ಮಂಡ್ಯ: ಇಲ್ಲಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯೊಳಗೆ ಕಾಲಿಟ್ಟರೆ ಸಾಕು ಖಾಲಿ ಕುರ್ಚಿಗಳದ್ದೇ ದರ್ಶನ. ಕಚೇರಿ ಕೆಲಸದಲ್ಲಿ ತೊಡಗಿರುವವರು ಅಲ್ಲೊಬ್ಬರು, ಇಲ್ಲೊಬ್ಬರು ಮಾತ್ರ ಸಿಗುತ್ತಾರೆ. ವರ್ಷದಿಂದ ಹುದ್ದೆಗಳು ಖಾಲಿಯಾಗುತ್ತಿವೆಯೇ ವಿನಃ ತೆರವಾದ ಹುದ್ದೆಗಳೆಲ್ಲವೂ ಭರ್ತಿಯಾಗದೆ ಹಾಗೆಯೇ ಉಳಿದಿವೆ. ಹೇಳ್ಳೋರಿಲ್ಲ.. ಕೇಳ್ಳೋರಿಲ್ಲ ಎನ್ನುವ ಪರಿಸ್ಥಿತಿ ಆರ್‌ಟಿಒ ಕಚೇರಿಯದ್ದಾಗಿದೆ.
ಆರ್‌ಟಿಒ ಕಚೇರಿಯಲ್ಲಿ ಒಟ್ಟು 31 ಹುದ್ದೆಗಳಿವೆ ಅದರಲ್ಲಿ ಅರ್ಧದಷ್ಟು ಹುದ್ದೆಗಳು ಖಾಲಿ ಇವೆ. ಇದರಲ್ಲೂ ಕೆಲವರಿಗೆ ಪ್ರಮೋಷನ್ ಆಗಿದೆ. ಒಬ್ಬರು ನಿವೃತ್ತರಾಗಿದ್ದಾರೆ. ಮತ್ತೂಬ್ಬರಿಗೆ ಅಪಘಾತವಾಗಿ ದೀರ್ಘಕಾಲದ ರಜೆ ಮೇಲೆ ತೆರಳಿದ್ದಾರೆ. ಇನ್ನೊಬ್ಬರು ನಿವೃತ್ತಿ ಹಂತದಲ್ಲಿದ್ದಾರೆ. ಈ ನಡುವೆ ಕಚೇರಿ ಕೆಲಸಗಳೆಲ್ಲವನ್ನೂ ಕೇವಲ ನಾಲ್ಕೈದು ಮಂದಿಯಷ್ಟೇ ನಿಭಾಯಿಸುತ್ತಿದ್ದಾರೆ.
ಖಾಲಿ ಇರುವ ಹುದ್ದೆಗಳು: ಆರ್‌ಟಿಒ ಕಚೇರಿಯಲ್ಲಿರುವ 5 ಮಂದಿ ದ್ವಿತೀಯ ದರ್ಜೆ ಸಹಾಯಕರಲ್ಲಿ 3 ಹುದ್ದೆಗಳು ಭರ್ತಿಯಾಗಿದ್ದು, 2 ಹುದ್ದೆ ಖಾಲಿ ಇದೆ. ಒಬ್ಬ ದ್ವಿತೀಯ ದರ್ಜೆ ಸಹಾಯಕರು ಕ್ಯಾಷ್ ಕೌಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರನ್ನು ಬೇರೆ ಯಾವುದೇ ಕೆಲಸಕ್ಕೂ ನಿಯೋಜಿಸಲು ಸಾಧ್ಯವೇ ಇಲ್ಲವಾಗಿದೆ. ಡಿ ಗ್ರೂಪ್ ನೌಕರರಾಗಿದ್ದ ಸವಿತಾ ಅವರಿಗೆ ಪ್ರಮೋಷನ್ ನೀಡಿ ದ್ವಿತೀಯ ದರ್ಜೆ ಸಹಾಯಕರಾಗಿ ಮಾಡಿದ್ದರೂ ಅವರಿಂದ ಹೆಚ್ಚಿನ ಕೆಲಸವನ್ನು ನಿರೀಕ್ಷಿಸಲು ಸಾಧ್ಯವಿಲ್ಲದಂತಾಗಿದೆ. ಮತ್ತೂಬ್ಬ ದ್ವಿತೀಯ ದರ್ಜೆ ಸಹಾಯಕ ಮುರಳಿ ಅವರಿಗೆ ಅಪಘಾತವಾಗಿ ಸುದೀರ್ಘ ರಜೆಯ ಮೇಲೆ ತೆರಳಿದ್ದಾರೆ.
ಪ್ರಥಮ ದರ್ಜೆ ಸಹಾಯಕರ 3 ಹುದ್ದೆಗಳಲ್ಲಿ 1 ಖಾಲಿ ಇದೆ. ಇರುವ ಇಬ್ಬರಲ್ಲಿ ಒಬ್ಬರು ಪ್ರಥಮ ದರ್ಜೆ ಸಹಾಯಕ ಮಂಜುನಾಥ್ ಅವರಿಗೆ ಸೂಪರಿಂಟೆಂಡೆಂಟ್ ಆಗಿ ಪ್ರಮೋಷನ್ ಆಗಿದ್ದು ಸ್ಥಾನದಿಂದ ತೆರವುಗೊಳ್ಳುವುದಕ್ಕೆ ಕಾಯುತ್ತಿದ್ದಾರೆ. ಇವರ ಜಾಗಕ್ಕೆ ಗದಗ ಜಿಲ್ಲೆಯಿಂದ ಒಬ್ಬರು ನೇಮಕಗೊಂಡಿದ್ದರೂ ಇದುವರೆಗೂ ಅವರು ಕರ್ತವ್ಯ ವಹಿಸಿಕೊಂಡಿಲ್ಲ. ಮತ್ತೂಬ್ಬರು ಚನ್ನಕೇಶವ ಎಂಬುವರು ಹಣ ಸ್ವೀಕೃತ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ಹಿರಿಯ ಮೋಟಾರು ವಾಹನ ನಿರೀಕ್ಷಕರು, ಬೆರಳಚ್ಚುಗಾರರು, ಶೀಘ್ರಲಿಪಿಗಾರರು, ಖಜಾನೆ ರಕ್ಷಕ ಹುದ್ದೆಗಳೆಲ್ಲವೂ ಖಾಲಿ ಉಳಿದಿವೆ. 5 ಮೋಟಾರು ವಾಹನ ನಿರೀಕ್ಷಕರಲ್ಲಿ ಒಬ್ಬರು ಮಾತ್ರವೇ ಇದ್ದು 4 ಹುದ್ದೆಗಳು ಖಾಲಿ ಇವೆ. 5 ಮಂದಿ ಮೋಟಾರು ವಾಹನ ನಿರೀಕ್ಷಕರಿಗೆ ಒಬ್ಬರು ಮಾತ್ರ ಇರುವುದರಿಂದ ಇನ್ನೊಬ್ಬರು ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಧೀಕ್ಷಕರು ಇಬ್ಬರಿದ್ದಾರೆ. ಈ ನಾಲ್ವರಲ್ಲಿ ಇಬ್ಬರು ಅಪಘಾತ ಪರಿಶೀಲನೆ, ನ್ಯಾಯಾಲಯ ವಿಚಾರಣೆ ಸೇರಿದಂತೆ ಕಚೇರಿಯ ಇನ್ನಿತರ ಕೆಲಸಗಳಿಗೆ ಹೊರಗಿರುತ್ತಾರೆ. ಇಬ್ಬರಿಂದ ಕಚೇರಿಗೆ ಬರುವ ವಾಹನಗಳ ಗುಣಮಟ್ಟ ಪರಿಶೀಲನೆ, ಎಲ್ಎಲ್ಆರ್, ಡಿಎಲ್, ವಾಹನಗಳ ವರ್ಗಾವಣೆ ಇನ್ನಿತರ ಕೆಲಸಗಳನ್ನು ನಿರ್ವಹಿಸುವುದು ಅಸಾಧ್ಯವಾಗಿದೆ.
ನಿತ್ಯ ಬರುವ ವಾಹನಗಳೆಷ್ಟು?: ನಿತ್ಯ ಆರ್‌ಟಿಒ ಕಚೇರಿಗೆ 100 ದ್ವಿಚಕ್ರ ವಾಹನಗಳು, 5 ರಿಂದ 6 ಸಾರಿಗೆ ವಾಹನ, 4 ರಿಂದ 5 ಕಾರುಗಳು ನೋಂದಣಿಗೆ ಬರುತ್ತಿವೆ. ವರ್ಗಾವಣೆ ಕೋರಿ 200 ವಾಹನಗಳು, 90 ಎಲ್ಎಲ್ಆರ್, 100 ವಾಹನ ಚಾಲನಾ ಪರವಾನಗಿಗೆ ಅರ್ಜಿಗಳು ಬಂದು ಸಲ್ಲಿಕೆಯಾಗುತ್ತಿವೆ. ಇವೆಲ್ಲವನ್ನು ಪರಿಶೀಲನೆ ನಡೆಸುವುದು ಕಚೇರಿಯಲ್ಲಿರುವ ಐದಾರು ಮಂದಿಯಿಂದ ಸಾಧ್ಯವೇ ಇಲ್ಲದಂತಾಗಿದೆ. ಇದರಿಂದ ವಾಹನಗಳ ನೋಂದಣಿ, ವರ್ಗಾವಣೆ ಸೇರಿದಂತೆ ಎಲ್ಲಾ ಕೆಲಸಗಳು ಆಮೆಗತಿಯಲ್ಲಿ ಸಾಗುತ್ತಿವೆ.
ಇವುಗಳ ಜೊತೆಗೆ ಅಪಘಾತಕ್ಕೀಡಾದ ವಾಹನಗಳು, ಚಾಲಕರ ಪರವಾನಗಿ ಸೇರಿದಂತೆ ನ್ಯಾಯಾಲಯದಿಂದ ಸಲ್ಲಿಕೆಯಾಗುವ ಕೋರಿಕೆ ಅರ್ಜಿಗಳ ಪರಿಶೀಲನೆ ನಡೆಸಿ ನಿಗದಿತ ಸಮಯದೊಳಗೆ ಅವುಗಳನ್ನು ಸಲ್ಲಿಸಬೇಕಿದೆ. ಹೀಗಾಗಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಬೆರಳೆಣಿಕೆಯಷ್ಟು ಸಿಬ್ಬಂದಿ ಮೇಲೆ ಕೆಲಸದ ಹೊರೆ ಬಿದ್ದಿದೆ.
ಕಳೆದೊಂದು ವರ್ಷದಿಂದ ಸಿಬ್ಬಂದಿ ಕೊರತೆ ಬಗ್ಗೆ ಅಧಿಕಾರಿಗಳು ಗಮನಸೆಳೆಯುತ್ತಿದ್ದರೂ ಸರ್ಕಾರ ಅದಕ್ಕೆ ಕಿವಿಗೊಡುತ್ತಿಲ್ಲ. ಹೊರಗುತ್ತಿಗೆ ಆಧಾರದ ಮೇಲೂ ನೌಕರರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಅವಕಾಶವೇ ಇಲ್ಲದಂತಾಗಿದೆ.
● ಮಂಡ್ಯ ಮಂಜುನಾಥ್