ಚೆನ್ನೈ/ಹೈದರಾಬಾದ್ : ನೀಟ್ ಪರೀಕ್ಷೆಯ ವಿಚಾರಕ್ಕೆ ಸಂಬಂಧಿಸಿ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೆನ್ನೈ, ಹೈದರಾಬಾದ್ ನಲ್ಲಿ ನಡೆದಿದೆ. ತಮಿಳುನಾಡಿನ ವಿಲ್ಲುಪುರಂ ನಿವಾಸಿ, ಕೃಷಿ ಕಾರ್ಮಿಕರೊಬ್ಬರ ಪುತ್ರಿ ಪ್ರತಿಭಾ(19) ನೀಟ್ ಪರೀಕ್ಷೆಯಲ್ಲಿ ತೇರ್ಗಡೆ ಆಗಲಿಲ್ಲ ಎಂಬ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ‘ನನಗೆ ಡಾಕ್ಟರ್ ಆಗಬೇಕೆಂಬ ಕನಸಿತ್ತು. ಆದರೆ, ನೀಟ್ ನಲ್ಲಿ ಕೇಳಲಾಗಿದ್ದ ಪ್ರಶ್ನೆಗಳು ಬಹಳ ಕಷ್ಟಕರವಾಗಿದ್ದು, ಅದನ್ನು ನನಗೆ ಅರ್ಥಮಾಡಿಕೊಳ್ಳಲೂ ಸಾಧ್ಯವಾಗಲಿಲ್ಲ’ ಎಂದು ಪತ್ರ ಬರೆದಿಟ್ಟು ಆಕೆ ಪ್ರಾಣಬಿಟ್ಟಿದ್ದಾಳೆ. ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಪ್ರತಿಭಾ 10ನೇ ತರಗತಿಯಲ್ಲಿ 500ರಲ್ಲಿ 490 ಅಂಕ ಹಾಗೂ 12ನೇ ತರಗತಿಯಲ್ಲಿ 1200ರಲ್ಲಿ 1125 ಅಂಕ ಗಳಿಸಿದ್ದಳು. ಆದರೆ, ನೀಟ್ ಪರೀಕ್ಷೆಯಲ್ಲಿ 700ರಲ್ಲಿ ಕೇವಲ 39 ಅಂಕ ಪಡೆದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷವೂ ಅನಿತಾ ಎಂಬ ಯುವತಿ ನೀಟ್ ಪಾಸಾಗಲು ಆಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ತಮಿಳುನಾಡಿನಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು. ಇದೀಗ ಪ್ರತಿಭಾ ಪ್ರಕರಣವೂ ರಾಜಕೀಯ ತಿರುವು ಪಡೆದು ಕೊಂಡಿದ್ದು, ಸರಕಾರದ ವಿರುದ್ಧ ಡಿಎಂಕೆ ಸೇರಿದಂತೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ನೀಟ್ ವಿಚಾರದಲ್ಲಿ ಸರಕಾರದ ನಿಲುವೇನು, ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದ್ದ ನಿರ್ಣಯಗಳು ಏನಾದವು ಎಂದು ಡಿಎಂಕೆ ಕಾರ್ಯಾಧ್ಯಕ್ಷ ಸ್ಟಾಲಿನ್ ಪ್ರಶ್ನಿಸಿದ್ದಾರೆ.
ಕಟ್ಟಡದಿಂದ ಜಿಗಿದು ಆತ್ಮಹತ್ಯೆ: ಇನ್ನೊಂದೆಡೆ, ನೀಟ್ ನಲ್ಲಿ ನಿರೀಕ್ಷಿತ ರ್‍ಯಾಂಕ್ ಬರಲಿಲ್ಲ ಎಂಬ ಕಾರಣಕ್ಕೆ 18 ವರ್ಷದ ಜಸ್ಲೀನ್ ಕೌರ್ 10 ಮಹಡಿಯ ಕಟ್ಟಡದಿಂದ ಜಿಗಿದು ಪ್ರಾಣಬಿಟ್ಟಿದ್ದಾಳೆ. ಈಕೆ ಮಯೂರಿ ಕಾಂಪ್ಲೆಕ್ಸ್ ಗೆ ಬಂದು ತನ್ನ ದ್ವಿಚಕ್ರ ವಾಹನ ನಿಲ್ಲಿಸಿ, ಮಹಡಿಗಳನ್ನು ಏರುತ್ತಿರುವ ಹಾಗೂ ಮೇಲಿಂದ ಜಿಗಿಯುತ್ತಿರುವ ದೃಶ್ಯಗಳೆಲ್ಲ ಸಿಸಿಟಿವಿಯಲ್ಲಿ ಸೆರೆಯಾಗಿದೆ.