Advertisement
ಹೌದು, ಕಳೆದ ಮೇ ತಿಂಗಳ 16ರಿಂದಲೇ 2022-23ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಂಡಿದ್ದು, ಮಕ್ಕಳ ದಾಖಲಾತಿ ಸಹ ಚುರುಕುಗೊಂಡಿದೆ. ಆದರೆ, ಸರ್ಕಾರ ಆರ್‌ಟಿಇ ಕಾರ್ಯಕ್ರಮ ಅನುಷ್ಠಾನದಲ್ಲಿ ತಂದ ಬದಲಾವಣೆ ಹಾಗೂ ಹೊಸ ಬಿಗಿ ನಿಯಮಗಳ ಹಿನ್ನೆಲೆಯಲ್ಲಿ ಆರ್‌ಟಿಇ ಅಡಿ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಮಂಜೂರಾಗಿರುವ 514 ಸೀಟುಗಳ ಪೈಕಿ ಇದುವರೆಗೆ ಭರ್ತಿ ಆಗಿದ್ದು ಬರೀ 11 ಮಾತ್ರ.
Related Articles
Advertisement
ಆರ್‌ಟಿಇ ಸೀಟಿಗೆ ಬೇಡಿಕೆ ಕುಸಿತ: ಎಲ್ಲರಿಗೂ ಶಿಕ್ಷಣ ಎಂಬ ಧ್ಯೇಯದಿಂದ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೂ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಶಿಕ್ಷಣ ದೊರೆಯಲಿ ಎಂಬ ಉದ್ದೇಶದಿಂದ 2019ರಲ್ಲಿ ಕೇಂದ್ರ ಸರ್ಕಾರ ಆರ್‌ಟಿಇ ಜಾರಿಗೊಳಿಸಿತ್ತು. ಈ ಕಾಯ್ದೆಯಡಿ ಯಾವುದೇ ಮಗು ಸರ್ಕಾರಿ ಕೋಟಾದಡಿ ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆಯಲು ಅನುಕೂಲ ಕಲ್ಪಿಸಿಕೊಡಲಾಗಿತ್ತು. ಆದರೆ, 2019ರಲ್ಲಿ ತಂದ ತಿದ್ದುಪಡಿ ಬಳಿಕ ಬೇಡಿಕೆ ಕುಸಿದಿದೆ. ಇದಕ್ಕೆ ಪ್ರವೇಶಾತಿಯಲ್ಲಿ ಇರುವ ಹಲವು ತೊಡಕುಗಳೇ ಕಾರಣ ಎಂದು ಪೋಷಕರು ದೂರುತ್ತಾರೆ.
ಮಕ್ಕಳ ನೋಡುವ ದೃಷ್ಟಿಯೇ ಬೇರೆ: ಆರ್‌ಟಿಇ ಅಡಿ ಸೀಟು ಸಿಕ್ಕರೂ ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್‌ಟಿಇ ಮಕ್ಕಳನ್ನು ಶಾಲೆಯಲ್ಲಿ ನೋಡುವ ದೃಷ್ಟಿಕೋನ ಬೇರೆಯೇ ಆಗಿದ್ದು, ಜೊತೆಗೆ ಸರ್ಕಾರ ಆರ್‌ಟಿಇ ಪ್ರವೇಶಕ್ಕೆ ರೂಪಿಸಿರುವ ಹಲವು ಬಿಗಿ ಕ್ರಮಗಳಿಂದ ಆಸಕ್ತರಿಗೆ ಸೀಟುಗಳು ಲಭ್ಯವಾಗುತ್ತಿಲ್ಲ ಎಂಬ ಮಾತುಗಳು ವ್ಯಕ್ತವಾಗುತ್ತಿವೆ. ಅಲ್ಲದೇ, ಶಾಲಾ ಶುಲ್ಕ ಬಿಟ್ಟು ಆರ್‌ಟಿಇ ಮಕ್ಕಳಿಂದಲೂ ಖಾಸಗಿ ಶಿಕ್ಷಣ ಸಂಸ್ಥೆಗಳು ಸಮವಸ್ತ್ರ, ಪಠ್ಯ, ನೋಟ್‌ಬುಕ್ ಹೆಸರಲ್ಲಿ ದುಬಾರಿ ಶುಲ್ಕ ವಿ ಧಿಸುತ್ತಿರುವುದರಿಂದಲೇ ಈಗ ಆರ್‌ಟಿಇ ಸೀಟುಗಳ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಆಸಕ್ತಿ ಕಳೆದುಕೊಂಡಿದ್ದಾರೆ.
2022-23ನೇ ಸಾಲಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲೆಗೆ 514 ಸೀಟುಗಳು ಆರ್‌ಟಿಇ ಅಡಿ ಮಂಜೂರಾಗಿವೆ. ಆದರೆ, ಇದುವರೆಗೆ ಜಿಲ್ಲೆಯಲ್ಲಿ 11 ವಿದ್ಯಾರ್ಥಿಗಳು ಮಾತ್ರ ಆರ್‌ಟಿಇ ಕೋಟಾದಡಿ ಖಾಸಗಿ ಶಾಲೆಗಳಿಗೆ ದಾಖಲಾಗಿದ್ದಾರೆ. ಈ ಹಿಂದೆ ಖಾಸಗಿ ಶಾಲೆಯವರು ತಮಗೆ ಇಷ್ಟ ಬಂದಂತೆ ಮಕ್ಕಳನ್ನು ಆರ್‌ಟಿಇ ಅಡಿ ದಾಖಲಿಸಿ ಕೊಳ್ಳುತ್ತಿದ್ದರು. ಕಠಿಣ ನಿಯಮಗಳು ಜಾರಿಯಾದ ನಂತರ ಅವು ಪೋಷಕರಿಗೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳವರಿಗೂ ಕಷ್ಟವಾಗಿ ಪರಿಣಮಿಸಿವೆ. –ಬಿ.ಎಸ್.ಜಗದೀಶ್ವರ, ಡಿಡಿಪಿಐ, ಹಾವೇರಿ
-ವೀರೇಶ ಮಡ್ಲೂರ