ಜೇವರ್ಗಿ: ಆರ್‌ಟಿಐ ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸಿ ಪರಿಹಾರ ನೀಡುವುದಲ್ಲದೇ, ಆಡಳಿತವು ಸಮಾಜದ ಜನಸಾಮಾನ್ಯರತ್ತ ಗಮನ ನೀಡುವಂತೆ ಮಾಡಿದೆ ಎಂದು ರಾಜ್ಯಶಾಸ್ತ್ರ ಉಪನ್ಯಾಸಕ ರವೀಂದ್ರಕುಮಾರ ಬಟಗೇರಿ ಹೇಳಿದರು.
ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕದ ಸಹಯೋಗದೊಂದಿಗೆ ಏರ್ಪಡಿಲಾಗಿದ್ದ “ಮಾಹಿತಿ ಹಕ್ಕು ಅಧಿ ನಿಯಮ-2005’ರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಹಿತಿ ಹಕ್ಕಿಗಾಗಿ ಹೋರಾಟ ಮಾಡಿದ ದೇಶದ ಮೊದಲ ರಾಜ್ಯ ರಾಜಸ್ತಾನ. ವಿಶ್ವ ಮಾನವ ಹಕ್ಕುಗಳ ಘೋಷಣೆಯು 19ನೇ ಅನುಚ್ಛೇದದಲ್ಲಿ ಪ್ರತಿಯೊಬ್ಬ ನಾಗರಿಕನು ಮಾಹಿತಿ ಕೇಳುವ, ಕೇಳಿದ ಮಾಹಿತಿ ವಿಶ್ಲೇಷಿಸುವ, ಅದರ ಮೇಲೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ಹೊಂದಿದ್ದಾನೆ ಎಂದು ತಿಳಿಸಿದೆ ಎಂದರು.
ಸರ್ಕಾರದ ಯೋಜನೆಗಳು, ಆಡಳಿತದ ಮಾಹಿತಿಯನ್ನು ಸಾರ್ವಜನಿಕರಿಗೆ ಸುಲಭವಾಗಿ ದೊರೆಯುವಂತೆ ಮಾಡಿ, ಆಡಳಿತದಲ್ಲಿ ಮುಕ್ತತೆ, ಪಾರದರ್ಶಕತೆ, ಹೊಣೆಗಾರಿಕೆ ತರುವ ಮೂಲಕ ಮಾಹಿತಿ ಹಕ್ಕು ಅಧಿ ನಿಯಮ (ಆರ್‌ಟಿಐ)ಸರ್ಕಾರ ಮತ್ತು ನಾಗರಿಕರ ನಡುವೆ ಸಂಪರ್ಕವಾಗಿ ಕಾರ್ಯನಿರ್ವಹಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ಮಾಡುವ ಅನನ್ಯ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ಹಿರಿಯ ಉಪನ್ಯಾಸಕಿ ಚಂದ್ರಪ್ರಭ ಕಮಲಾಪುರಕರ್ ಉದ್ಘಾಟಿಸಿದರು. ಎನ್ ಎಸ್‌ಎಸ್ ಅಧಿಕಾರಿ ಎಚ್.ಬಿ. ಪಾಟೀಲ, ಉಪನ್ಯಾಸಕರಾದ ಶರಣಮ್ಮ ಭಾವಿಕಟ್ಟಿ, ನಯಿಮಾ ನಾಹಿದ್, ಶಂಕ್ರೆಪ್ಪ ಹೊಸದೊಡ್ಡಿ, ಮಂಜುನಾಥ ಎ.ಎಂ, ಜಮೀಲ್ ಅಹ್ಮದ್, ಪ್ರಕಾಶ ಪಾಟೀಲ, ಪ್ರ.ದ. ಸಹಾಯಕ ನೇಸರ ಎಂ.ಬೀಳಗಿ, ಅತಿಥಿ ಉಪನ್ಯಾಸಕ ಬಸವರಾಜ ಎಸ್. ಪುರಾಣೆ ಹಾಗೂ ಕಾಲೇಜಿನ ಸಿಬ್ಬಂದಿ, ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.