Advertisement

ಗ್ರಾಮೀಣ ಭಾಗದಲ್ಲಿ ರಬ್ಬರ್‌,ಅಡಿಕೆ ತೋಟ ಲಾರ್ವಾ ಉತ್ಪತ್ತಿ ತಾಣಗಳು!

12:38 AM Jun 14, 2020 | Sriram |

ಮಹಾನಗರ: ಕೋವಿಡ್‌-19 ಭೀತಿಯ ನಡುವೆ ಮಳೆಗಾಲದಲ್ಲಿ ಡೆಂಗ್ಯೂ ಆತಂಕ ಹೆಚ್ಚುತ್ತಿದೆ. ಗ್ರಾಮೀಣ ಭಾಗದಲ್ಲಿ ರಬ್ಬರ್‌ , ಅಡಿಕೆ ತೋಟಗಳೇ ಡೆಂಗ್ಯೂ ಜ್ವರಕ್ಕೆ ಕಾರಣವಾಗುವ ಲಾರ್ವಾ ಉತ್ಪತ್ತಿ ತಾಣಗಳಾಗುತ್ತಿವೆ. ಇದರಿಂದಾಗಿ ನಗರಕ್ಕಿಂತಲೂ ಗ್ರಾಮೀಣ ಭಾಗದಲ್ಲಿಯೇ ಡೆಂಗ್ಯೂ ಭೀತಿ ಹೆಚ್ಚಾಗಿದೆ.

Advertisement

ಪ್ರಸಕ್ತ ವರ್ಷ ಜನವರಿಯಿಂದ ಜೂನ್‌ ತಿಂಗಳ ಅರ್ಧದವರೆಗೆ ಸುಮಾರು 110 ಡೆಂಗ್ಯೂ ಪ್ರಕರಣ ಗಳು ಜಿಲ್ಲೆಯಲ್ಲಿ ದಾಖಲಾಗಿದ್ದು, ಈ ಪೈಕಿ ಶಂಕಿತ ಡೆಂಗ್ಯೂ ಜ್ವರಕ್ಕೆ ಬೆಟ್ಟಂಪಾಡಿಯ ಮಹಿಳೆ ಬಲಿಯಾಗಿದ್ದಾರೆ. ಒಟ್ಟು ಪ್ರಕರಣಗಳ ಪೈಕಿ ಸುಮಾರು 4 ಮಂಗಳೂರು ನಗರದ್ದು, ಉಳಿದಂತೆ ಎಲ್ಲವೂ ಗ್ರಾಮೀಣ ಭಾಗದಿಂದಲೇ ವರದಿಯಾಗಿವೆ. ಹೀಗಾಗಿ ಗ್ರಾಮೀಣ ಭಾಗಗಳಲ್ಲಿ ಡೆಂಗ್ಯೂ ಹೆಚ್ಚಳವಾಗಲು ಕಾರಣ ಪತ್ತೆಗೆ ಆರೋಗ್ಯ ಇಲಾಖಾಧಿಕಾರಿಗಳ ತಂಡ ಗ್ರಾಮೀಣ ಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಬಹುತೇಕ ಅಡಿಕೆ ತೋಟ, ರಬ್ಬರ್‌ ತೋಟಗಳಲ್ಲಿ ನೀರು ನಿಲುಗಡೆಯಾಗಿರುವುದು ಗಮನಕ್ಕೆ ಬಂದಿದೆ.

ರಬ್ಬರ್‌ ತೋಟದಲ್ಲಿ ಮರಗಳಿಂದ ಹಾಲು ಸಂಗ್ರಹಿಸಲು ಇರಿಸುವ ಗೆರಟೆ/ಕಪ್‌ ಗಳು, ಅಡಿಕೆ ಸೋಗೆ ಮತ್ತು ಸ್ಪ್ರಿಂಕ್ಲರ್‌ ಗೂಟದಲ್ಲಿ ಮಳೆ ನೀರು ತುಂಬಿಕೊಂಡು ಲಾರ್ವಾ ಉತ್ಪತ್ತಿಯಾಗುತ್ತಿದೆ. ಇದೇ ಲಾರ್ವಾ ಸೊಳ್ಳೆಯಾಗಿ ಪರಿವರ್ತನೆಗೊಂಡು ಡೆಂಗ್ಯೂ ಹರಡಲು ಕಾರಣವಾಗುತ್ತಿದೆ ಎಂದು ಇಲಾಖೆಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಟಯರ್‌ಗಳಲ್ಲಿ ನೀರು
ಆರೋಗ್ಯ ಅಧಿಕಾರಿಗಳು, ಕೀಟ ಶಾಸ್ತ್ರಜ್ಞರು ಮತ್ತು ಆಹಾರ ನಿರೀಕ್ಷಕರನ್ನೊಳಗೊಂಡ ತಂಡವು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿತ್ತು. ಮನೆಯ ಟೆರೇಸ್‌, ಅರೆಯುವ ಕಲ್ಲು, ಟಯರ್‌ಗಳಲ್ಲಿಯೂ ನೀರು ನಿಂತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಇದು ನಗರ ಪ್ರದೇಶಗಳಲ್ಲಿಯೂ ಸಾಮಾನ್ಯವಾಗಿದ್ದು ಅಂತಹ ಕಡೆಗಳಲ್ಲಿ ನೀರು ನಿಲ್ಲದಂತೆ ಅಗತ್ಯ ಗಮನ ಹರಿಸಬೇಕು ಎಂದು ವೈದ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.

ಜೆಪ್ಪುವಿನಲ್ಲಿ ಸೊಳ್ಳೆ ಉತ್ಪತ್ತಿ ತಾಣ ನಾಶ
ಮಂಗಳೂರು ತಾಲೂಕಿನ ಕಂದಾವರ, ಶಿರ್ತಾಡಿ, ಜೆಪ್ಪು ಮುಂತಾದೆಡೆ ಸುಮಾರು ನಾಲ್ಕು ಡೆಂಗ್ಯೂ ಪ್ರಕರಣಗಳು ಕಂಡು ಬಂದಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. ಜೆಪ್ಪುವಿನ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೆಪ್ಪು ವ್ಯಾಪ್ತಿಯಲ್ಲಿ ಲಾರ್ವಾ ಉತ್ಪತ್ತಿಯಾಗುವ ತಾಣಗಳನ್ನು ಈಗಾಗಲೇ ನಾಶಪಡಿಸಲಾಗಿದೆ. ಗ್ರಾಮೀಣ ಭಾಗಗಳ ಪೈಕಿ ಪುತ್ತೂರಿನ ಬೆಟ್ಟಂಪಾಡಿಯಲ್ಲಿ ಕೆಲವು ಪ್ರಕರಣಗಳು ಕಂಡು ಬಂದಿವೆ. ಗುರುವಾರ ಶಂಕಿತ ಡೆಂಗ್ಯೂವಿನಿಂದಾಗಿ ಮಹಿಳೆಯೋರ್ವರು ಮೃತಪಟ್ಟಿದ್ದಾರೆ. ಈ ಮಹಿಳೆ ಹತ್ತು ದಿನಗಳ ಹಿಂದೆ ಡೆಂಗ್ಯೂ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ತೆರಳಿದ್ದರು. ಆದರೆ ದೀರ್ಘ‌ಕಾಲಿಕ ಅಸ್ತಮಾದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಮತ್ತೆ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಾವನ್ನಪ್ಪಿದ್ದಾರೆ. ದೀರ್ಘ‌ಕಾಲಿಕ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಡೆಂಗ್ಯೂ ಅಪಾಯಕಾರಿಯಾಗಿದ್ದು, ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಎಂಬುದು ವೈದ್ಯಾಧಿಕಾರಿಗಳ ಮಾತು.

Advertisement

ಮಲೇರಿಯಾ ತಡೆಗಟ್ಟಲು ಟಿಪ್ಸ್
ಡೆಂಗ್ಯೂ ಭೀತಿಯ ನಡುವೆ ಮಲೇರಿಯಾ ಪ್ರಕರಣಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಮಳೆಗಾಲದಲ್ಲಿ ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ಕಾಯಿಲೆ ನಿಯಂತ್ರಣಕ್ಕೆ ಜನರೇ ಜಾಗೃತರಾಗಬೇಕಿದೆ.

ಮನೆಯ ಸುತ್ತ ನಿರುಪಯುಕ್ತ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ ಸೊಳ್ಳೆ ಪರದೆಯನ್ನು ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಿ.

ಗರ್ಭಿಣಿಯರಂತೂ ತುಂಬಾ ಎಚ್ಚರ ವಹಿಸಿ ಮಂದ ಬಣ್ಣದ ಉಡುಪು ಧರಿಸಿದರೆ ಸಾಮಾನ್ಯವಾಗಿ ಸೊಳ್ಳೆ ನಿಮ್ಮಿಂದ ದೂರವಿರುತ್ತದೆ.

ದಿನಂಪ್ರತಿ ಮನೆಯ ನೆಲವನ್ನು ಒರೆ‌ಸಲು ಮರೆಯದಿರಿ. ಸಾಮಾನ್ಯ ಜ್ವರವನ್ನೂ ನಿರ್ಲಕ್ಷಿಸದೆ ವೈದ್ಯರನ್ನು ಭೇಟಿಯಾಗಿ.

ನೀರು ನಿಲ್ಲಿಸದಿರಿ
ಡೆಂಗ್ಯೂ ಹರಡುವ ಲಾರ್ವಾ ಉತ್ಪತ್ತಿಯಾಗುವುದೇ ನಿಂತಿರುವ ಶುದ್ಧ ನೀರಿನಲ್ಲಿ. ಮನೆಯ ಸುತ್ತಮುತ್ತ ನೀರು ನಿಲ್ಲಿಸದಂತೆ ಆರೋಗ್ಯ ಇಲಾಖೆ ಆಗಾಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಲೇ ಇದೆ. ಜನ ಸ್ವಯಂ ಎಚ್ಚರಿಕೆ ವಹಿಸಿಕೊಂಡು ಇದನ್ನು ಪಾಲನೆ ಮಾಡಬೇಕು. ಹಾಗಿದ್ದರೆ ಮಾತ್ರ ರೋಗ ನಿಯಂತ್ರಣ ಸಾಧ್ಯವಾಗುತ್ತದೆ. ಮನೆಯಲ್ಲಿ ಹೂಕುಂಡ, ಟಯರ್‌, ಬಾಟಲಿಗಳು, ಲೋಟ, ತಟ್ಟೆ ಸೇರಿದಂತೆ ನೀರು ಶೇಖರಣೆಯಾಗುವ ವಸ್ತುಗಳನ್ನು ಕವುಚಿ ಹಾಕಿ. ಆ ಮೂಲಕ ಲಾರ್ವಾ ಉತ್ಪತ್ತಿಯಾಗದಂತೆ ನೋಡಿಕೊಳ್ಳಿ ಎಂಬುದಷ್ಟೇ ನಮ್ಮ ಕಳಕಳಿ.
 - ಡಾ| ನವೀನ್‌ ಚಂದ್ರ ಕುಲಾಲ್‌, ಮಲೇರಿಯಾ ನಿಯಂತ್ರಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next