ಮಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಕನಸು ಕಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಅದೆಷ್ಟೋ ಪೋಷಕರಿಗೆ ಈ ಬಾರಿಯೂ ನಿರಾಶೆಯಾಗಿದೆ. ಶಿಕ್ಷಣ ಇಲಾಖೆಯ ಸೀಟು ಹಂಚಿಕೆ ವಿಳಂಬ ನೀತಿಯಿಂದಾಗಿ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಿದ ಬಳಿಕ ಆರ್‌ಟಿಇ ಸೀಟುಗಳು ಘೋಷಣೆಯಾಗುತ್ತಿವೆ!
ಇಂಥ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯಲ್ಲಿ ಈಗಾಗಲೇ 180 ಅರ್ಹ ವಿದ್ಯಾರ್ಥಿಗಳು ಆರ್‌ಟಿಇ ವ್ಯವಸ್ಥೆಯಡಿ ಉನ್ನತ ಗುಣ ಮಟ್ಟದ ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಅವಕಾಶದಿಂದ ವಂಚಿತರಾಗಿ ದ್ದಾರೆ. ಜಿಲ್ಲೆಯಲ್ಲಿ 2ನೇ ಹಂತದ ಸೀಟು ಹಂಚಿಕೆ ಬಳಿಕ 180 ಮಂದಿ ವಿದ್ಯಾರ್ಥಿ ಗಳು ಆರ್‌ಟಿಇನಡಿ ಅವಕಾಶವಿದ್ದರೂ ದಾಖಲಾತಿಯನ್ನೇ ಮಾಡಿಕೊಂಡಿಲ್ಲ.
ಇದಕ್ಕೆ ಮುಖ್ಯ ಕಾರಣ ಸರಕಾರ ಹಂತ ಹಂತವಾಗಿ ಸೀಟು ಹಂಚಿಕೆ ಮಾಡುತ್ತಿರುವುದು. ಆರ್‌ಟಿಇ ಸೀಟಿಗೆ ಕಾದು ಕುಳಿತರೆ ಸಿಗುತ್ತದೆ ಎಂಬ ಖಾತರಿ ಇಲ್ಲ; ಅದು ಘೋಷಣೆಯಾಗುವ ಹೊತ್ತಿಗೆ ಇತರ ಶಾಲೆಗಳ ಪ್ರವೇಶಾತಿ ಮುಗಿದಿರುತ್ತದೆ. ಹೀಗಾಗಿ ಅದೂ ಇಲ್ಲ, ಇದೂ ಇಲ್ಲ ಎಂಬಂತಾಗುವ ಸಾಧ್ಯತೆ ಇರುವುದರಿಂದ ಹೆತ್ತವರು ಅನ್ಯ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡುತ್ತಿದ್ದಾರೆ. ಹಾಗಿದ್ದರೂ ಆರ್‌ಟಿಇ ಸೀಟು ಲಭಿಸಿದಾಗ ಶಾಲೆಯನ್ನು ಬದಲಾಯಿಸಿಕೊಳ್ಳಬಹುದು. ಆದರೆ ಹಿಂದೆ ದಾಖಲು ಮಾಡಿದ ಶಾಲೆಯಲ್ಲಿ ಭರಿಸಿದ ಶುಲ್ಕ ಮರುಪಾವತಿ ಆಗುತ್ತ ದೆಯೇ ಎಂಬುದು ಪೋಷಕರ ಪ್ರಶ್ನೆ. ಒಟ್ಟು 1,424 ದಾಖಲಾತಿ
2018-19ನೇ ಸಾಲಿನಲ್ಲಿ ದ.ಕ. ಜಿಲ್ಲೆಗೆ ಒಟ್ಟು 2,727 ಸೀಟುಗಳು ಮಂಜೂರಾಗಿವೆ. ಈ ಪೈಕಿ ಇದುವರೆಗೆ ಮೊದಲ ಹಂತದಲ್ಲಿ 1,491 ಹಾಗೂ 2ನೇ ಹಂತದಲ್ಲಿ 113 ಸೀಟುಗಳು ಮಂಜೂರಾಗಿವೆ. ಆದರೆ ಒಟ್ಟು ದಾಖಲಾಗಿರುವುದು 1,424 ಮಕ್ಕಳು ಮಾತ್ರ. ಮೊದಲ ಹಂತದಲ್ಲಿ 1,345 ಸೀಟು ಮತ್ತು 2ನೇ ಹಂತದಲ್ಲಿ 79 ಸೀಟು ದಾಖಲಾಗಿವೆ. ಅಂದರೆ 180 ಮಂದಿ ಆರ್‌ಟಿಇ ಸೀಟು ಲಭಿಸಿಯೂ ಬಳಸಿಕೊಂಡಿಲ್ಲ. ಸರಕಾರವು 3ನೇ ಹಂತದ ಸೀಟು ಹಂಚಿಕೆ ಪ್ರಕ್ರಿಯೆಯನ್ನೂ ಮುಗಿಸಿದ್ದು, ಜೂ. 8 ವಿದ್ಯಾರ್ಥಿಗಳ ದಾಖಲಾ ತಿಗೆ ಕೊನೆಯ ದಿನಾಂಕವಾಗಿತ್ತು. ಆದರೆ ಜಿಲ್ಲೆಯಲ್ಲಿ ಎಷ್ಟು ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ ಎಂಬ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
6.66 ಕೋ.ರೂ. ಅನುದಾನ
2012ರಲ್ಲಿ ಆರ್‌ಟಿಇ ಸೀಟು ಹಂಚಿಕೆ ಆರಂಭಗೊಂಡ ಬಳಿಕ ಈ ತನಕ ಒಟ್ಟು 8,493 ವಿದ್ಯಾರ್ಥಿಗಳು ಇದರಡಿ ಖಾಸಗಿ ಶಾಲೆಗಳಿಗೆ ದಾಖಲುಗೊಂಡಿದ್ದಾರೆ. ಇದಕ್ಕಾಗಿ ಒಟ್ಟು 6,66,84,669 ರೂ. ಅನುದಾನ ಬಿಡುಗಡೆಗೊಂಡಿದ್ದು, ಈ ಹಣ ಆಯಾಶಾಲೆಗಳ ಖಾತೆಗಳಿಗೆ ಜಮೆಯಾಗುತ್ತದೆ. ಈ ಶೈಕ್ಷಣಿಕ ವರ್ಷದಿಂದ ಅನು ದಾನಿತ ಶಾಲೆಗಳಿಗೂ ಆರ್‌ಟಿಇನಡಿ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ 196 ಖಾಸಗಿ ಶಾಲೆಗಳ ಜತೆಗೆ 88 ಅನುದಾನಿತ ಶಾಲೆಗಳು ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಅರ್ಹತೆ ಪಡೆದಿವೆ.
ಇಲಾಖೆ ಏನೂ ಮಾಡುವಂತಿಲ್ಲ
ಈಗಾಗಲೇ 3ನೇ ಹಂತದ ಸೀಟು ಹಂಚಿಕೆ ನಡೆದಿದ್ದು, ದಾಖಲಾತಿ ನಡೆಯುತ್ತಿದೆ. ವಿದ್ಯಾರ್ಥಿಗಳನ್ನು ಬೇರೆಡೆ ದಾಖಲಿಸಿದ್ದರೂ ಆರ್‌ಟಿಇ ಸೀಟು ಲಭಿಸಿದಾಗ ಬದಲಾಯಿಸಿಕೊಳ್ಳಬಹುದಾಗಿದೆ. ಆದರೆ ಶುಲ್ಕ ಮರುಪಾವತಿಯ ಕುರಿತು ಅವರು ಶಾಲೆಯ ಆಡಳಿತ ಮಂಡಳಿಯ ಜತೆಯೇ ಮಾತನಾಡಬೇಕಾಗುತ್ತದೆ; ಇಲಾಖೆ ಏನೂ ಮಾಡುವಂತಿಲ್ಲ.
ವೈ. ಶಿವರಾಮಯ್ಯ ಡಿಡಿಪಿಐ, ದ.ಕ.
ಕಿರಣ್ ಸರಪಾಡಿ