Advertisement

ಆರ್‌ಟಿಒ ಕಚೇರಿ: ಗಾಯದ ಮೇಲೆ ಮತ್ತೊಂದು ಬರೆ

10:43 AM Mar 03, 2018 | |

ಮಹಾನಗರ: ಸಿಬಂದಿ ಕೊರತೆಯಿಂದ ಈಗಾಗಲೇ ಸೊರಗಿರುವ ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿ ಈಗ ಹೊಸ ಸಂಕಷ್ಟಕ್ಕೆ ಸಿಲುಕಿದೆ.

Advertisement

ಶನಿವಾರ ಬಂಟ್ವಾಳದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ನೂತನ ಕಚೇರಿ ಉದ್ಘಾಟನೆಗೊಳ್ಳುತ್ತಿದೆ. ಇಲ್ಲಿಗೆ ತಾತ್ಕಾಲಿಕವಾಗಿ ಮಂಗಳೂರಿನಿಂದಲೇ ಎಂಟು ಮಂದಿ ಸಿಬಂದಿಯನ್ನು ನಿಯೋಜಿಸಲು ಪ್ರಾದೇಶಿಕ ಸಾರಿಗೆ ಇಲಾಖೆ ನಿರ್ಧರಿಸಿದೆ. ಇದರಿಂದ ಮಂಗಳೂರು ಕಚೇರಿಯ ಸಾರ್ವಜನಿಕ ಕೆಲಸಗಳಲ್ಲಿ ವ್ಯತ್ಯಯವಾಗುವ ಆತಂಕ ಎದುರಾಗಿದೆ.

ಸಾರಿಗೆ ಕಚೇರಿಗೆ ಒಟ್ಟು ಮಂಜೂರಾತಿ ಹುದ್ದೆಗಳ ಸಂಖ್ಯೆ 97. ಈ ಪೈಕಿ 42 ಮಂದಿ ಮಾತ್ರ ಇದ್ದಾರೆ. ಬರೋಬ್ಬರಿ ಅರ್ಧದಷ್ಟು ಹುದ್ದೆಗಳು ಖಾಲಿಯಾಗಿದ್ದು, ಜನರು ಆರ್‌ಟಿಒ ಕಚೇರಿಯಲ್ಲಿ ದಿನವಿಡೀ ಕಾಲ ಕಳೆಯಬೇಕಾದ ಸ್ಥಿತಿ ಇದೆ. ಈ ಮಧ್ಯೆ ಸಿಬಂದಿಯನ್ನು ಬಂಟ್ವಾಳ ಕಚೇರಿಗೆ ನಿಯೋಜಿಸುತ್ತಿರುವುದರಿಂದ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗಲಿದೆ.

ಬಂಟ್ವಾಳ ಕಚೇರಿಯು ಮೆಲ್ಕಾರ್‌ನ ಬಿರ್ವ ಸೆಂಟರ್‌ನ ಬಾಡಿಗೆ ಕಟ್ಟಡದಲ್ಲಿ ಆರಂಭವಾಗಲಿದೆ. ಸದ್ಯ 14 ಹುದ್ದೆಗಳ ನೇಮಕಕ್ಕೆ ಸರಕಾರ ಆದೇಶಿಸಿದೆ. ನೇಮಕಕ್ಕೆ ಇನ್ನೂ ಕೆಲವು ತಿಂಗಳು ತಗುಲಲಿದೆ. ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಿಬಂದಿ ನೇಮಿಸದೇ ನೂತನ ಕಚೇರಿಯನ್ನು ತರಾತುರಿಯಿಂದ ಉದ್ಘಾಟಿಸುವ ತುರ್ತು ಏನಿತ್ತು? ಎಂಬುದು ಸಾರ್ವಜನಿಕರ ಪ್ರಶ್ನೆ.

ಒತ್ತಡ ಮಂಗಳೂರಿಗೆ ಕಡಿಮೆ!
ಪ್ರಸ್ತುತ ಬಂಟ್ವಾಳ ವ್ಯಾಪ್ತಿಯ ಜನರು ತಮ್ಮ ಸಾರಿಗೆ ಸಂಬಂಧಿತ ಕೆಲಸಗಳಿಗೆ ಮಂಗಳೂರು ಆರ್‌ಟಿಓ ಕಚೇರಿಗೆ ಬರಬೇಕಿದೆ. ಆದರೆ, ಶನಿವಾರದಿಂದ ಬಂಟ್ವಾಳ ಕಚೇರಿ ಆರಂಭವಾಗುವ ಕಾರಣದಿಂದ ಆ ವ್ಯಾಪ್ತಿಯ ಜನರು ಇನ್ನು ಮಂಗಳೂರಿಗೆ ಬರಬೇಕಿಲ್ಲ. ಹೀಗಾಗಿ ಮಂಗಳೂರು ಕಚೇರಿಯ ಒತ್ತಡ ಕಡಿಮೆಯಾಗಲಿದ್ದು, ಸಿಬ್ಬಂದಿ ಕೊರತೆ ದೊಡ್ಡ ಸಮಸ್ಯೆ ಆಗಲಾರದು ಎಂಬುದು ಸಿಬಂದಿ ಅಭಿಪ್ರಾಯ.

Advertisement

ಮತ್ತಷ್ಟು ಹೊಣೆ
ರಾಜ್ಯದ ಎರಡನೇ ಅತಿ ದೊಡ್ಡ ಸಾರಿಗೆ ಕಚೇರಿಯಾದ ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಪೂರ್ಣಕಾಲಿಕ ಆರ್‌ ಟಿಓ ಹುದ್ದೆ ಎರಡೂ ವರೆ ವರ್ಷದಿಂದ ಇನ್ನೂ ಭರ್ತಿಯಾಗಿಲ್ಲ. ಇಲ್ಲಿ ಆರ್‌ಟಿಒ ಆಗಿದ್ದ ಎ.ಎ. ಖಾನ್‌ 2015 ಆಗಸ್ಟ್‌ 31ರಂದು ಸೇವೆಯಿಂದ ನಿವೃತ್ತರಾಗಿದ್ದರು. ಪ್ರಸ್ತುತ ಸಹಾಯಕ ಸಾರಿಗೆ ಅಧಿಕಾರಿಗಳಾದ ಜಿ.ಎಸ್‌. ಹೆಗಡೆ ಪ್ರಭಾರ ಆರ್‌ಟಿಒ ಹೊಣೆಯನ್ನೂ ಹೊಂದಿದ್ದಾರೆ. ಆದರೆ ಎರಡೂ ಹುದ್ದೆಗಳನ್ನು ನಿರ್ವಹಿಸಲು ಕಷ್ಟವಾಗುತ್ತಿದೆ. ಈಗ ಬಂಟ್ವಾಳ ಹೊಸ ಕಚೇರಿಯ ಹೊಣೆಯನ್ನೂ ಇವರಿಗೇ ವಹಿಸಲಾಗಿದೆ.

ಈಗಾಗಲೇ ಸಮಸ್ಯೆ
ಸಿಬಂದಿ ಕೊರತೆಯಿಂದ ಮಂಗಳೂರು ಸಾರಿಗೆ ಇಲಾಖೆಯಲ್ಲಿ ವಾಹನಗಳ ತಪಾಸಣೆ ಹೊರತು ಪಡಿಸಿ ಉಳಿದ ಎಲ್ಲ ಸೇವೆಗಳನ್ನು ಒದಗಿಸುವಲ್ಲಿ ವಿಳಂಬವಾಗುತ್ತಿದೆ. ಏಳು ದಿನಗಳಲ್ಲಿ ಆಗುವ ಕೆಲಸಕ್ಕೆ ತಿಂಗಳು ಬೇಕಾಗಿದೆ. ಇಲಾಖೆಯನ್ನು ಇನ್ನಷ್ಟು ಸಬಲಗೊಳಿಸಲು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇರುವ ಹುದ್ದೆಗಳಲ್ಲಿಯೇ ಕೆಲಸ ಮಾಡಿ ಎಂಬ ನಿಲುವು ಸರಕಾರದ್ದು. ಇಂತಹ ಸಂದರ್ಭದಲ್ಲಿ ಇರುವ ಸಿಬಂದಿಯನ್ನೂ ಬೇರೆಡೆಗೆ ನಿಯೋಜಿಸಿರುವುದು ಸಾರ್ವಜನಿಕ ಟೀಕೆಗೆ ಗುರಿಯಾಗಿದೆ.

ತಾತ್ಕಾಲಿಕವಾಗಿ ನಿಯೋಜನೆ
ಬಂಟ್ವಾಳ ನೂತನ ಕಚೇರಿಗೆ ಹೊಸದಾಗಿ 14 ಹುದ್ದೆಗಳು ಮಂಜೂರಾಗಿವೆ. ಇದನ್ನು ನಿಯಮಿತವಾಗಿ ಭರ್ತಿ ಮಾಡಲಾಗುತ್ತದೆ. ಆದರೆ, ತಾತ್ಕಾಲಿಕವಾಗಿ ಮಂಗಳೂರಿನಿಂದ 8 ಸಿಬಂದಿಯನ್ನು ನಿಯೋಜಿಗಿಸಲಾಗಿದೆ. ಸಾರ್ವಜನಿಕ ಅನುಕೂಲತೆಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ.
ಜಿ.ಎಸ್‌.ಹೆಗಡೆ,
ಸಹಾಯಕ ಪ್ರಾದೇಶಿಕ ಅಧಿಕಾರಿ,
ಮಂಗಳೂರು

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next