ಬೆಂಗಳೂರು : ಶಿಕ್ಷಣ ಹಕ್ಕು ಕಾಯ್ದೆಯಡಿ(ಆರ್‌ಟಿಇ) ಖಾಸಗಿ ಶಾಲೆಗಳಲ್ಲಿ ಮುಂದಿನ ವರ್ಷಕ್ಕೆ ಲಭ್ಯವಿರುವ 1.40 ಲಕ್ಷ ಸೀಟುಗಳಿಗೆ ಫೆ.20ರಿಂದಲೇ ಅರ್ಜಿ ಸಲ್ಲಿಸಬಹುದು. ಆರ್‌ಟಿಇ ಅರ್ಜಿ ಸಲ್ಲಿಸಲು ಬೇಕಾದ ದಾಖಲೆ ಮತ್ತು ಮಾಹಿತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್
www.schooleducation.com ನಲ್ಲಿ ಪಡೆಯಬಹುದಾಗಿದೆ.
ಆರ್‌ಟಿಇ ಅರ್ಜಿ ಸ್ವೀಕಾರ ಮತ್ತು ಸೀಟು ಹಂಚಿಕೆ ಆನ್‌ಲೈನ್ ಮೂಲಕವೇ ನಡೆಯುವುದರಿಂದ ಸಾಫ್ಟ್ವೇರ್ ಉನ್ನತೀಕರಿಸಲಾಗಿದೆ. ಇದರ ಜತೆಗೆ ಅನುದಾನಿತ ಶಾಲೆಗಳನ್ನು ಆರ್‌ಟಿಇ ವ್ಯಾಪ್ತಿಗೆ ತರಲಾಗಿದೆ. ಹೀಗಾಗಿ ಆರ್‌ಟಿಇ ಸೀಟುಗಳ ಪ್ರಮಾಣವೂ ಹೆಚ್ಚಾಗಿದೆ. ಫೆ.20ರಿಂದ ಮಾರ್ಚ್ 21ರ ವರೆಗೂ ಅರ್ಜಿ ಸಲ್ಲಿಸಲು ಅವಕಾಶ ಇದೆ. ಇದಾದ ನಂತರ ಅರ್ಜಿ ಪರಿಶೀಲನೆ ನಡೆಸಿ, ಮೊದಲ ಸುತ್ತಿನ ಸೀಟು ಹಂಚಿಕೆ ಮಾಡಲಾಗುತ್ತದೆ.
ಆರ್‌ಟಿಇ ಅರ್ಜಿ ಸಲ್ಲಿಸಲು ಮಗುವಿ ಮತ್ತು ಮಗುವಿನ ಪಾಲಕರ ಆಧಾರ್ ಸಂಖ್ಯೆ ಕಡ್ಡಾಯ ಮಾಡಿದ್ದಾರೆ. ಆಧಾರ್ ಸಂಖ್ಯೆಯಿಲ್ಲದೇ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಆರ್‌ಟಿಇ ಅಡಿ ಸೀಟು ಲಭ್ಯವಿರುವ ಎಲ್ಲಾ ಶಾಲೆಗಳ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಈಗಾಗಲೇ ಆಳವಡಿಸಲಾಗಿದೆ. ಪಿನ್ ಕೋಡ್ ಇತ್ಯಾದಿ ಮಾಹಿತಿ ಬಳಸಿ ತಮ್ಮ ವ್ಯಾಪ್ತಿಯಲ್ಲಿ ಇರುವ ಖಾಸಗಿ ಶಾಲೆಗಳ ಮಾಹಿತಿಯನ್ನು ಪಡೆಯಬಹುದಾಗಿದೆ. ಯಾವ ಶಾಲೆಯಲ್ಲಿ ಎಲ್‌ಕೆಜಿಯಿಂದ ಮತ್ತು ಯಾವ ಶಾಲೆಯಲ್ಲಿ 1ನೇ ತರಗತಿಯಿಂದ ಆರ್‌ಟಿಇ ಸೀಟು ಲಭ್ಯವಿದೆ ಎಂಬ ಮಾಹಿತಿಯೂ ವೆಬ್‌ಸೈಟ್‌ನಲ್ಲಿ ಸಿಗಲಿದೆ.
ಸಾಫ್ಟ್ವೇರ್ ಟೆಸ್ಟಿಂಗ್ :
ಆರ್‌ಟಿಇ ಆನ್‌ಲೈನ್ ಅರ್ಜಿ ಸಲ್ಲಿಸಲು ಸಿದ್ಧಪಡಿಸಿರುವ ಸಾಫ್ಟ್ವೇರ್‌ಗೆ ಸರ್ಕಾರದಿಂದ ಈಗಾಗಲೇ ಒಪ್ಪಿಗೆ ಸೂಚಿಸಲಾಗಿದೆ. ಅದರಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೋಮವಾರ ಸಂಜೆಯವರೆಗೂ ಟೆಸ್ಟಿಂಗ್ ಕಾರ್ಯ ನಡೆಸಿದ್ದಾರೆ. ಮಂಗಳವಾರ ಮಧ್ಯಾಹ್ನದ ನಂತರ ಆರ್‌ಟಿಇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ತಾಂತ್ರಿಕ ಸಮಸ್ಯೆ ಎದುರಾದರೆ ಒಂದೆರೆಡು ದಿನ ವಿಳಂಬವಾಗುವ ಸಾಧ್ಯತೆಯೂ ಇದೆ.
ಆರ್‌ಟಿಇ ಅರ್ಜಿಯನ್ನು ಆನ್‌ಲೈನ್ ಮೂಲಕ ಆಹ್ವಾನಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ಟೆಸ್ಟಿಂಗ್ ಕೂಡ ಮುಗಿದಿದೆ. ಫೆ.20ರ ಸಂಜೆಯೊಳಗೆ ಅರ್ಜಿ ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸುತ್ತೇವೆ.
– ಪಿ.ಸಿ.ಜಾಫರ್, ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ