ಗದಗ: ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮಾಂಬೆ ಜಯಂತ್ಯುತ್ಸವ ಹಾಗೂ ಸಮುದಾಯದ ಮಕ್ಕಳ ಶಿಕ್ಷಣ, ಉದ್ಯೋಗದ ಭದ್ರತೆಗೆ ಒತ್ತಾಯಿಸಿ ಮೇ 15ರಂದು ನಗರದಲ್ಲಿ ರಡ್ಡಿ ಯುವ ಚೈತನ್ಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಮರಡ್ಡಿ ಮಲ್ಲಮ್ಮ ರಾಜ್ಯ ಯುವ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಅನಿಲ ತೆಗ್ಗಿನಕೇರಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಸಮಾವೇಶ ಆರಂಭವಾಗಲಿದ್ದು, ಜಗದ್ಗುರು ಡಾ| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಹೇಳಿದರು.
ಸಮಾಜದ ಶಾಸಕ ಹಾಗೂ ಮಾಜಿ ಶಾಸಕರು ಪಾಲ್ಗೊಳ್ಳುವರು. ರಾಜ್ಯದಲ್ಲಿ ರೆಡ್ಡಿ ಸಮುದಾಯದವರು ಸುಮಾರು 65 ಲಕ್ಷ ಜನಸಂಖ್ಯೆಯಿದ್ದು, ಬೆರಳೆಣಿಕೆಯಷ್ಟು ಜನರು ಮಾತ್ರ ಸ್ಥಿತಿವಂತರಿದ್ದಾರೆ. ಇನ್ನುಳಿದವರು ಬಡ ಹಾಗೂ ಮಧ್ಯಮ ವರ್ಗದವರಿದ್ದಾರೆ. ಆದರೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಿಂದುಳಿದ ವರ್ಗ 3ಎ, 3ಬಿ ಮೀಸಲಾತಿ ನೀಡುತ್ತಿರುವುದರಿಂದ ಸಮಾಜದ ಬಡ ಮಕ್ಕಳಿಗೆ ಅನ್ಯಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಸಮಾನವಾಗಿ ಹಿಂದುಳಿದ ವರ್ಗ 3ಎ ಜಾತಿ ಪ್ರಮಾಣಪತ್ರ ನೀಡಬೇಕು ಎಂದು ಆಗ್ರಹಿಸಿದರು.
ಪ್ರವರ್ಗ 3ಎ ದಲ್ಲಿ ನಮ್ಮ ಸಮುದಾಯದ ರಡ್ಡಿ, ರೆಡ್ಡಿ, ರಡ್ಡಯಾ ಸೇರ್ಪಡೆಗೊಳ್ಳಬೇಕು. ನಮ್ಮ ಸಮುದಾಯದ ಜನರು ವೀರಶೈವ, ಲಿಂಗಾಯತ, ಲಿಂಗವಂತ, ವೀರಶೈವ ರಡ್ಡಿ, ಲಿಂಗಾಯತ ರಡ್ಡಿ ಎಂದು ದಾಖಲಾತಿ ಮಾಡಿದ್ದರ ಪರಿಣಾಮ ಸರ್ಕಾರದ ಅಧಿಕೃತ ಜಾತಿಗಳ ಪಟ್ಟಿಯಲ್ಲಿ ಲಿಂಗಾಯತ ಒಳಪಂಗಡಗಳ ಪಟ್ಟಿಯಲ್ಲಿ ಸೇರಿಸಬೇಕು ಎಂದು ಮನವಿ ಮಾಡುವುದಾಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಿದ್ದಣ್ಣ ಕವಳೂರ, ಕುಮಾರ ಗಡ್ಡಿ, ಚಂದ್ರಶೇಖರ ಅರಹುಣಸಿ, ಉಮೇಶ ಬಿಡ್ನಾಳ ಇದ್ದರು.