ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ ತಿದ್ದುಪಡಿ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಆರ್‌ಟಿಇ ವಿದ್ಯಾರ್ಥಿ ಮತ್ತು ಪೋಷಕರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಸೋಮವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಆರ್‌ಟಿಇ ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ಶೇ.25 ಆರ್‌ಟಿಇ ಅಡಿ ಮೀಸಲಾಗಿತ್ತು. ಆದರೆ, ಶಿಕ್ಷಣ ಹಕ್ಕು ಕಾಯ್ದೆಗೆ ರಾಜ್ಯ ಸರ್ಕಾರ ಕಳೆದ ವರ್ಷ ತಿದ್ದುಪಡಿ ತಂದಿದ್ದು, ಸರ್ಕಾರಿ ಅಥವಾ ಅನುದಾನಿತ ಶಾಲೆಗಳು ಆಯಾ ವಾರ್ಡ್ ಗಳಲ್ಲಿ ಇದ್ದರೆ ಅಲ್ಲೇ ಸೇರಿಸಬೇಕು. ಆರ್‌ಟಿಇ ಅಡಿ ಸೀಟು ಪಡೆಯುವಂತಿಲ್ಲ ಎಂದು ತಿಳಿಸಲಾಗಿತ್ತು.
ಇದನ್ನು ಪ್ರಶ್ನಿಸಿ ಆರ್‌ಟಿಇ ವಿದ್ಯಾರ್ಥಿ ಮತ್ತು ಪೋಷಕರ ಸಂಘ ಹೈಕೋರ್ಟ್ ಮೊರೆ ಹೋಗಿತ್ತು. ಹೀಗಾಗಿ, ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿತ್ತು. ಎನ್.ಎಚ್.ರಮಣ ನೇತೃತ್ವದ ತ್ರಿಸದಸ್ಯ ಪೀಠ ಸೋಮವಾರ ವಿಚಾರಣೆ ನಡೆಸಿತು. ವಿಚಾರಣೆಯಲ್ಲಿ ಹಿರಿಯ ವಕೀಲೆ ಮೀನಾಕ್ಷಿ ಅರೋರ ಅರ್ಜಿದಾರರ ಪರ ವಾದ ಮಂಡಿಸಿದರು. ಮುಂದಿನ ವಿಚಾರ ಣೆ ಯಲ್ಲಿ ಸರ್ಕಾರದ ತಿದ್ದುಪಡಿ ತೀರ್ಮಾ ನಕ್ಕೆ ಸೂಕ್ತ ಕಾರಣ ನೀಡುವಂತೆ ಸೂಚಿಸಿತು.
ಹಳೆಯ ಕಾಯ್ದೆಯಲ್ಲೇನಿದೆ ?: ಆರ್‌ಟಿಇ 12(1) ಅಡಿ ಖಾಸಗಿ ಮತ್ತು ಅನುದಾನ ರಹಿತ ಶಾಲೆಗಳ ಒಟ್ಟು ಸೀಟುಗಳ ಪೈಕಿ ಶೇ.25ರಷ್ಟು ಶಾಲಾ ಪರಿಮಿತಿಯಲ್ಲಿ ಅರ್ಜಿ ಸಲ್ಲಿಸುವ ಆರ್‌ಟಿಇ ಮಕ್ಕಳಿಗೆ ಮೀಸಲಿಡಬೇಕಿತ್ತು. ಈ ಕಾಯ್ದೆ ಅಡಿ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ಹೊಂದಿದ್ದ ಶಾಲೆಗಳಿಗೆ ವಿನಾಯ್ತಿ ನೀಡಲಾಗಿತ್ತು.
ತಿದ್ದುಪಡಿಯಲ್ಲೇನಿದೆ?: ಪ್ರಸಕ್ತ ಸಾಲಿನಿಂದ ನಗರ ಪ್ರದೇಶಗಳಲ್ಲಿ ತಾವು ವಾಸಿಸುತ್ತಿರುವ ಒಂದು ಕಿ.ಮೀ. ವ್ಯಾಪ್ತಿ ಅಥವಾ ವಾರ್ಡ್ ಮತ್ತು ಗ್ರಾಮೀಣ ಭಾಗದ ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಅನು ದಾನಿತ ಶಾಲೆ ಇದ್ದರೆ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಮಕ್ಕಳು ಸೀಟು ಪಡೆಯು ವಂತಿಲ್ಲ ಎಂಬ ತಿದ್ದುಪಡಿ ತರಲಾಗಿದೆ.