Advertisement

ಕೇರಳದಿಂದ ಬರುವವರಿಗೆ ಆರ್‌ಟಿಪಿಸಿಆರ್‌ ಕಡ್ಡಾಯ

12:47 AM Sep 01, 2021 | Team Udayavani |

ಮಂಗಳೂರು: ಜಿಲ್ಲೆಯಲ್ಲಿ ಕೊರೊನಾ ದೈನಂದಿನ ಪ್ರಕರಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಜಾರಿಯಲ್ಲಿದ್ದ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯ ಕರ್ಫ್ಯೂವನ್ನು ಮುಂದಿನ ಆದೇಶದವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಮಂಗಳವಾರ ಆದೇಶಿಸಿದ್ದಾರೆ.

Advertisement

ಮದುವೆಗೆ 50 ಮಂದಿ :

ವಿವಾಹ ಅಥವಾ ಕೌಟುಂಬಿಕ ಕಾರ್ಯಗಳನ್ನು ಗರಿಷ್ಠ 50 ಜನರ ಪರಿಮಿತಿಗೊಳಪಟ್ಟು ಆಯೋಜಿಸಲು ಅನುಮತಿಸಿದೆ. ಸ್ಥಳೀಯ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಹಾಗೂ ಕಂದಾಯ ಅಧಿಕಾರಿಗಳು ಸಮಾರಂಭಕ್ಕೆ ಭೇಟಿ ನೀಡಿ ಕೋವಿಡ್‌ ನಿಯಮಾವಳಿ ಉಲ್ಲಂಘನೆ ಆಗದಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ವಾರಾಂತ್ಯ ಕರ್ಫ್ಯೂ :

ಅತ್ಯಾವಶ್ಯಕ ಮತ್ತು ತುರ್ತು ಕಾರ್ಯ ಚಟುವಟಿಕೆಗಳನ್ನು ಹೊರತುಪಡಿಸಿ, ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 5ರ ವರೆಗೆ ಜನರ ಓಡಾಟವನ್ನು ನಿಷೇಧಿಸಲಾಗಿದೆ. ಆದರೆ ಬೆಳಗ್ಗೆ 5ರಿಂದ ಅಪರಾಹ್ನ 2ರ ವರೆಗೆ ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಮಾಂಸ ಮತ್ತು ಮೀನು ಮಾರಾಟ ಮಾಡುವ ಅಂಗಡಿಗಳು, ಬೀದಿ ಬದಿ ವ್ಯಾಪಾರಸ್ಥರು, ನ್ಯಾಯಬೆಲೆ ಅಂಗಡಿಗಳಿಗೆ ಕಾರ್ಯಾಚರಿಸಲು ಅವಕಾಶ ನೀಡಲಾಗಿದೆ. ಮದ್ಯದಂಗಡಿಗಳು ಮತ್ತು ಮಳಿಗೆಗಳಿಂದ ಪಾರ್ಸೆಲ್‌ ಕೊಂಡು ಹೋಗಲು ಮಾತ್ರವೇ ಅವಕಾಶವಿದೆ. ಈ ಅವಧಿಯಲ್ಲಿ ನಂದಿನಿ ಹಾಲು ಮಾರಾಟ ಮಳಿಗೆಗಳಿಗೆ ಮಾತ್ರ ಬೆ. 6ರಿಂದ ರಾತ್ರಿ 8ರ ವರೆಗೆ ಮಾರಾಟ ಮಾಡಲು ಅನುಮತಿ ನೀಡಲಾಗಿದೆ.

Advertisement

24×7 ಅವಧಿಯಲ್ಲಿ ಎಲ್ಲ ಸಾಮಗ್ರಿಗಳನ್ನು ಹೋಂ ಡೆಲಿವೆರಿಗೆ ಅವಕಾಶ ನೀಡಲಾಗಿದೆ. ರೆಸ್ಟೋರೆಂಟ್‌ ಮತ್ತು ಹೊಟೇಲ್‌ಗ‌ಳಲ್ಲಿ ಆಹಾರವನ್ನು ಮನೆಗೆ ತೆಗೆದುಕೊಂಡು ಹೋಗಲು ಮತ್ತು ಹೋಂ ಡೆಲಿವರಿ ನೀಡಲು ಮಾತ್ರ ಅನುಮತಿ ನೀಡಲಾಗಿದೆ. ಬಸ್‌, ರೈಲು ಮತ್ತು ವಿಮಾನ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕೇರಳದಿಂದ ಬರುವವರಿಗೆ ಆರ್‌ಟಿಪಿಸಿಆರ್‌ ಕಡ್ಡಾಯ :

ಕೇರಳದಿಂದ ಜಿಲ್ಲೆಗೆ ವಿದ್ಯಾಭ್ಯಾಸಕ್ಕಾಗಿ ಆಗಮಿಸುವ ಎಲ್ಲ ವಿದ್ಯಾರ್ಥಿಗಳಿಗೆ 72 ಗಂಟೆಗಳಿಗಿಂತ ಮುಂಚಿತವಾಗಿ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿಯೊಂದಿಗೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಮತ್ತು ಅವರು 7 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಪಡಿಸಿ, 7 ದಿನಗಳ ಅನಂತರ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಕಡ್ಡಾಯವಾಗಿ ಒಳಗಾಗಬೇಕು. ಅದೇ ರೀತಿ, ಕೇರಳದಿಂದ ಜಿಲ್ಲೆಗೆ ಉದ್ಯೋಗದ ಸಲುವಾಗಿ ಆಗಮಿಸುವ ಪ್ರತಿಯೊಬ್ಬರಿಗೂ ಏಳು ದಿನಗಳಿಗೊಮ್ಮೆ 72 ಗಂಟೆಗಳಿಗಿಂತ ಮುಂಚಿತ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯ. ಇತರ ಕಾರ್ಯಗಳಿಗೆ ಜಿಲ್ಲೆಗೆ ಆಗಮಿಸುವವರು 72 ಗಂಟೆಗಳಿಗಿಂತ ಮುಂಚಿತ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಹಾಜರುಪಡಿಸುವುದು ಕಡ್ಡಾಯ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಉಡುಪಿಯಲ್ಲಿಯೂ ವಾರಾಂತ್ಯ ಕರ್ಫ್ಯೂ :

ಉಡುಪಿ: ಕೋವಿಡ್‌ ನಿಯಂತ್ರಿಸುವ ನಿಟ್ಟಿನಲ್ಲಿ  ಉಡುಪಿ ಜಿಲ್ಲೆಯಲ್ಲಿಯೂ ವಾರಾಂತ್ಯ ಕರ್ಫ್ಯೂ ಆರಂಭಿಸಲು ರಾಜ್ಯ ಸರಕಾರ ನಿರ್ದೇಶನ ನೀಡಿದೆ.

ಶನಿವಾರ ಬೆಳಗ್ಗೆ 6ರಿಂದ ಸೋಮವಾರ ಬೆಳಗ್ಗೆ 6ರ ವರೆಗೆ ಅಗತ್ಯ ವಸ್ತು, ಆರೋಗ್ಯ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಪರೀಕ್ಷೆ, ಅಗತ್ಯ ಸರಕು ಸಾಗಾಣಿಕೆ ಮತ್ತಿತರ ಸೇವೆ ಮಾತ್ರ ಇರಲಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next