ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ವರ್ಷದಿಂದ ವರ್ಷಕ್ಕೆ ಆರ್‌ಟಿಇ ಸೀಟುಗಳಿಗೆ ವಿದ್ಯಾರ್ಥಿ ಪೋಷಕರಿಂದ ಬೇಡಿಕೆ ಕುಸಿಯಲಾರಂಭಿಸಿದ್ದು, 2023-24ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಜಿಲ್ಲೆಗೆ ಮಂಜೂರಾತಿ ಸಿಕ್ಕಿರುವ ಒಟ್ಟಾರೆ 159 ಆರ್‌ಟಿಇ ಸೀಟುಗಳಿಗೆ ಇಲ್ಲಿವರೆಗೂ ಅರ್ಜಿ ಹಾಕಿದವರ ಸಂಖ್ಯೆ ಬರೀ 28 ಮಾತ್ರ.
ಹೌದು, ಜಿಲ್ಲೆಯಲ್ಲಿ ಬುಧವಾರದಿಂದ ಶಾಲಾ ತರಗತಿಗಳ ಆರಂಭಕ್ಕೆ ಶಿಕ್ಷಣ ಇಲಾಖೆ ಭರದ ಸಿದ್ಧತೆಯಲ್ಲಿ ತೊಡಗಿದೆ. ಆದರೆ ಒಂದು ಕಾಲಕ್ಕೆ ಆರ್‌ಟಿಇ ಸೀಟುಗೋಸ್ಕರ ದಿನಗಟ್ಟಲೇ ಕ್ಯೂ ನಿಲ್ಲುತ್ತಿದ್ದ ವಿದ್ಯಾರ್ಥಿ ಪೋಷಕರಿಗೆ ಈಗ ಆರ್‌ಟಿಇ ಸೀಟು ಬೇಡವಾಗಿದೆ. ಕಠಿಣ ನಿಯಮ: ರಾಜ್ಯ ಸರ್ಕಾರ ಆರ್‌ಇಟಿ ಸೀಟು ಪಡೆಯಲು ರೂಪಿಸಿರುವ ಹಲವು ಕಠಿಣ ನಿಯಮಗಳ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ಆರ್‌ಟಿಇ ಸೀಟುಗಳು ಕೇಳುವವರೇ ಇಲ್ಲವಾಗಿದೆ. ಹೀಗಾಗಿ ಈ ವರ್ಷ ಕೂಡ ಜಿಲ್ಲೆಗೆ ಮಂಜೂರಾದ ಒಟ್ಟು ಸೀಟುಗಳು ಭರ್ತಿ ಆಗುವುದು ಅನುಮಾನವಾಗಿದೆ.
ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಒಟ್ಟಾರೆ ಸೀಟುಗಳಲ್ಲಿ ಶೇ.25 ರಷ್ಟು ಸೀಟುಗಳು ಬಡ ಮಕ್ಕಳ ವ್ಯಾಸಂ ಗಕ್ಕೆ ಆರ್‌ಟಿಇ ನಡುವೆ ಅವಕಾಶ ನೀಡಬೇಕಿದೆ. ಆದರೆ, ಸರ್ಕಾರ ಜಿಲ್ಲೆಗೆ ಈ ವರ್ಷ ಕೇವಲ 159 ಆರ್‌ಇಟಿ ಸೀಟುಗಳನ್ನು ಮಂಜೂರು ಮಾಡಿದರೂ ವಿದ್ಯಾರ್ಥಿ ಪೋಷಕರಿಂದ ನಿರೀಕ್ಷಿತ ಸ್ಪಂದನೆ ಸಿಗದೇ ಇರುವುದು ವಿದ್ಯಾರ್ಥಿ ಪೋಷಕರ ಪಾಲಿಗೆ ಆರ್‌ಟಿಇ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬತಾಗಿದೆ.
ಇಲ್ಲಿವರೆಗೂ ಕೇವಲ 28 ಮಂದಿ ಮಾತ್ರ ಆರ್‌ಟಿಇ ಸೀಟು ಬಯಸಿ ಅರ್ಜಿ ಸಲ್ಲಿಸಿದ್ದು, ಇನ್ನೂ 131 ಸೀಟುಗೆ ಅರ್ಜಿ ಹಾಕದೇ ಖಾಲಿ ಉಳಿದುಕೊಂಡಿವೆ. ಇನ್ನೂ 2 ಹಂತದಲ್ಲಿ ಆಯ್ಕೆ ಪ್ರಕ್ರಿಯೆ ಲಾಟರಿ ಮೂಲಕ ನಡೆಯಲಿದ್ದು ಎಷ್ಟು ಸೀಟುಗಳು ಭರ್ತಿ ಆಗುತ್ತವೆ? ಎಷ್ಟು ಉಳಿಕೆ ಆಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.
28 ಅರ್ಜಿ ಸಲ್ಲಿಕೆ ಎಲ್ಲೆಲ್ಲಿ?: ಜಿಲ್ಲೆಯಲ್ಲಿ ಆರ್ ಟಿಇ ಅಡಿ ಒಟ್ಟು ಸಲ್ಲಿಕೆ ಆಗಿರುವ 28 ಅರ್ಜಿಗಳನ್ನು ವಿದ್ಯಾರ್ಥಿ ಪೋಷಕರು ಆನ್ ಲೈನ್ ಮೂಲಕವೇ ಶಿಕ್ಷಣ ಇಲಾಖೆಗೆ ಅರ್ಜಿ ಸಲ್ಲಿಸಿದ್ದು, ಆ ಪೈಕಿ ಚಿಂತಾಮಣಿಯಲ್ಲಿ 13, ಚಿಕ್ಕಬಳ್ಳಾಪುರ 1, ಗೌರಿಬಿದನೂರು 5, ಶಿಡ್ಲಘಟ್ಟ ತಾಲೂಕಿನಲ್ಲಿ ಒಟ್ಟು 9 ಸೇರಿ 28 ಅರ್ಜಿಗಳು ಸಲ್ಲಿಕೆ ಆಗಿವೆ. ಉಳಿದಂತೆ ಬಾಗೇಪಲ್ಲಿ ಹಾಗೂ ಗುಡಿಬಂಡೆ ತಾಲೂಕಿನಲ್ಲಿ ಒಂದೇ ಒಂದು ಅರ್ಜಿ ಸಲ್ಲಿಕೆ ಆಗಿಲ್ಲ ಎಂದು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಉದಯವಾಣಿಗೆ ತಿಳಿಸಿದ್ದಾರೆ.
ಪ್ರಥಮ ರೌಂಡ್ಸ್‌ನಲ್ಲಿ 17 ಮಂದಿ ಆಯ್ಕೆ : ಜಿಲ್ಲೆಗೆ ಒಟ್ಟು ಮಂಜೂರಾಗಿರುವ ಆರ್‌ಟಿಇ ಸೀಟುಗಳಿಗೆ ಒಟ್ಟು 28 ಮಂದಿ ಅರ್ಜಿ ಸಲ್ಲಿಸಿದ್ದು ಆ ಪೈಕಿ ಮೊದಲ ರೌಂಡ್‌ನ ಆಯ್ಕೆ ಪ್ರಕ್ರಿಯೆಯಲ್ಲಿ ಕೇವಲ 17 ಮಂದಿ ಮಾತ್ರ ಆಯ್ಕೆಗೊಂಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ 1, ಚಿಂತಾಮಣಿ 9, ಗೌರಿಬಿದನೂರು 3, ಶಿಡ್ಲಘಟ್ಟ ತಾಲೂಕಿನಲ್ಲಿ 4 ಸೇರಿ ಒಟ್ಟು 17 ಮಂದಿ ಇಲ್ಲಿವರೆಗೂ ಆರ್‌ಟಿಇ ಅಡಿ ಆಯ್ಕೆಗೊಂಡಿದ್ದಾರೆ.