Advertisement

ಆರ್‌ಟಿಇ :15 ಸಾವಿರಕ್ಕೂ ಅಧಿಕ ಸೀಟು ಖಾಸಗಿ ಪಾಲು!

12:03 PM May 30, 2017 | Harsha Rao |

ಬೆಂಗಳೂರು: ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ 2017-18ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದೆಯಾದರೂ, ಸಾರ್ವಜನಿಕ ಶಿಕ್ಷಣ ಇಲಾಖೆ ಮಾತ್ರ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ(ಆರ್‌ಟಿಇ) ಸೀಟು ಹಂಚಿಕೆ ಪೂರ್ಣಗೊಳಿಸಿಲ್ಲ. ಹೀಗಾಗಿ ಆರ್‌ಟಿಇ ಅಡಿ ಖಾಸಗಿ ಶಾಲೆಗೆ ಅರ್ಜಿ ಸಲ್ಲಿಸಿದ ಹಲವು ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸಬೇಕೋ ಅಥವಾ ಬೇಡವೋ ಎಂಬ ಗೊಂದಲದಲ್ಲಿದ್ದಾರೆ.

Advertisement

ಮೇ 29ರಂದು ರಾಜ್ಯದ ಎಲ್ಲಾ ಶಾಲೆಗಳು ಪುನಾರಂಭವಾಗಿದೆ. ಹಾಗೆಯೇ ಖಾಸಗಿ ಶಾಲೆಯ ಪ್ರವೇಶಾತಿ ಕೂಡ ಪೂರ್ಣಗೊಂಡಿದೆ. ಆರ್‌ಟಿಇ ಅರ್ಜಿ ಸಲ್ಲಿಸಿ, ಸೀಟು ಸಿಗದಿರುವ ಪಾಲಕರು ಮೂರನೇ ಸುತ್ತಿನ ಆರ್‌ಟಿಇ ಆನ್‌ಲೈನ್‌ ಲಾಟರಿಗೆ ಕಾಯುತ್ತಿದ್ದಾರೆ. ಆದರೆ, ಶಿಕ್ಷಣ ಇಲಾಖೆ ಮಾತ್ರ ಮೂರನೇ ಸುತ್ತಿನ ಆನ್‌ಲೈನ್‌ ಲಾಟರಿ ಸಂಬಂಧ ಯಾವ ನಿರ್ಧಾರವನ್ನೂ ತೆಗೆದುಕೊಂಡಿಲ್ಲ.

2017-18ನೇ ಸಾಲಿಗೆ 1,28,632 ಆರ್‌ಟಿಇ ಸೀಟು ಲಭ್ಯವಿದ್ದು, ಮೊದಲ ಸುತ್ತಿನಲ್ಲಿ 96,908 ಸೀಟು ಹಂಚಿಕೆಯಾಗಿದೆ. 86,854 ಮಕ್ಕಳು ಪ್ರವೇಶಾತಿ ಪಡೆದಿದ್ದಾರೆ. ಉಳಿದ 40,990 ಸೀಟಿಗೆ ಎರಡನೇ ಸುತ್ತಿನ ಆನ್‌ಲೈನ್‌ ಲಾಟರಿ ಪ್ರಕ್ರಿಯೆ ಮುಗಿದು ವಾರ ಕಳೆದಿದೆ. ಸೀಟು ಸಿಕ್ಕಿದ ಮಕ್ಕಳನ್ನು ಮೇ 31ರೊಳಗೆ ಶಾಲೆಗೆ ಸೇರಿಸಲು ಸಂಬಂಧಪಟ್ಟ ಪಾಲಕರಿಗೆ ಇಲಾಖೆ ಸಂದೇಶ ರವಾನಿಸಿದೆ. ಇಷ್ಟಾದರೂ, ಎರಡನೇ ಸುತ್ತಿನಲ್ಲಿ ಸೀಟು ಪಡೆದವರ
ಪೈಕಿ ಮೇ 29ರ ಅಂತ್ಯಕ್ಕೆ 24,350 ಪಾಲಕರು ಮಾತ್ರ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದ್ದಾರೆ. ಇನ್ನೂ 16,500ಕ್ಕೂ ಅಧಿಕ ಸೀಟು ಭರ್ತಿಯಾಗದೇ ಉಳಿದಿದೆ.

ಪಾಲಕರಲ್ಲಿ ಗೊಂದಲ: ಆರ್‌ಟಿಇ ಅಡಿ ಖಾಸಗಿ ಶಾಲೆಗೆ ಅರ್ಜಿ ಸಲ್ಲಿಸಿ, ಆನ್‌ಲೈನ್‌ ಲಾಟರಿ ಮೂಲಕ ಸೀಟು ಪಡೆದ ಬಹುತೇಕ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದ್ದಾರೆ. ಆದರೆ, ಒಂದು ಮತ್ತು ಎರಡನೇ ಸುತ್ತಿನಲ್ಲಿ ಸೀಟು ಸಿಗದ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಅನೇಕ ಪಾಲಕರು ತಮ್ಮ ಮಕ್ಕಳನ್ನು ಇನ್ನೂ ಶಾಲೆಗೆ ಸೇರಿಸಿಲ್ಲ. ಮೂರನೇ ಸುತ್ತಿನ ಆನ್‌ಲೈನ್‌ ಲಾಟರಿಗೆ ಕಾಯುತ್ತಿದ್ದಾರೆ. ಈಗಾಗಲೇ ಶಾಲೆ ಆರಂಭವಾಗಿರುವುದರಿಂದ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಲು ಸಾಧ್ಯವಾಗುತ್ತಿಲ್ಲ. ಅನಿವಾರ್ಯವಾಗಿ ಸರ್ಕಾರಿ ಶಾಲೆಗೆ ಸೇರಿಸಬೇಕಾಗುತ್ತದೆ.

ಉಳ್ಳವರಿಗೆ ಆರ್‌ಟಿಇ ಸೀಟು?: ಆರ್‌ಟಿಇ ಅಡಿ ಅರ್ಜಿ ಸಲ್ಲಿಸಲು ಆಧಾರ್‌ ಕಡ್ಡಾಯ ಮಾಡಿದ್ದಾರೆ. ಕುಟುಂಬದ ಆದಾಯದ ಮಿತಿಯನ್ನು ಸ್ಪಷ್ಟವಾಗಿ ಸೂಚಿಸಲಾಗಿದೆ. ಆದರೂ, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ಸೀಟು ಸಿಗುತ್ತಿಲ್ಲ. ಬೆಂಗಳೂರಿನಲ್ಲಿ ಸ್ವಂತ, ಖಾಸಗಿ ಸಂಸ್ಥೆಯಲ್ಲಿ ಉತ್ತಮ ದರ್ಜೆಯ ಕೆಲಸ ಹೊಂದಿರುವ ಕುಟುಂಬದ ಮಕ್ಕಳಿಗೆ ಆರ್‌ಟಿಇ ಸೀಟು ಸಿಕ್ಕಿದೆ. ಅದೇ ಮನೆಯಲ್ಲಿ ಬಾಡಿಗೆಗೆ ಇರುವ ಸಾಮಾನ್ಯ ಕುಟುಂಬದ ಮಗುವಿಗೆ ಸೀಟು ಸಿಗುತ್ತಿಲ್ಲ. ಸೀಟು ಹಂಚಿಕೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದು ಕೆಲ ಪಾಲಕರು ದೂರುತ್ತಿದ್ದಾರೆ.

Advertisement

ಚೂಡಿದಾರ್‌, ಸೈಕಲ್‌ ವಿಳಂಬ
ಶಾಲಾ ಮಕ್ಕಳಗೆ ವಿತರಿಸಲು ಬೇಕಾದ ಶೇ.80ರಷ್ಟು ಪಠ್ಯಪುಸ್ತಕ ಈಗಾಗಲೇ ಜಿಲ್ಲಾ ಕೇಂದ್ರ ತಲುಪಿದೆ. ಈ ವಾರದೊಳಗೆ ವಿತರಣೆ ಪೂರ್ಣ ಗೊಳ್ಳಲಿದೆ. ಬಾಲಕರ ಸಮವಸ್ತ್ರ ಹಾಗೂ ಪ್ರಾಥಮಿಕ ಶಾಲಾ ಹೆಣ್ಣು ಮಕ್ಕಳ
ಸಮವಸ್ತ್ರವೂ ಸಿದ್ಧವಾಗಿದೆ. ಶೀಘ್ರ ವಿತರಣೆ ನಡೆಯಲಿದೆ. ಆದರೆ, ಪ್ರೌಢಶಾಲಾ ಮಕ್ಕಳ ಚೂಡಿದಾರ್‌ ಹಾಗೂ ಸೈಕಲ್‌
ವಿತರಣೆ ಇನ್ನೂ ಒಂದೆರಡು ತಿಂಗಳು ವಿಳಂಬವಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next