿತ ಯುವಕರು ದೋಸೆ ತಿನ್ನಲು ಬಂದಿದ್ದಾರೆ. ಅದೇ ವೇಳೆ ಯುವತಿಯೊಬ್ಬಳು ಹೋಟೆಲ್‌ಗೆ ಬಂದು ಕಾಫಿ ಖರೀದಿಸಿ, ಕ್ಯಾಷ್ ಕೌಂಟರ್ ಪಕ್ಕದಲ್ಲೇ ಕಾಫಿ ಕುಡಿಯುತ್ತಿದ್ದರು. ಆಗ ಮೂವರ ಪೈಕಿ ಆರೋಪಿ ಚಂದನ್, ಕ್ಯಾಶ್ ಕೌಂಟರ್ ಬಳಿ ಬಂದು ಕಾಫಿ ಕುಡಿಯುತ್ತಿದ್ದ ಯುವತಿಯ ಪುಷ್ಠಕ್ಕೆ ಹೊಡೆದು, ಅಸಭ್ಯವಾಗಿ ವರ್ತಿಸಿದ್ದ. ಆಗ ಇತರೆ ಇಬ್ಬರು ಯುವಕರು ಚಪ್ಪಾಳೆ ತಟ್ಟಿದ್ದರು. ಈ ಬಗ್ಗೆ ನೊಂದ ಯುವತಿ ಯುವಕರ ವಿರುದ್ಧ ಕೂಗಾಡಿದ್ದು, ಜನ ಜಮಾಯಿಸಿದ್ದಾರೆ. ಹೆದರಿದ ಆರೋಪಿಗಳು ಪರಾರಿಯಾಗಿದ್ದರು. ಈ ಕುರಿತು ಸುಕನ್ಯಾ ದೂರು ದಾಖಲಿಸಿದ್ದರು.