ಬೆಂಗಳೂರು: ವಿಮಾನ ಪ್ರಯಾಣದ ವೇಳೆ ಇಬ್ಬರು ಗಗನ ಸಖಿಯರ ಜತೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ವಿದೇಶಿ ಪ್ರಜೆಯನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾಲ್ಡೀವ್ಸ್ ದೇಶದ ಅಕ್ರಂ ಮೊಹಮ್ಮದ್(51) ಬಂಧಿತ. ಆರೋಪಿ ಆ.18 ರಂದು ಕೃತ್ಯ ಎಸಗಿದ್ದಾನೆ. ಈ ಸಂಬಂಧ ಖಾಸಗಿ ವಿಮಾನಯಾನ ಸಂಸ್ಥೆಯ ಮಹಿಳಾ ಸಿಬ್ಬಂದಿ ನೀಡಿದ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಅಕ್ರಂ ಬ್ಯುಸಿನೆಸ್ ವೀಸಾದಡಿ ಆ.18ರಂದು ಮಾಲ್ಡೀವ್ಸ್‌ನ ಮಾಲೆಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಪ್ರಯಾಣದ ವೇಳೆ ಗಗನಸಖಿಯನ್ನು ಕರೆದು ಬಿಯರ್, ಗೋಡಂಬಿ ಕೇಳಿದ್ದಾನೆ. ಅದರಂತೆ ಆ ಗಗನಸಖಿ ಬಿಯರ್, ಗೋಡಂಬಿ ತಂದು ಕೊಟ್ಟಿದ್ದಾರೆ. ಆಗ ಆರೋಪಿ “ನಿನ್ನಂತಹ ಹುಡುಗಿಯನ್ನೇ ನಾನು ಹುಡುಕುತ್ತಿದ್ದೆ. ಒಮ್ಮೆ ಸೇವೆ ಮಾಡಲು ಎಷ್ಟು ಶುಲ್ಕ ಪಡೆಯುವೆ?ನೀನು ಯಾವಾಗ ಬಿಡುವಾಗುವೆ’ ಎಂದು ಪ್ರಶ್ನಿಸಿದ್ದಾನೆ. ಅಲ್ಲದೆ, “ನಿನ್ನಂತಹ ಹುಡುಗಿಯನ್ನು ನಾನು 51 ವರ್ಷದಿಂದ ಹುಡುಕುತ್ತಿದ್ದೆ. 10 ಡಾಲರ್ ಬದಲು 100 ಡಾಲರ್ ನೀಡುತ್ತೇನೆ. ಉಳಿದ ಹಣವನ್ನು ನಿನ್ನ ಬಳಿಯೇ ಇರಿಸಿಕೋ’ ಎಂದು ಹಣ ತೋರಿಸಿ ಗಗನಸಖೀಯ ದೇಹವನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ನನಗೆ ಒರಟು ವಸ್ತುಗಳು ಇಷ್ಟ: ಮತ್ತೂಬ್ಬ ಗಗನಸಖಿಗೂ ಅದೇ ಮಾದರಿಯಲ್ಲಿ ಬಿಯರ್ ಮತ್ತು ಗೋಡಂಬಿ ಕೇಳಿದಾಗ, ಆಕೆಯೂ ತಂದು ಕೊಟ್ಟಿದ್ದಾಳೆ. ಬಳಿಕ ಆರೋಪಿ ತನ್ನ ಪ್ಯಾಂಟಿನೊಳಗೆ ಕೈ ಹಾಕಿ ಹಣ ಹುಡುಕುವಂತೆ ನಟಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ವಿಮಾನ ಲ್ಯಾಂಡ್ ಆಗುವಾಗ 2 ಬಾರಿ ತನ್ನ ಆಸನದಿಂದ ಮೇಲೆ ಎದ್ದಿದ್ದಾನೆ. ಈ ವೇಳೆ ಕುಳಿತು ಕೊಳ್ಳುವಂತೆ ಗಗನ ಸಖಿ ಹೇಳಿದಾಗ, ಆರೋಪಿಯು “ನನಗೆ ಒರಟು ವಸ್ತುಗಳೆಂದರೆ ಪ್ರೀತಿ. ನೀನು ತುಂಬಾ ಒರಟು’ ಎಂದು ಕೆಟ್ಟದಾಗಿ ವರ್ತಿಸಿದ್ದಾನೆ.
ಆ ನಂತರ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ನೊಂದ ಗಗನ ಸಖಿಯರು ಪ್ರಯಾಣಿಕನ ವರ್ತನೆ ಹಾಗೂ ಕಿರುಕುಳದ ಬಗ್ಗೆ ತಮ್ಮ ಸಂಸ್ಥೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ವೇಳೆ ವಿಮಾನಯಾನ ಸಂಸ್ಥೆಯ ಮಹಿಳಾ ಸಿಬ್ಬಂದಿ ಆರೋಪಿ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಆರೋಪಿ ಅಕ್ರಂನನ್ನು ಬಂಧಿಸಿದ್ದಾರೆ.