Advertisement

Arrested: ಆರ್‌ಟಿಐ ಕಾರ್ಯಕರ್ತನ ಹತ್ಯೆಗೆ ಸುಪಾರಿ; 6 ಮಂದಿ ಬಂಧನ

10:35 AM Mar 11, 2024 | Team Udayavani |

ಬೆಂಗಳೂರು: ಆರ್‌ಟಿಐ ಕಾರ್ಯಕರ್ತ ನಾಗರಾಜ್‌ ಎಂಬವರ ಹತ್ಯೆಗೆ ಸುಪಾರಿ ಪಡೆದು ಕೊಲೆಗೆ ಯತ್ನಿಸಿದ ರೌಡಿಶೀಟರ್‌ ಸೇರಿ ಆರು ಮಂದಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

Advertisement

ನಾಗರಬಾವಿ ಭೈರವೇಶ್ವರ ನಗರ ನಿವಾಸಿಗಳಾದ ಮನೀಶ್‌ ಮೋಹನ್‌ ಪೂಜಾರಿ (28), ಶಶಿಕುಮಾರ್‌ ರೆಡ್ಡಿ (20), ರೌಡಿಶೀಟರ್‌ ಕೃಷ್ಣ (30), ಸತೀಶ್‌ (44), ವೇಣುಗೋಪಾಲ್ ಅಲಿಯಾಸ್‌ ಕುಮಾರಸ್ವಾಮಿ (51) ಮತ್ತು ಮೈಸೂರು ರಸ್ತೆ ಕಣಿಮಿಣಿಕೆ ಗೋವಿಂದರಾಜು(40) ಬಂಧಿತರು. ಆರೋಪಿಗಳು ಫೆ.29ರಂದು ಕೆಂಗೇರಿ ರೈಲ್ವೇ ಅಂಡರ್‌ ಪಾಸ್‌ ಬಳಿಯ ಕುಂಬಳಗೋಡು ನಿವಾಸಿ ಆರ್‌ಟಿಐ ಕಾರ್ಯಕರ್ತ ಕೆ.ನಾಗರಾಜ್‌ ಅವರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.

ಸರಣಿ ಅರ್ಜಿ ಹಾಕಿದಕ್ಕೆ ದ್ವೇಷ: ಬೆಂಗಳೂರು-ಮೈಸೂರು ನಡುವಿನ ಎಕ್ಸ್‌ಪ್ರೆಸ್‌ ಹೈವೇಗೆ ಸರ್ಕಾರ ಭೂ ಸ್ವಾಧೀನ ಪಡಿಸಿಕೊಂಡಿತ್ತು. ಈ ವೇಳೆ ಗೋವಿಂದರಾಜು ಸರ್ಕಾರದಿಂದ ಪರಿಹಾರ ಪಡೆದುಕೊಂಡಿದ್ದ. ಗೋಮಾಳ ಭೂಮಿ ತನಗೆ ಸೇರಿದ್ದು ಎಂದು ಸುಳ್ಳು ದಾಖಲೆ ಕೊಟ್ಟು ಗೋವಿಂದರಾಜು ಮತ್ತು ಸತೀಶ್‌ ಕೋಟ್ಯಂತರ ರೂ. ಪರಿಹಾರ ಪಡೆಯಲು ಮುಂದಾಗಿದ್ದ ಎಂದು ಹೇಳಲಾಗಿದೆ.

ಈ ವಿಚಾರವಾಗಿ ಆರ್‌ಟಿಐ ಕಾರ್ಯಕರ್ತ ನಾಗರಾಜು, ಪದೇ ಪದೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ದಾಖಲೆ ಪತ್ರಗಳನ್ನು ಕೋರುತ್ತಿದ್ದ. ಈ ವಿಚಾರ ಗೊತ್ತಾಗಿ ಆರೋಪಿಗಳಾದ ಗೋವಿಂದರಾಜು, ಸತೀಶ್‌ ಸರ್ಕಾರದಿಂದ ಪರಿಹಾರದ ಹಣ ಪಡೆಯಲು ಅಡ್ಡಿಯಾಗುತ್ತಿರುವ ನಾಗರಾಜು ಕೊಲೆಗೆ ಸಂಚು ರೂಪಿಸಿದ್ದರು.

ಹತ್ಯೆಗೆ 5 ಲಕ್ಷ ರೂ. ಸುಪಾರಿ: ಆರೋಪಿ ಗೋವಿಂದ ರಾಜು, ಆರ್‌ಟಿಐ ಕಾರ್ಯಕರ್ತ ನಾಗರಾಜ್‌ ಹತ್ಯೆಗೆ ಚಂದ್ರಾಲೇಔಟ್‌ ಠಾಣೆ ರೌಡಿಶೀಟರ್‌ ಕೃಷ್ಣ ಹಾಗೂ ನಗರದ ಕೆಲ ಪೊಲೀಸ್‌ ಠಾಣೆಗಳಲ್ಲಿ ಕಳ್ಳತನ, ಹಲ್ಲೆ ಸೇರಿ ವಿವಿಧ ಅಪರಾಧ ಪ್ರಕರಣಗಳ ಆರೋಪಿಯಾಗಿದ್ದ ಮನೀಶ್‌ ಮೋಹನ್‌ ಪೂಜಾರಿ ಮತ್ತು ತಂಡಕ್ಕೆ 5 ಲಕ್ಷ ರೂ.ಗೆ ಸುಪಾರಿ ನೀಡಿದ್ದ. ಮುಂಗಡವಾಗಿ 1.50 ಲಕ್ಷ ರೂ. ನೀಡಿದ್ದ. ಈ ಹಿನ್ನೆಲೆಯಲ್ಲಿ ಫೆ.29 ರಂದು ಆರ್‌ಟಿಐ ಕಾರ್ಯಕರ್ತ ನಾಗರಾಜ್‌ ಕೆಂಗೇರಿಯ ರೈಲ್ವೆ ಅಂಡರ್‌ಪಾಸ್‌ ಬಳಿ ನಡೆದು ಕೊಂಡು ಹೋಗುವಾಗ ಆರೋಪಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು. ಆದರೆ, ನಾಗರಾಜ್‌ನ ಕೂಗಾಟ ಕೇಳಿ ಸ್ಥಳೀಯರು ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಬಳಿಕ ನಾಗರಾಜ್‌ ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದ ನಾಗರಾಜ್‌, ಕೆಂಗೇರಿ ಠಾಣೆಗೆ ದೂರು ನೀಡಿದ್ದರು. ಇನ್‌ಸ್ಪೆಕ್ಟರ್‌ ಬಿ.ಎಂ.ಕೊಟ್ರೇಶಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next