ಮಂಗಳೂರು: ಸದಾ ಜನಸಂದಣಿಯಿಂದ ಗಿಜಿಗಿಡುತ್ತಿದ್ದ, ದಿನಕ್ಕೆ ಲಕ್ಷಾಂತರ ರೂ. ತೆರಿಗೆ ಮೊತ್ತ ಸಂಗ್ರಹವಾಗುತ್ತಿದ್ದ ಮಂಗಳೂರಿನ ಪ್ರಾದೇಶಿಕ ಸಾರಿಗೆ ಕಚೇರಿ ಈಗ ಖಾಲಿ ಖಾಲಿ. ಲಾಕ್‌ಡೌನ್ ಪ್ರಯುಕ್ತ ಎಲ್ಲ ಸರಕಾರಿ ಕಚೇರಿಗಳಂತೆ ಈ ಸರಕಾರಿ ಕಚೇರಿಯನ್ನೂ ಮುಚ್ಚಲಾಗಿದೆ. ಹಾಗಿದ್ದರೂ ಇತ್ತೀಚೆಗೆ ಕೆಲವು ನಿರ್ಬಂಧಗಳ ಸಡಿಲಿಕೆಯ ಅನಂತರ ಹೊಸ ವಾಹನ ನೋಂದಣಿಗೆ ಸಂಬಂಧಿಸಿ ಆನ್‌ಲೈನ್ ಮುಖಾಂತರ ಹಣ ಪಾವತಿ ಮಾಡಿ ಬಂದರೆ ವಾಹನ ತಪಾಸಣೆಗೆ ಅವಕಾಶ ಕಲ್ಪಿಸಲಾಗಿದೆ.
ಆನ್‌ಲೈನ್ ಮೂಲಕ ಶುಲ್ಕ ಪಾವತಿ ಮಾಡಿ ವಾಹನ ತಪಾಸಣೆ ಮಾಡಿಸಲು ಬರುವ ವಾಹನ ಮಾಲಕರಿಗೆ ಸೇವೆ ಒದಗಿಸಲು ಓರ್ವ ಮೋಟಾರು ವಾಹನ ಇನ್‌ಸ್ಪೆಕ್ಟರ್ ಸಹಿತ 4ರಿಂದ 5 ಸಿಬಂದಿ ಈ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
5 ದಿನಗಳ ಹಿಂದೆ ಈ ಸೇವಾ ಸೌಲಭ್ಯ ಆರಂಭವಾಗಿದ್ದು, ಈಗಾಗಲೇ ಕೆಲವು ಮಂದಿ ವಾಹನ ಮಾಲಕರು ಇದರ ಪ್ರಯೋಜನ ಪಡೆದಿದ್ದಾರೆ ಎಂದು ಆರ್‌ಟಿಒ ಮೂಲಗಳು ತಿಳಿಸಿವೆ.
ಆರ್‌ಟಿಒದಲ್ಲಿ ಪ್ರಸ್ತುತ ಒಂದು ಕಂಟ್ರೋಲ್ ರೂಂ ಕೂಡ ಕಾರ್ಯಾ ಚರಿಸುತ್ತಿದ್ದು, ಜಿಲ್ಲಾಡಳಿತಕ್ಕೆ ಬೇಕಾದ ಸರಕಾರಿ ವಾಹನಗಳನ್ನು ಮತ್ತು ಅವಶ್ಯ ಸೇವೆಗೆ ಬೇಕಾದ ವಾಹನಗಳ ಪೂರೈಕೆ ಮತ್ತಿತರ ಸೇವೆಗಳನ್ನು ಇದು ಒದಗಿಸುತ್ತಿದೆ. ಅಪಘಾತಗಳು ಸಂಭವಿ ಸಿದಾಗ ವಾಹನಗಳ ಮೂಲ ದಾಖಲೆ ಪತ್ತೆ ಮತ್ತಿತರ ವಿವಿಧ ಸೇವೆಗಳು ಕೂಡ ಇಲ್ಲಿ ಲಭ್ಯವಿವೆ.
ಆನ್‌ಲೈನ್ ಸೇವೆ ಮಾತ್ರ ಲಭ್ಯ
ಹೊಸ ರಿಜಿಸ್ಟ್ರೇಶನ್‌ಗೆ ಸಂಬಂಧಿಸಿ ಆನ್‌ಲೈನ್ ಮೂಲಕ ಶುಲ್ಕ ಪಾವತಿ ಸೇವೆಗೆ ಮಾತ್ರ ಈಗ ಈ ಕಚೇರಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಎ. 21ರಿಂದ ಈ ಸೇವೆ ಆರಂಭವಾಗಿದೆ. ಈಗಾಗಲೇ ಕೆಲವು ಮಂದಿ ಮಾಲ ಕರು ಆನ್‌ಲೈನ್ ಮೂಲಕ ಶುಲ್ಕ ಪಾವತಿ ಮಾಡಿ ವಾಹನವನ್ನು ಈ ಕಚೇರಿಗೆ ತಂದು ತಪಾಸಣೆ ಮಾಡಿಸಿಕೊಂಡು ಹೋಗಿದ್ದಾರೆ.
-ಆರ್.ಎಂ. ವರ್ಣೇಕರ್, ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಂಗಳೂರು.