Advertisement

ಆರ್‌ಟಿಒ ಕಚೇರಿಗಳಲ್ಲಿ ತಂತ್ರಜ್ಞಾನಕ್ಕೆ ಆದ್ಯತೆ

11:18 AM Aug 20, 2017 | |

ಬೆಂಗಳೂರು: “ಸಾರಿಗೆಗೆ ಸಂಬಂಧಿಸಿದ ಸೇವೆಗಳನ್ನು ಜನರಿಗೆ ಸುಲಭವಾಗಿ ಕಲ್ಪಿಸಲು ಆರ್‌ಟಿಒ ಕಚೇರಿಗಳಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಇಂದಿರಾ ನಗರದಿಂದ ಎನ್‌ಜಿಇಎಫ್ ಪೂರ್ವದ ಕಸ್ತೂರಿ ನಗರಕ್ಕೆ ಸ್ಥಳಾಂತರಗೊಂಡ ಪ್ರಾದೇಶಿಕ ಸಾರಿಗೆ ಕಚೇರಿಯ (ಪೂರ್ವ) ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಗಳನ್ನು ಸಾಧ್ಯವಾದಷ್ಟು ಜನಸ್ನೇಹಿಯಾಗಿಸುವುದರ ಜತೆಗೆ ಕಾರ್ಯದಕ್ಷತೆ ಹೆಚ್ಚಿಸುವುದು ನಮ್ಮ ಮೊದಲ ಆದ್ಯತೆ. ಈ ನಿಟ್ಟಿನಲ್ಲಿ ಆರ್‌ಟಿಒಗಳಲ್ಲಿ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. “ಇ-ಸಾರಥಿ’, “ಇ-ವಾಹನ’ದಂತಹ ಹಲವು ಸುಧಾರಣೆಗಳನ್ನು ತರಲಾಗುತ್ತಿದೆ’ ಎಂದು ಹೇಳಿದರು. ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡ ಆರ್‌ಟಿಒ ಕಚೇರಿ ಬಳಿ ಅತ್ಯಾಧುನಿಕ ಡ್ರೈವಿಂಗ್‌ ಲೈಸೆನ್ಸ್‌ ಟ್ರ್ಯಾಕ್‌ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.

ಈಗಾಗಲೇ ಬಿಡಿಎ ಈ ಜಾಗವನ್ನು ನೀಡಲು ಒಪ್ಪಿದ್ದು, ಶೀಘ್ರ ನೋಂದಣಿ ಪ್ರಕ್ರಿಯೆ ಮುಗಿಯಲಿದೆ. ಇನ್ನು ಈ ಪ್ರದೇಶದಲ್ಲಿರುವ ಐಟಿಐ ಕಾರ್ಖಾನೆಗೆ ಸೇರಿದ ಸುಮಾರು 4 ಎಕರೆ ಜಾಗದಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿದೆ. ಐಟಿಐ ಆಡಳಿತ ಮಂಡಳಿಯು ಭೋಗ್ಯಕ್ಕೆ ಜಾಗ ನೀಡಲು ಒಪ್ಪಿಗೆ ಸೂಚಿಸಿದೆ. ಈ ಬಸ್‌ ನಿಲ್ದಾಣ ನಿರ್ಮಿಸುವುದರಿಂದ ಈ ಭಾಗದ ಜನರಿಗೆ ತುಂಬಾ ಅನುಕೂಲವಾಗಲಿದೆ ಎಂದು ತಿಳಿಸಿದರು.

ಈ ಮೊದಲು ಪ್ರಾದೇಶಿಕ ಸಾರಿಗೆ ಕಚೇರಿ (ಪೂರ್ವ)ಯು ಇಂದಿರಾನಗರದ ಬಿಡಿಎ ಸಂಕೀರ್ಣದಲ್ಲಿ ಬಾಡಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿತ್ತು. ಈಗ 9.93 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಇದರಿಂದ ಸಾರ್ವಜನಿಕರು ರಸ್ತೆ ಹಾಗೂ ಮೆಟ್ರೋ ಸಾರಿಗೆ ಮೂಲಕ ಸುಲಭವಾಗಿ ಈ ಕಚೇರಿ ತಲುಪಬಹುದು ಎಂದರು.  

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಪ್ರಸ್ತುತ 69 ಲಕ್ಷ ವಾಹನಗಳಿದ್ದು, ಸಂಚಾರ ಸಮಸ್ಯೆ ದೊಡ್ಡ ಸವಾಲಾಗಿದೆ. ಕಳೆದ 10 ವರ್ಷಗಳಲ್ಲಿ ರಸ್ತೆ ವಿಸ್ತರಣೆ, ಮೇಲ್ಸೇತುವೆಗಳು ನಿರ್ಮಾಣವಾಗುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಮೆಟ್ರೋ ಮೊದಲ ಹಂತದ ಆರಂಭಗೊಂಡಿದೆ.

Advertisement

ಎರಡನೇ ಹಂತವೂ ಶೀಘ್ರದಲ್ಲೇ ಸೇವೆಗೆ ಲಭ್ಯವಾಗಲಿದೆ. ಇನ್ನು ಬೈಯಪ್ಪನಹಳ್ಳಿ ಮತ್ತು ವೈಟ್‌ಫೀಲ್ಡ್‌ ನಡುವೆ ಸಬ್‌ಅರ್ಬನ್‌ ರೈಲು ಸಂಚಾರವೂ ಆರಂಭಗೊಂಡಿದೆ. ಇದರಿಂದ ಸಾವಿರಾರು ಜನರಿಗೆ ಅನುಕೂಲವಾಗಿದೆ ಎಂದು ಹೇಳಿದರು. ನಗರದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಟ್ಟಾಗಿ ಪ್ರಯತ್ನಿಸುತ್ತಿವೆ.

ಅದರಲ್ಲೂ ಕೇಂದ್ರ ಸರ್ಕಾರ ಬೆಂಗಳೂರು ಸೇರಿದಂತೆ ದೇಶದ 100 ನಗರಗಳ ಸರ್ವತೋಮುಖ ಅಭಿವೃದ್ಧಿಗೆ ಯೋಜನೆ ರೂಪಿಸಿದೆ. ಮುಂದಿನ ದಿನಗಳಲ್ಲಿ ಈ ಅಭಿವೃದ್ಧಿ ಯೋಜನೆಗಳು ಹಂತ ಹಂತವಾಗಿ ಜಾರಿಯಾಗಲಿವೆ ಎಂದು ಅವರು ತಿಳಿಸಿದರು. ಶಾಸಕ ಬಿ.ಎ.ಬಸವರಾಜು, ಸಾರಿಗೆ ಇಲಾಖೆ ಆಯುಕ್ತ ಬಿ. ದಯಾನಂದ, ನಗರ ಜಂಟಿ ಸಾರಿಗೆ ಆಯುಕ್ತ ಜೆ. ಜ್ಞಾನೇಂದ್ರಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next