Advertisement

ಆರ್‌ಟಿಇ ಪ್ರವೇಶ ಕ್ರಮಬದ್ಧವಾಗಲಿ: ಉದ್ದೇಶ ಈಡೇರಬೇಕು

03:50 AM Mar 01, 2017 | Team Udayavani |

ಆರ್‌ಟಿಇ ಕಾಯಿದೆಯ ಅನುಷ್ಠಾನದಲ್ಲಿ ಅನೇಕ ಲೋಪದೋಷಗಳಿವೆ. ಏಕರೂಪ ಪ್ರವೇಶಾತಿ ಸಹಿತ ಪೂರಕ ನಿಯಮಗಳನ್ನು ರಚಿಸಿ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ  ಸರಕಾರ ಈ ಕಾನೂನಿನ ಆಶಯ ಈಡೇರುವಂತೆ ನೋಡಿಕೊಳ್ಳಬೇಕು.

Advertisement

ಬಡ ಕುಟುಂಬಗಳ ಮಕ್ಕಳು ಆರ್ಥಿಕ ಅಡಚಣೆಯ ಕಾರಣದಿಂದ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಮಹೋನ್ನತ ಆಶಯದೊಂದಿಗೆ 2010ರಲ್ಲಿ ಜಾರಿಗೆ ತರಲಾಗಿರುವ ಶಿಕ್ಷಣ ಹಕ್ಕು ಕಾಯಿದೆ ಇನ್ನೂ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂಬ ವಿಷಯ ಇತ್ತೀಚೆಗೆ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. ಕಾಯಿದೆ ಜಾರಿಗೆ ಬಂದು 7 ವರ್ಷವಾಗಿದ್ದರೂ ಕಡ್ಡಾಯ ಶಿಕ್ಷಣ ಇನ್ನೂ ಕಡತಗಳಲ್ಲಿ ಮಾತ್ರ ಇದೆ ಎನ್ನುವುದು ಸಮೀಕ್ಷೆಯಿಂದ ತಿಳಿದು ಬಂದಿದೆ.  

ಎಲ್ಲ ಸರಕಾರಿ ಶಾಲೆಗಳು ಆರ್‌ಟಿಇ ವ್ಯಾಪ್ತಿಗೆ ಬರುತ್ತವೆ. ಖಾಸಗಿ ಶಾಲೆಗಳು ಶೇ. 25 ಸೀಟುಗಳನ್ನು ಆರ್‌ಟಿಐ ವಿದ್ಯಾರ್ಥಿಗಳಿಗೆ ಮೀಸಲಿಡಬೇಕು. ಮಕ್ಕಳು ಮನೆಯ ಸನಿಹದ ಶಾಲೆಗಳಲ್ಲೇ ಪ್ರವೇಶ ಪಡೆಯಬೇಕೆಂಬ ನಿಯಮವೂ ಕಾಯಿದೆಯಲ್ಲಿದೆ. ಖಾಸಗಿ ಶಾಲೆಗಳು ಆರ್‌ಟಿಇ ಕೋಟಾದಡಿ ಸೇರುವ ಮಕ್ಕಳ ಹೆತ್ತವರಿಂದ ಡೊನೇಶನ್‌ ಅಥವಾ ಕ್ಯಾಪಿಟೇಶನ್‌ ಶುಲ್ಕ ಪಡೆಯಬಾರದು, ಪ್ರವೇಶದ ಸಂದರ್ಭದಲ್ಲಿ ಮಕ್ಕಳನ್ನು ಅಥವಾ ಹೆತ್ತವರನ್ನು ಸಂದರ್ಶನಕ್ಕೆ ಗುರಿಪಡಿಸಬಾರದು, ಪ್ರಾಥಮಿಕ ಶಿಕ್ಷಣ ಮುಗಿಯುವ ತನಕ ಮಕ್ಕಳನ್ನು ಶಾಲೆಯಿಂದ ಉಚ್ಛಾಟಿಸಬಾರದು, ಅನುತ್ತೀರ್ಣಗೊಳಿಸಬಾರದು, ಬೋರ್ಡ್‌ ಪರೀಕ್ಷೆ ಬರೆಯಲು ಬಲವಂತಪಡಿಸಬಾರದು ಎಂಬ ಅಂಶ ಕಾನೂನಿನಲ್ಲಿದೆ. ಆದರೆ ಹೆಚ್ಚಿನ ಶಾಲೆಗಳಲ್ಲಿ ಈ ನಿಯಮಗಳು ಉಲ್ಲಂಘನೆಯಾಗುತ್ತಿವೆ. ಅಲ್ಲದೆ ಆರ್‌ಟಿಇ ಕೋಟಾದಡಿ ಸೇರಿದ ಮಕ್ಕಳನ್ನು ಶಾಲೆಗಳಲ್ಲಿ ದ್ವಿತೀಯ ದರ್ಜೆಯವರಂತೆ ಪರಿಗಣಿಸಲಾಗುತ್ತಿದೆ; ನಿರ್ದಿಷ್ಟ ತರಗತಿಗೆ ಸೇರಲು ವಯೋಮಿತಿ ನಿಗದಿಪಡಿಸುವುದು, ಮಕ್ಕಳನ್ನು ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ವರ್ಗಾಯಿಸುವುದು ಇತ್ಯಾದಿ ಕಿರುಕುಳಗಳನ್ನು ನೀಡಲಾಗುತ್ತಿದೆ ಎಂಬ ಆಘಾತಕಾರಿ ವಿಷಯಗಳನ್ನು ಸಮೀಕ್ಷೆ ಬಯಲುಗೊಳಿಸಿದೆ.  

ಆರ್‌ಟಿಇ ಪ್ರವೇಶಕ್ಕೆ ಸಂಬಂಧಿಸಿದಂತೆಯೇ ಅನೇಕ ಗೊಂದಲಗಳಿವೆ. ಒಂದನೆಯದಾಗಿ ಜನರಿಗೆ ಇನ್ನೂ ಈ ಕಾನೂನಿನ  ಸಮರ್ಪಕ ಅರಿವು ಇಲ್ಲ. ಅಲ್ಲದೆ, ಜೂನ್‌ ತನಕ ಪ್ರವೇಶಕ್ಕೆ ಅವಕಾಶ ಇದ್ದರೂ ಖಾಸಗಿ ಶಾಲೆಗಳು ಮಾರ್ಚ್‌-ಏಪ್ರಿಲ್‌ನಲ್ಲಿಯೇ ಪ್ರವೇಶಾತಿಯನ್ನು ಮುಗಿಸಿರುತ್ತವೆ. ಅನಂತರ ಬಂದ ಆರ್‌ಟಿಐ ಅರ್ಜಿದಾರ ಮಕ್ಕಳು ಅರ್ಜಿಯಲ್ಲಿ ಲೋಪದೋಷ ಹೊಂದಿದ್ದರೆ ಅತ್ತ ಆರ್‌ಟಿಐ ಸೀಟು ಕೂಡ ಸಿಗದೆ, ಇತ್ತ ಸರಕಾರಿ ಶಾಲೆಗೆ ಪ್ರವೇಶಾವಕಾಶವೂ ಇರದೆ ಅತಂತ್ರರಾಗುತ್ತಾರೆ. ಖಾಸಗಿ ಶಾಲೆಗಳು ಕಾನೂನಿಗೆ ಅಂಜಿ ಶೇ. 25 ಸೀಟುಗಳನ್ನು ಮೀಸಲಿಟ್ಟರೂ ತಮ್ಮ ಪ್ರವೇಶಾತಿ ಅವಧಿಯೊಳಗೆ ಯಾರೂ ಅರ್ಜಿ ಸಲ್ಲಿಸದಿದ್ದರೆ ಅವುಗಳನ್ನು ಸಾಮಾನ್ಯ ಕೋಟಾದಲ್ಲಿ ಭರ್ತಿ ಮಾಡಿಕೊಳ್ಳುತ್ತವೆ ಇಲ್ಲವೆ ಖಾಲಿ ಬಿಡುತ್ತವೆ. ಈ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ಲೋಕಾಯುಕ್ತರು ಖಾಸಗಿ ಶಾಲೆಗಳ ಸೀಟನ್ನು ಮರಳಿ ಶಾಲೆಗಳಿಗೆ ಕೊಡದೆ ಭರ್ತಿ ಮಾಡಬೇಕೆಂದು ಶಿಕ್ಷಣ ಆಯುಕ್ತರಿಗೆ ಸೂಚಿಸಿದ್ದರು. ಕಳೆದ ವರ್ಷ ಎಷ್ಟೋ ಶಾಲೆಗಳಲ್ಲಿ ಆರ್‌ಟಿಇ ಸೀಟುಗಳು ಭರ್ತಿಯಾಗದೆ ಖಾಲಿ ಉಳಿದಿದ್ದವು. ಖಾಸಗಿ ಮತ್ತು ಸರಕಾರಿ ಶಾಲೆಗಳಲ್ಲಿ ಪ್ರವೇಶಾತಿಗೆ ಏಕರೂಪದ ನಿಯಮವನ್ನು ರಚಿಸಿದರೆ ಈ ಗೊಂದಲವನ್ನು ನಿವಾರಿಸಬಹುದು. ಕರ್ನಾಟಕ ಆರ್‌ಟಿಇ ಪ್ರವೇಶಕ್ಕೆ ಆನ್‌ಲೈನ್‌ ವ್ಯವಸ್ಥೆಯನ್ನು ರೂಪಿಸಿಕೊಂಡಿದೆ. ಆದರೆ ಆನ್‌ಲೈನ್‌ನಲ್ಲಿ ಸೀಟು ಮಂಜೂರಾಗಿದ್ದರೂ ಶಾಲೆಗಳು ಕುಂಟು ನೆಪ ಹೇಳಿ ಪ್ರವೇಶ ನಿರಾಕರಿಸುವ ದೂರುಗಳು ಪ್ರತಿ ವರ್ಷ ಇರುತ್ತವೆ. ಈ ಸಮಸ್ಯೆಗಳು ನಿವಾರಣೆಯಾಗಬೇಕಾದರೆ ನಿಯಮ ಸರಳಗೊಳಿಸುವುದು ಅಗತ್ಯ. 

ಶಿಕ್ಷಣ ಹಕ್ಕು ಕಾಯಿದೆಯ ಆಶಯ ಈಡೇರಬೇಕಾದರೆ ಸರಕಾರಗಳು ಅದರ ಅನುಷ್ಠಾನದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು. ಇದಕ್ಕೆ ಏಕರೂಪದ ಪ್ರವೇಶಾತಿ ನಿಯಮಗಳನ್ನು ರೂಪಿಸುವುದು ಅಗತ್ಯ. ಖಾಸಗಿ ಶಾಲೆಗಳು ಕೂಡ ಆರ್‌ಟಿಐ ಸೀಟುಗಳನ್ನು ಯಾರದೋ ಒತ್ತಾಯಕ್ಕೆಂಬಂತೆ ಭರ್ತಿ ಮಾಡಿಕೊಳ್ಳುವುದು, ದ್ವಿತೀಯ ದರ್ಜೆಯವರಂತೆ ನಡೆಸಿಕೊಳ್ಳುವುದನ್ನು ತ್ಯಜಿಸಬೇಕು. ಆರ್‌ಟಿಇ ಕಾನೂನಿನ ಅನುಷ್ಠಾನದಲ್ಲಿ ಅದರ ಉದ್ದೇಶ ಈಡೇರಬೇಕು. 
 

Advertisement
Advertisement

Udayavani is now on Telegram. Click here to join our channel and stay updated with the latest news.

Next