ಪುಟ್ಟ ತಂಗಿಯ ಜುಟ್ಟಿಗೆ ಹಾಕುವ ಹೇರ್‌ಬ್ಯಾಂಡ್, ಅಪ್ಪನ ಕಚೇರಿ ಕಡತಗಳಿಗೆ ಸುತ್ತಿಟ್ಟ ರಬ್ಬರ್ ಬ್ಯಾಂಡ್ ಸಿಕ್ಕಿಬಿಟ್ಟರೆ ನಿಮ್ಮ ಕೈ ಸುಮ್ಮನಿರುವುದೇ ಇಲ್ಲ. ಬಣ್ಣ ಬಣ್ಣದ ಆ ಬ್ಯಾಂಡ್‌ಗಳನ್ನು ಎಳೆದು, ಜಗ್ಗಿ ಆಟವಾಡೋಕೆ ಶುರು ಮಾಡ್ತೀರ ಅಲ್ವಾ? ಆದರೆ, ಅವುಗಳನ್ನೇ ಬಳಸಿ ಗೆಳೆಯರನ್ನು ಅಚ್ಚರಿಗೆ ನೂಕಬಹುದಾದ ಜಾದೂ ಇಲ್ಲಿದೆ!
ಬೇಕಾಗುವ ವಸ್ತು: ರಬ್ಬರ್ ಬ್ಯಾಂಡ್ ಅಥವಾ ಹೇರ್ ಬ್ಯಾಂಡ್
ಪ್ರದರ್ಶನ: ಜಾದೂಗಾರ ತನ್ನ ಕಿರುಬೆರಳು ಹಾಗೂ ಉಂಗುರದ ಬೆರಳು ಒಳಗೊಳ್ಳುವಂತೆ ರಬ್ಬರ್‌ಬ್ಯಾಂಡನ್ನು ಹಾಕುತ್ತಾನೆ. ಪ್ರೇಕ್ಷಕರಿಗೆ ರಬ್ಬರ್ ಬ್ಯಾಂಡ್ ಕಾಣುವಂತೆ ಕೈಯನ್ನು ಹಿಂದೆ ಮುಂದೆ ಮಾಡಿ ಕೈಗಳಲ್ಲಿ ಬೇರೇನೂ ಇಲ್ಲವೆನ್ನುವುದನ್ನು ಖಚಿತಪಡಿಸುತ್ತಾನೆ. ನಂತರ ನಾಲ್ಕೂ ಬೆರಳುಗಳನ್ನು ಮಡಚಿ ರಬ್ಬರ್ ಬ್ಯಾಂಡ್‌ಅನ್ನು ಒಮ್ಮೆ ಎಳೆದುಬಿಡುತ್ತಾನೆ. ಏನಾಶ್ಚರ್ಯ! ರಬ್ಬರ್ ಬ್ಯಾಂಡ್ ಈಗ ತೋರುಬೆರಳು ಹಾಗೂ ಮಧ್ಯದ ಬೆರಳಿಗೆ ಜಾರಿ ಬಂದು ಕುಳಿತಿದೆ.
ತಯಾರಿ: ಕಿರುಬೆರಳು ಹಾಗೂ ಉಂಗುರದ ಬೆರಳಿನ ಸುತ್ತ ಇದ್ದ ರಬ್ಬರ್ ಬ್ಯಾಂಡ್ ಪಕ್ಕದ ಎರಡು ಬೆರಳುಗಳಿಗೆ ಸುತ್ತಿಕೊಂಡಿದ್ದು ಹೇಗೆ? ಅದುವೇ ಮ್ಯಾಜಿಕ್ ಟ್ರಿಕ್. ಇದು ನಾಲ್ಕು ಬೆರಳುಗಳನ್ನು ಉಪಯೋಗಿಸಿ ಮಾಡುವ ಜಾದೂ. ನಿಜ ಹೇಳಬೇಕೆಂದರೆ ಇಲ್ಲಿ ಯಾವುದೇ ಮ್ಯಾಜಿಕ್ ಟ್ರಿಕ್ ಇಲ್ಲ. ಕೇವಲ ಕಣ್ಣುಕಟ್ಟು ಅಷ್ಟೆ. ಇದರ ರಹಸ್ಯ ಅಡಗಿರುವುದು ಕೈಬೆರಳುಗಳ ಮಡಚುವಿಕೆಯಲ್ಲಿ. ಮೊದಲು ರಬ್ಬರ್ ಬ್ಯಾಂಡ್ ಅನ್ನು ಕಿರುಬೆರಳು ಹಾಗೂ ಉಂಗುರದ ಬೆರಳನ್ನು ಸೇರಿಸಿ ಹಾಕಿಕೊಳ್ಳಿ. ರಬ್ಬರ್ ಬ್ಯಾಂಡ್ ಬೆರಳುಗಳ ಬುಡದಲ್ಲಿರಲಿ. ಈಗ ರಬ್ಬರ್‌ಬ್ಯಾಂಡನ್ನು ನಿಮ್ಮ ಕಡೆಗೆ ಎಳೆದು ಹಿಡಿಯಿರಿ. ಈಗ ರಬ್ಬರ್ ಬ್ಯಾಂಡ್ ಒಳಗೆ ಖಾಲಿ ಜಾಗ ಸೃಷ್ಟಿಯಾಗುತ್ತೆ. ನಾಲ್ಕೂ ಬೆರಳುಗಳು ಈ ಅಂತರದೊಳಗೆ ಸೇರಿಕೊಳ್ಳುವಂತೆ, ಮುಷ್ಠಿ ಬರುವಂತೆ ಮಡಚಿ. ಈಗ ಎಳೆದಿಟ್ಟ ರಬ್ಬರ್‌ಬ್ಯಾಂಡನ್ನು ಸಡಿಲಬಿಡಿ. ಈಗ ರಬ್ಬರ್ ಬ್ಯಾಂಡ್ ನಾಲ್ಕು ಬೆರಳುಗಳ ತುದಿಯಲ್ಲಿ ನಿಂತಿರಬೇಕು. ಈ ಸಮಯದಲ್ಲಿ ಮುಷ್ಠಿಯನ್ನು ನಿಧಾನವಾಗಿ ಬಿಡಿಸಿ. ಹೀಗೆ ಮಾಡಿದರೆ ರಬ್ಬರ್ ಬ್ಯಾಂಡ್ ತನ್ನಷ್ಟಕ್ಕೆ ಮುಂದಿನ ಎರಡು ಬೆರಳುಗಳಿಗೆ ತನ್ನ ಸ್ಥಾನವನ್ನು ಬದಲಾಯಿಸುತ್ತೆ.
ವಿನ್ಸೆಂಟ್ ಲೋಬೋ