Advertisement

ವಿದ್ಯುತ್‌ ಲೈನ್‌ಗೆ “ರಬ್ಬರ್‌ ಕಂಡಕ್ಟರ್‌’ಬೆಸುಗೆ!

03:09 AM Jul 07, 2020 | Sriram |

ವಿಶೇಷ ವರದಿ- ಮಹಾನಗರ: ಕಡಲ ಬದಿ ಯಲ್ಲಿ ಹಾದು ಹೋಗಿರುವ ಮೆಸ್ಕಾಂನ ವಿದ್ಯುತ್‌ ತಂತಿಗಳು ತುಕ್ಕು ಹಿಡಿಯುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು “ಕವರ್ಡ್ ರಬ್ಬರ್‌ ಕಂಡಕ್ಟರ್‌’ ಮಾದರಿಯ ಹೊಸ ವಿದ್ಯುತ್‌ ಲೈನ್‌ ಅಳವಡಿಸಲು ಉದ್ದೇಶಿಸಲಾಗಿದೆ.

Advertisement

ಸಮುದ್ರ ಬದಿಯ ವ್ಯಾಪ್ತಿಯಲ್ಲಿ ಉಪ್ಪು ನೀರಿನ ಅಂಶ ಅಧಿಕವಾಗಿರುವ ಕಾರಣದಿಂದ ಮೆಸ್ಕಾಂ ಸದ್ಯ ಹಾಕಿರುವ ಅಲ್ಯುಮೀನಿಯಂ ತಂತಿ ಕೆಲವೇ ವರ್ಷಗಳಲ್ಲಿ ಹಾಳಾಗುತ್ತಿದೆ. ಹೀಗಾಗಿ ಈ ವ್ಯಾಪ್ತಿಯಲ್ಲಿ ವಿದ್ಯುತ್‌ ಸಮಸ್ಯೆಗಳು ಕೂಡ ಅಧಿಕವಾಗುತ್ತಿದೆ. ಈ ಕಾರಣದಿಂದ ಕಡಲ ಬದಿಯಲ್ಲಿ ಹಾದುಹೋಗಿರುವ 11 ಕೆವಿ ವಿದ್ಯುತ್‌ ತಂತಿಗಳಿಗೆ ಕವರ್ಡ್ ಕಂಡಕ್ಟರ್‌ ಅಳವಡಿಸಲು ಮೆಸ್ಕಾಂ ನಿರ್ಧರಿಸಿದೆ.

ಈ ಯೋಜನೆಯನ್ನು ವಿವಿಧ ಹಂತಗಳನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಮೆಸ್ಕಾಂ ವ್ಯಾಪ್ತಿಯ ದ.ಕ. ಹಾಗೂ ಉಡುಪಿ ಜಿಲ್ಲೆಯ ಕಡಲ ಬದಿಯಲ್ಲಿರುವ ಎಲ್ಲ 11 ಕೆವಿ ತಂತಿಗಳನ್ನು ಪ್ರತ್ಯೇಕವಾಗಿ ಕವರ್ಡ್ ಕಂಡಕ್ಟರ್‌ ಮಾದರಿ ಯಲ್ಲಿ ಬದಲಾಯಿಸಲಾಗುತ್ತದೆ. ಮೊದಲ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಿಂದ ಬೈಕಂಪಾಡಿವರೆಗೆ 11 ಕೆವಿ ವಿದ್ಯುತ್‌ ತಂತಿಯನ್ನು ಬದಲಾಯಿಸಲು ತೀರ್ಮಾನಿಸಿದ್ದು, ಕೆಲವೇ ದಿನಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಬರುವ ನಿರೀಕ್ಷೆಯಿದೆ. ಈ ವ್ಯಾಪ್ತಿಯ 25 ರೂಟ್‌ ಕಿ.ಮೀ. ಉದ್ದದಷ್ಟು 11 ಕೆವಿ ವಿದ್ಯುತ್‌ ತಂತಿಗಳಿಗೆ ಕಂಡಕ್ಟರ್‌ ರಕ್ಷಣೆ ದೊರೆಯಲಿದೆ.

ಕಡಲ ಬದಿಯ ಅಲ್ಯುಮೀನಿಯಂ ತಂತಿಗಳಿಗೆ ಕಡಲಿನ ಉಪ್ಪು ನೀರು ಗಾಳಿ ಯಲ್ಲಿ ಬಂದು ಅಲ್ಯುಮೀನಿಯಂ ಬಾಳ್ವಿಕೆ ಕುಸಿತವಾಗುತ್ತಿದೆ. ಹೀಗಾಗಿ ಪ್ರತಿ 2-3 ವರ್ಷಗಳಿಗೊಮ್ಮೆ ಈ ತಂತಿಗಳನ್ನು ಬದಲಾವಣೆ ಮಾಡುವುದೇ ಮೆಸ್ಕಾಂಗೆ ಹೊರೆಯಾಗಿದೆ. ಈಗ ಇರುವ ಅಲ್ಯುಮೀನಿಯಂ ಕಂಡಕ್ಟರ್‌ ತೆಗೆದು ರಬ್ಬರ್‌ ಕೋಟೆಡ್‌ ಕಂಡಕ್ಟರ್‌ ಬಳಕೆ ಮಾಡಲಾಗುತ್ತದೆ. ಇದು ಮುಂದಿನ 15-20 ವರ್ಷಗಳವರೆಗೆ ಬಾಳ್ವಿಕೆ ಬರಲಿದೆ. ಮರದ ಗೆಲ್ಲು, ಏನಾದರೂ ಸಮಸ್ಯೆ ಸಂಭವಿಸಿದರೂ ವಿದ್ಯುತ್‌ ಟ್ರಿಪ್‌ ಆಗುವ ಸಾಧ್ಯತೆ ಇಲ್ಲ ಎನ್ನುತ್ತಾರೆ ಮೆಸ್ಕಾಂ ಮಂಗಳೂರು ವಲಯ ಮುಖ್ಯ ಎಂಜಿನಿಯರ್‌ ಮಂಜಪ್ಪ ಅವರು.

ಅರಣ್ಯ ಪ್ರದೇಶಕ್ಕೂ ಕಂಡಕ್ಟರ್‌?
ಮೆಸ್ಕಾಂನ ಬಹುತೇಕ ವಿದ್ಯುತ್‌ ತಂತಿಗಳು ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ಹಿನ್ನೆಲೆಯಲ್ಲಿ ಅಲ್ಲಿ ಮರದ ಗೆಲ್ಲು ತಂತಿಯ ಮೇಲೆ ಬಿದ್ದು ಅನಾಹು ತಗಳಾದ ಉದಾಹರಣೆಗಳಿವೆ. ಹೀಗಾಗಿ, ಅರಣ್ಯ ವ್ಯಾಪ್ತಿಯಲ್ಲಿಯೂ ವಿದ್ಯುತ್‌ ತಂತಿಗಳಿಗೆ ಕಂಡಕ್ಟರ್‌ ಅಳವಡಿಕೆಗೆ ಉದ್ದೇಶಿ ಸಲಾಗಿತ್ತು. ಆದರೆ, ಮರ ಬಿದ್ದರೆ ಸಮಸ್ಯೆ ಆಗಬಹುದು ಎಂಬ ಕಾರಣದಿಂದ ಸದ್ಯಕ್ಕೆ ಈ ನಿರ್ಧಾರ ಜಾರಿಗೆ ಬಂದಿಲ್ಲ.

Advertisement

ಮೂಲ್ಕಿಯಿಂದ ಬೈಕಂಪಾಡಿವರೆಗೆ ಜಾರಿ
ಕಡಲ ಬದಿಯಲ್ಲಿರುವ ಎಲ್ಲ 11 ಕೆವಿ ವಿದ್ಯುತ್‌ ತಂತಿಗಳನ್ನು ಪ್ರತ್ಯೇಕವಾಗಿ ಕವರ್ಡ್ ಕಂಡಕ್ಟರ್‌ ಮಾದರಿಯಲ್ಲಿ ಬದಲಾವಣೆಗೆ ಉದ್ದೇಶಿಸಲಾಗಿದೆ. ಆರಂಭಿಕವಾಗಿ ಮೂಲ್ಕಿಯಿಂದ ಬೈಕಂಪಾಡಿವರೆಗೆ ಲೈನ್‌ ಈ ಮಾದರಿಯಲ್ಲಿ ಬದಲಾಯಿಸಲು ನಿರ್ಧರಿಸಲಾಗಿದೆ.
 -ಸ್ನೇಹಲ್‌. ಆರ್‌, ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ

ಏರ್‌ಪೋರ್ಟ್‌: 33 ಕೆವಿಗೆ ಕವರ್ಡ್ ಕಂಡಕ್ಟರ್‌
ಮೆಸ್ಕಾಂನಲ್ಲಿ 10 ವರ್ಷದ ಹಿಂದೆ ಈ ಪರಿಕಲ್ಪನೆ ಜಾರಿಯಲ್ಲಿದ್ದರೂ, 11 ಕೆವಿ ಲೈನ್‌ಗಳಲ್ಲಿ ಇದು ಮೊದಲ ಪ್ರಯೋಗ.ಈಗಾಗಲೇ ಮೆಸ್ಕಾಂ ವ್ಯಾಪ್ತಿಯಲ್ಲಿ 33 ಕೆವಿ ಲೈನ್‌ಗಳಲ್ಲಿ ಕವರ್‌x ಕಂಡಕ್ಟರ್‌ ಅನ್ನು ಕೆಲವು ಕಡೆಗಳಲ್ಲಿ ಬಳಕೆ ಮಾಡಲಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 33 ಕೆವಿ ತಂತಿಗಳಿಗೆ ಕವರ್ಡ್ ಕಂಡಕ್ಟರ್‌ ಅನ್ನೇ ಬಳಕೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next