Advertisement

ಆರ್‌ಟಿಪಿಎಸ್‌-ವೈಟಿಪಿಎಸ್‌ ಅವರಪ್ಪನ ಆಸ್ತಿಯಲ್ಲ

03:49 PM Dec 01, 2017 | Team Udayavani |



Advertisement

ರಾಯಚೂರು: ನಾವು ಪಾದಯಾತ್ರೆ ಮಾಡುತ್ತಿದ್ದರೆ ಕಾಂಗ್ರೆಸ್‌ನವರು ಇದು ಚುನಾವಣೆ ಗಿಮಿಕ್‌ ಎಂದು ಟೀಕೆ ಮಾಡುತ್ತಿದ್ದಾರೆ. ಸರ್ಕಾರ ಅಧಿಕೃತ ಆದೇಶ ನೀಡದಿದ್ದರೂ ವಿಜಯೋತ್ಸವ ಆಚರಿಸುತ್ತಿರುವ ಕಾಂಗ್ರೆಸ್‌ನವರು ಚುನಾವಣೆ ಗಿಮಿಕ್‌ ಮಾಡುತ್ತಿದ್ದಾರೆ ಎಂದು ಶಾಸಕ ಶಿವರಾಜ್‌ ಪಾಟೀಲ್‌ ಟೀಕಿಸಿದರು.

ಸಮೀಪದ ವೈಟಿಪಿಎಸ್‌ ಎದುರು ನಾಲ್ಕನೇ ದಿನದ ಪಾದಯಾತ್ರೆ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಆರ್‌ಟಿಪಿಎಸ್‌, ವೈಟಿಪಿಎಸ್‌ ಅವರಪ್ಪನ ಆಸ್ತಿಯಲ್ಲ. ತಲೆತಲಾಂತರ ದಿಂದ ಬಳುವಳಿಯಾಗಿ ಬಂದಿದ್ದ ಆಸ್ತಿಯನ್ನೇ ವಿದ್ಯುತ್‌ ಕೇಂದ್ರಗಳಿಗೆ ಬಿಟ್ಟುಕೊಟ್ಟ ರೈತರಿಗೆ ಇಂದು ಒಂದು ಉದ್ಯೋಗ ಕೊಡಲು ಆಗುತ್ತಿಲ್ಲ. ಇಂಥ ಕೆಟ್ಟ ಸರ್ಕಾರ ನಾನೆಲ್ಲೂ ಕಂಡಿಲ್ಲ. ನಮ್ಮ ಭಾಗಕ್ಕೆ ವಿದ್ಯುತ್‌ ಕೊಡಿ ಎಂದು 50 ಬಾರಿ ಕೇಳಿಕೊಂಡಿದ್ದೇವೆ. ಇಂಧನ ಸಚಿವರಿಗೆ, ಮುಖ್ಯಮಂತ್ರಿಗೆ, ಕೆಪಿಸಿ ಮುಖ್ಯಸ್ಥರಿಗೆ ಮನವಿ ಮಾಡಿ ಸಾಕಾಗಿದೆ. ಇವರಿಗೆ ಒಂದೇ ಒಂದು ಬಾರಿ ಬೋರ್ಡ್‌ ಮೀಟಿಂಗ್‌ ಕರೆಯಲು ಸಾಧ್ಯವಾಗಿಲ್ಲ. ಬಡ ರೈತರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಸರ್ಕಾರಕ್ಕೆಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ತಿಪ್ಪರಾಜು ಹವಾಲ್ದಾರ್‌ ಮಾತನಾಡಿ, ಇದು ಕೇವಲ ಪಾದಯಾತ್ರೆಯಲ್ಲ; ಪಾವನ ಯಾತ್ರೆ. ಈ ಭಾಗದ ರೈತರು ವಿದ್ಯುತ್‌ ಗಾಗಿ ನಾಲ್ಕು ದಶಕದಿಂದ ಹೋರಾಟ ನಡೆಸುತ್ತಲೇ ಇದ್ದಾರೆ. ಕೇಂದ್ರಕ್ಕೆ ಭೂಮಿ ಕೊಟ್ಟವರು ಇಂದು ಕೂಲಿಗಾಗಿ ಅಲೆಯುವಂಥ ಸ್ಥಿತಿಯಿದೆ. ಒಂದು ಉದ್ಯೋಗ ಕೊಡಲು ಹತ್ತಾರು ಷರತ್ತುಗಳನ್ನು ವಿಧಿಸುತ್ತಿದ್ದಾರೆ. ಅಕ್ಕ ತಂಗಿಯರಿಗೆ ಆಸ್ತಿಯಲ್ಲಿ ಹಕ್ಕಿದೆ ಎಂದು ಕಾನೂನಲ್ಲಿದೆ. ಆದರೆ, ಸರ್ಕಾರ ಮಾತ್ರ ಕೆಲಸ ಕೊಡಲು ಕಾನೂನು ಅಡ್ಡಿಯಾಗಿದೆ ಎನ್ನುತ್ತಾರೆ. ಇವರಿಗೆ ಪ್ರತ್ಯೇಕ ಕಾನೂನಿದೆಯಾ ಎಂದು ಪ್ರಶ್ನಿಸಿದರು.

12 ಗಂಟೆ ವಿದ್ಯುತ್‌ ನೀಡುವುದಾಗಿ ಸರ್ಕಾರ ಹೇಳುತ್ತಿದೆ. ಹಾಗಿದ್ದರೆ ಆದೇಶ ಕೊಡಲಿ, ಭೂ ಸಂತ್ರಸ್ತರಿಗೆ ಉದ್ಯೋಗ ನೀಡಲಿ, ನಿರಾಶ್ರಿತ ಕುಂಟುಂಬಗಳಿಗೆ ಪುನರ್ವಸತಿ ಕಲ್ಪಿಸಿ ಹಕ್ಕು ಪತ್ರ ವಿತರಿಸಲಿ. ನಮ್ಮ ಹೋರಾಟ ಹತ್ತಿಕ್ಕಲು ಎಲ್ಲ ತಂತ್ರ ಹೂಡಲಾಗಿದೆ. ರೈತರಿಗಾಗಿ ನಾವು ಸಾಯಲು ಸಿದ್ಧರಿದ್ದೇವೆ. ಯಾರು ಏನು ಮಾಡಿದರೂ ನಾವು ಆರ್‌ಟಿಪಿಎಸ್‌ಗೆ ತೆರಳುವುದು ಶತಸಿದ್ಧ ಎಂದು ಎಚ್ಚರಿಸಿದರು.

Advertisement

ಬಿಜೆಪಿ ಮಹಿಳಾ ಘಟಕದ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ಇದೆಯಾ ಇಲ್ಲವಾ ಎಂಬ
ಅನುಮಾನವಿದೆ. ಬಡವರ, ಕಾರ್ಮಿಕರ ಕಷ್ಟಗಳು ಸರ್ಕಾರಕ್ಕೆ ಕಾಣಿಸುತ್ತಿಲ್ಲ. ನಿಮಗೆ ತಾಕತ್ತಿದ್ದರೆ ಅಧಿಕೃತ ಆದೇಶ ಮಾಡಿ 12 ಗಂಟೆ ವಿದ್ಯುತ್‌ ಕೊಡಿ. ಈಗ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ತಾತ್ಕಾಲಿಕವಾಗಿ ಕೊಟ್ಟು ಮತ್ತೆ ವಿದ್ಯುತ್‌ ತೆಗೆಯುವ ನಾಟಕ ಮಾಡಬೇಡಿ. ಮಕ್ಕಳಿಗೆ ಉದ್ಯೋಗ ಸಿಗಲಿ ಎಂಬ ಕಾರಣಕ್ಕೆ ಈ ಭಾಗದ ರೈತರು ಭೂಮಿ ತ್ಯಾಗ ಮಾಡಿದ್ದಾರೆ. ಆದರೆ, ಅವರಿಗೆ ನೀವು ಏನು ಮಾಡಿದ್ದಿರಿ ಎಂದು ಪ್ರಶ್ನಿಸಿದ ಅವರು, ಇಂದೊಂದು ಭಂಡ, ಲಜ್ಜೆಗೆಟ್ಟ ಸರ್ಕಾರ ಎಂದು ಟೀಕಿಸಿದರು.

ಶಾಸಕ ಶಿವನಗೌಡ ನಾಯಕ, ಜಿಪಂ ಸದಸ್ಯ ಕೇಶವರೆಡ್ಡಿ, ಮುಖಂಡ ಶಂಕ್ರಪ್ಪ, ಶ್ರೀನಿವಾಸ ರೆಡ್ಡಿ, ಶಶಿಧರ ಮಸ್ಕಿ, ಕಡಗೋಲ ಆಂಜನೇಯ, ಭೀಮಣ್ಣ ಮಚಾಲಿ, ಮುಕ್ತಿಯಾರ್‌ ಪಾಷಾ ಸೇರಿ ಅನೇಕರು ಪಾಲ್ಗೊಂಡಿದ್ದರು.

ಗುರುವಾರ ಬೆಳಗ್ಗೆ ಯರಮರಸ್‌ನಿಂದ ಶುರುವಾದ ಪಾದಯಾತ್ರೆಗೆ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಯರಮರಸ್‌, ದಂಡ್‌, ಏಗನೂರು, ಕುಕನೂರು, ಸೇರಿ ವಿವಿಧೆಡೆಯಿಂದ ಆಗಮಿಸಿದ ಜನ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಶಾಸಕರಿಗೆ ಹಾರ ತುರಾಯಿ ಹಾಕಿ ಸನ್ಮಾನಿಸಿದರು

ಖಾಕಿ ಕಾವಲು
ಶಾಸಕರಿಬ್ಬರ ಪಾದಯಾತ್ರೆ ಹಿನ್ನೆಲೆಯಲ್ಲಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿತ್ತು. ಇಡೀ ಪೊಲೀಸ್‌ ತಂಡವನ್ನೇ ಕರ್ತವ್ಯಕ್ಕೆ
ನಿಯೋಜಿಸಲಾಗಿತ್ತು. ಸಶಸ್ತ್ರ ಮೀಸಲು ಪಡೆ ಸೇರಿದಂತೆ ಅಗ್ನಿಶಾಮಕ ವಾಹನಗಳು ಸಮೇತ ಪೊಲೀಸರು ಸೇವೆಗೆ
ಹಾಜರಾಗಿದ್ದರು. ಪಾದಯಾತ್ರೆ ಮಾರ್ಗದುದ್ದಕ್ಕೂ ಪೊಲೀಸರನ್ನು ನಿಯೋಜಿಸಲಾಗಿತ್ತು. ವೈಟಿಪಿಎಸ್‌ ಎದುರು
ಕೆಲ ಕಾಲ ಪೊಲೀಸರೊಂದಿಗೆ ಮಾತುಕತೆ ನಡೆಸಿದ ಶಾಸಕರು, ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಚರ್ಚಿಸಿದರು.

ಇಡೀ ದಿನ ಟ್ರಾಫಿಕ್‌ ಸಮಸ್ಯೆ
ಶಾಸಕರ ಪಾದಯಾತ್ರೆಯಿಂದಾಗಿ ರಾಯಚೂರು-ಹೈದರಾಬಾದ್‌ ಮುಖ್ಯರಸ್ತೆಯಲ್ಲಿ ಇಡೀ ದಿನ ಟ್ರಾಫಿಕ್‌
ಸಮಸ್ಯೆ ತಲೆದೋರಿತು. ಬೆಳಗ್ಗೆ ಯರಮರಸ್‌ನಲ್ಲಿ ಪಾದಯಾತ್ರೆ ಶುರುವಾಗುತ್ತಿದ್ದಂತೆ ಪೊಲೀಸರು ಬೈಪಾಸ್‌
ಬಳಿ ಬ್ಯಾರಿಕೇಡ್‌ ಹಾಕಿ ವಾಹನ ಸಂಚಾರ ಸ್ಥಗಿತಗೊಳಿಸಿದರು.

ಇದು ಮುಖ್ಯ ರಸ್ತೆಯಾದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಇದರಿಂದ ಮಾರುಕಟ್ಟೆ ಬರಬೇಕಿದ್ದ ಹತ್ತಿ
ತುಂಬಿದ ವಾಹನಗಳು ಗಂಟೆಗಟ್ಟಲೇ ಕಾಯುವಂತಾಯಿತು. ನಗರ ಸಾರಿಗೆ ಬಸ್‌ ಸಂಚಾರಕ್ಕೂ ಕೆಲಕಾಲ ತಡೆ ನೀಡಲಾಗಿತ್ತು.

ಇದರಿಂದ ಪ್ರಯಾಣಿಕರು ಮುಖ್ಯವಾಗಿ ವಿದ್ಯಾರ್ಥಿನಿಯರು, ಮಹಿಳೆಯುರು, ವೃದ್ಧರು ಸುಮಾರು ಎರಡು ಕಿ.ಮೀ. ನಡೆದೇ ಬರಬೇಕಾಯಿತು. ರಾಯಚೂರು, ದೇವಸುಗೂರಿನಲ್ಲಿ ನಡೆದ ಮದುವೆಗಳಿಗೂ ಟ್ರಾಫಿಕ್‌ ಬಿಸಿ ಮುಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next