Advertisement

ತೋಟಬೆಂಗ್ರೆ ನಿವಾಸಿಗಳಿಗೆ ಇನ್ನೂಸಿಕ್ಕಿಲ್ಲ ಆರ್‌ಟಿಸಿ!

10:30 AM Dec 14, 2018 | |

ಮಹಾನಗರ: ಸುಮಾರು ಒಂದೂವರೆ ಶತಮಾನದ ಇತಿಹಾಸವಿರುವ ತೋಟಬೆಂಗ್ರೆ ಗ್ರಾಮದಲ್ಲಿರುವ ಅಂದಾಜು 1,200 ಮನೆಗಳ ಸ್ವಂತ ಜಾಗಕ್ಕೆ ಇದುವರೆಗೂ ಆರ್‌ಟಿಸಿಯೇ ಸಿಕ್ಕಿಲ್ಲ! ಮೊದಲು ಬಂದರು ಭೂಮಿ, ಅನಂತರ ಸಿಆರ್‌ಝಡ್‌ ವ್ಯಾಪ್ತಿಗೊಳಪಟ್ಟ ಈ ಗ್ರಾಮವು, ಸುಮಾರು 10 ವರ್ಷಗಳಿಂದೀಚೆಗೆ ಕಂದಾಯ ಇಲಾಖೆ ವ್ಯಾಪ್ತಿಗೆ ಸೇರ್ಪಡೆಯಾದರೂ ಆರ್‌ಟಿಸಿಗಾಗಿ ಜನರ ಅಲೆದಾಟ ನಿಂತಿಲ್ಲ. ಈ ನಡುವೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯಗೊಳಿಸಿರುವುದರಿಂದ ಖಾತಾ ನಂಬರ್‌ ಪಡೆದುಕೊಳ್ಳಲು ಈ ವ್ಯಾಪ್ತಿಯ ಸಾರ್ವಜನಿಕರಿಗೆ ಶಾಸಕ ಡಿ. ವೇದವ್ಯಾಸ ಕಾಮತ್‌ ಹೇಳಿದ್ದು, ಆಸ್ತಿಗೆ ಸ್ವಂತ ಹಕ್ಕು ನೀಡುವ ಭರವಸೆ ನೀಡಿರುವುದರಿಂದ ಗ್ರಾಮಸ್ಥರು ಕೊಂಚ ನಿರಾಳವಾಗಿದ್ದಾರೆ.

Advertisement

ತೋಟ ಬೆಂಗ್ರೆ ಗ್ರಾಮವು ಸುಮಾರು 150 ವರ್ಷಗಳ ಇತಿಹಾಸವನ್ನು ಹೊಂದಿದೆ. 1,200 ಕುಟುಂಬಗಳಿರುವ ಇಲ್ಲಿ 7 ಸಾವಿರಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. ಈ ಪೈಕಿ ಶೇ. 95ಕ್ಕೂ ಅಧಿಕ ಮಂದಿ ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿಕೊಂಡವರು. 40 ವರ್ಷಗಳ ಹಿಂದೆ ಪೋರ್ಟ್‌ ಟ್ರಸ್ಟ್‌ ಅಧೀನದಲ್ಲಿದ್ದ ಜಾಗವು, ಬಳಿಕ ವಿಶೇಷ ಆರ್ಥಿಕ ವಲಯಕ್ಕೆ ಸೇರ್ಪಡೆಯಾಯಿತು. ಇದರಿಂದಾಗಿ ಇಲ್ಲಿ ವಾಸವಾಗಿರುವ ಗ್ರಾಮಸ್ಥರಿಗೆ ಸ್ವಂತ ಜಾಗಕ್ಕೆ ಆರ್‌ಟಿಸಿ ಮಾಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಳಿಕ ಕಂದಾಯ ಇಲಾಖೆಗೆ ಸೇರಿಸಲಾಯಿತು. 65 ವರ್ಷಗಳಿಂದ ಬಂದರು ಮಂಡಳಿಗೆ ತೆರಿಗೆ ಕಟ್ಟಿದ್ದ ಜನತೆ, ಹತ್ತು ವರ್ಷಗಳಿಂದ ಚಾಚೂ ತಪ್ಪದೆ ಕಂದಾಯ ಇಲಾಖೆಗೆ ತೆರಿಗೆ ಕಟ್ಟುತ್ತಿದ್ದಾರೆ. ಸರಕಾರಕ್ಕೆ ಸಲ್ಲ ಬೇಕಾದ ಕರವನ್ನು ಪ್ರಾಮಾಣಿಕವಾಗಿ ಸಲ್ಲಿಕೆ ಮಾಡುತ್ತಿದ್ದರೂ ಇದುವರೆಗೆ ಆಡಳಿ ತಕ್ಕೆ ಬಂದ ಯಾವೊಂದು ಸರಕಾರವೂ ಇಲ್ಲಿನ ಜನರಿಗೆ ಆರ್‌ಟಿಸಿ ನೀಡಲು ಮುಂದಾಗಿಲ್ಲ.

ಹಕ್ಕುಪತ್ರಗಳಲ್ಲಿ ಸರ್ವೆ ನಂಬರ್‌ ಇಲ್ಲ
ತೋಟಬೆಂಗ್ರೆಯ ಸುಮಾರು 800 ಮನೆಗಳಿಗೆ 1994-95ರಲ್ಲಿ ರಾಜ್ಯ ಸರಕಾರವು ಆಶ್ರಯ ಯೋಜನೆಯಡಿಯಲ್ಲಿ ನಿವೇಶನ ಹಕ್ಕುಪತ್ರ ನೀಡಿದೆ. ಆದರೆ ಹೀಗೆ ನೀಡಲಾದ ಹಕ್ಕುಪತ್ರಗಳಲ್ಲಿ ಸರ್ವೆ ನಂಬರ್‌ನ್ನು ನಮೂದಿಸಿಲ್ಲ. ಅಲ್ಲದೆ ಆರ್‌ಟಿಸಿಗಾಗಿ ಅಲೆದಾಡಿದರೂ ಆರ್‌ ಟಿಸಿ ನೀಡಿಲ್ಲ. ಏಳು ತಿಂಗಳ ಹಿಂದಷ್ಟೇ ಆಗಿನ ಶಾಸಕ ಜೆ. ಆರ್‌. ಲೋಬೋ ಅವರು 150ಕ್ಕೂ ಹೆಚ್ಚು ಮನೆಗಳಿ  ಹಕ್ಕುಪತ್ರ ಒದಗಿಸಿ, ಸರ್ವೇ ನಂಬರ್‌ನ್ನೂ ನೀಡಿದ್ದರು. ಆದರೆ ಈ ಮನೆಗಳಿಗೂ ಆರ್‌ಟಿಸಿ ನೀಡಿಲ್ಲ. ಇದರಿಂದಾಗಿ ಇಲ್ಲಿನ ಜನರು ಕೇಂದ್ರ ಹಾಗೂ ರಾಜ್ಯ ಸರಕಾರದ ಹಲವು ಯೋಜನೆಗಳ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಬ್ಯಾಂಕ್‌ ಸಾಲ ಪಡೆಯಲು, ಮನೆ ನಿರ್ಮಾಣ ಸಹಿತ ವಿವಿಧ ಕೆಲಸಗಳಿಗೆ ಆರ್‌ ಟಿಸಿ ಕಡ್ಡಾಯ. ಆದರೆ ಹಲವು ಬೇಡಿಕೆಗಳ ಹೊರತಾಗಿಯೂ ಸಂಬಂಧ ಪಟ್ಟವರು ಆರ್‌ಟಿಸಿ ನೀಡಲು ಉತ್ಸುಕತೆ ತೋರದ ಹಿನ್ನೆಲೆಯಲ್ಲಿ ಜನರ ಮೂಲ ಆವಶ್ಯಕತೆಗಳನ್ನು ಪಡೆದುಕೊಳ್ಳಲು ಇಲ್ಲಿನ ಮಂದಿಗೆ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ತೋಟ ಬೆಂಗ್ರೆ ನಿವಾಸಿ ಲೋಕೇಶ್‌ ಸುವರ್ಣ.

ಇಲ್ಲೂ ಅದೇ ಕತೆ
ತಣ್ಣೀರುಬಾವಿಯಿಂದ ತೋಟಬೆಂಗ್ರೆ ತನಕ ಒಳಗೊಳ್ಳುವ ಕಸಬ ಬೆಂಗ್ರೆ, ತಣ್ಣೀರುಬಾವಿ, ಬೊಕ್ಕಪಟ್ಣ ಬೆಂಗ್ರೆ, ಕುದ್ರೋಳಿ ಬೆಂಗ್ರೆಯಲ್ಲೂ ಹೆಚ್ಚು ಕಡಿಮೆ ಇದೇ ಸ್ಥಿತಿ ಇದೆ. ಸುಮಾರು 15 ಸಾವಿರಕ್ಕೂ ಮಿಕ್ಕಿ ಮನೆಗಳಿರುವ ಈ ಪ್ರದೇಶಗಳಲ್ಲಿ ಬೆರಳೆಣಿಕೆಯ ಮನೆಗಳಿಗೆ ಹೊರತುಪಡಿಸಿ ಉಳಿದ ಯಾವುದೇ ಮನೆಗಳಿಗೆ ಆರ್‌ಟಿಸಿ ನೀಡಿಲ್ಲ ಎನ್ನುತ್ತಾರೆ ಲೋಕೇಶ್‌ ಸುವರ್ಣ.

Advertisement

ಪ್ರಾಪರ್ಟಿ ಕಾರ್ಡ್‌ ಬೇಕು
ತೋಟಬೆಂಗ್ರೆ ಪರಿಸರದಲ್ಲಿ 1,800ಕ್ಕೂ ಹೆಚ್ಚು ಮನೆಗಳಿಗೆ ಹಕ್ಕುಪತ್ರನೀಡಲಾಗಿದೆ. ಅದಕ್ಕೆ ಸರ್ವೆ ನಂಬರ್‌ ಆಗಿರಲಿಲ್ಲ. 2014ರ ಅನಂತರ ಕೃಷಿಯೇತರ ಭೂಮಿಗಳಿಗೆ ಪಹಣಿ ಪತ್ರಿಕೆ ಮಾಡಲಾಗುತ್ತಿಲ್ಲ. ಅಲ್ಲದೆ, ಈಗ ಪಹಣಿ ಪತ್ರಿಕೆ ಅಗತ್ಯವಿಲ್ಲ; ಬದಲಾಗಿ ಪಾಲಿಕೆಯಿಂದ ಖಾತಾ ಸಂಖ್ಯೆ ಪಡೆದುಕೊಳ್ಳುವುದು ಅಗತ್ಯ. ಅನಂತರ ನಿಧಾನವಾಗಿ ಪ್ರಾಪರ್ಟಿ ಕಾರ್ಡ್‌ ಮಾಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್‌ ಗುರುಪ್ರಸಾದ್‌ ಮಾಹಿತಿ ನೀಡಿದ್ದಾರೆ.

ಪ್ರಧಾನಿಗೂ ಪತ್ರ 
ತೋಟಬೆಂಗ್ರೆ ಗ್ರಾಮದಲ್ಲಿ ಆರ್‌ಟಿಸಿ ಅಲಭ್ಯತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಯವರಿಗೆ ಜನವರಿ 13ರಂದು ಲೋಕೇಶ್‌ ಸುವರ್ಣ ಅವರು ಪತ್ರ ಬರೆದಿದ್ದಾರೆ. ಜ. 17ರಂದು ಪತ್ರವನ್ನು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ವರ್ಗಾಯಿಸಲಾಗಿದೆ ಎಂಬುದಾಗಿ ಪ್ರಧಾನಿ ಕಾರ್ಯಾಲಯದಿಂದ ಉತ್ತರ ಬಂದಿದೆ. ಈ ನಡುವೆ ಶಾಸಕ ಡಿ. ವೇದವ್ಯಾಸ್‌ ಕಾಮತ್‌ ಅವರಿಗೂ ಮನವಿ ನೀಡಲಾಗಿದ್ದು, ಶಾಸಕರು ಇಲ್ಲಿನ ಜನರ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ಲೋಕೇಶ್‌ ಸುವರ್ಣ ತಿಳಿಸಿದ್ದಾರೆ.

ಈ ಬಗ್ಗೆ ಪರಿಶೀಲಿಸಲಾಗುವುದು
ತೋಟಬೆಂಗ್ರೆ ಪರಿಸರದ ಕೆಲವು ಮನೆಗಳಿಗೆ ಈ ಹಿಂದೆಯೇ ಹಕ್ಕುಪತ್ರ ನೀಡಲಾಗಿದೆ. ಆರ್‌ಟಿಸಿ ಅಲಭ್ಯವಾಗಿರುವುದು ಬಹುಶಃ ಸಿಆರ್‌ಝಡ್‌ ನಿಯಮಾವಳಿಗಳ ಕಾರಣದಿಂದಾಗಿ ಇರಬಹುದು. ಆದರೂ ಈ ಬಗ್ಗೆ ಪರಿಶೀಲಿಸಲಾಗುವುದು.
– ಶಶಿಕಾಂತ್‌ ಸೆಂಥಿಲ್‌,
ಜಿಲ್ಲಾಧಿಕಾರಿ 

ಖಾತಾ ಪಡೆದುಕೊಳ್ಳಿ
ಈಗ ಆರ್‌ಟಿಸಿ ಬದಲಾಗಿ ಪ್ರಾಪರ್ಟಿ ಕಾರ್ಡ್‌ ಕಡ್ಡಾಯವಾಗಿದೆ. ಹಕ್ಕುಪತ್ರ ಸಿಕ್ಕಿ ಆರ್‌ಟಿಸಿ ಸಿಗದೇ ಇರುವ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು ಆ ಹಕ್ಕುಪತ್ರದ ಝೆರಾಕ್ಸ್‌ ಪ್ರತಿಯನ್ನು ತಾಲೂಕು ಕಚೇರಿಗೆ ಕೊಂಡೊಯ್ಯಬೇಕು. ಅಲ್ಲಿನ ಕೌಂಟರ್‌ನಿಂದ ಅರ್ಜಿ ಪಡೆದುಕೊಂಡು ‘ನಮಗೆ ಹಕ್ಕುಪತ್ರ ಸಿಕ್ಕಿರುತ್ತದೆ; ಈವರೆಗೆ ಆರ್‌ಟಿಸಿ ಆಗಿರುವುದಿಲ್ಲ’ ಎಂದು ನಮೂದಿಸಿ ಹಕ್ಕುಪತ್ರದ ಝೆರಾಕ್ಸ್‌ ಪ್ರತಿಯೊಂದಿಗೆ ಅಂಟಿಸಿ ನೀಡಬೇಕು. ಮುಂದಿನ ಹತ್ತು ದಿನಗಳೊಳಗಾಗಿ ತಹಶೀಲ್ದಾರರಿಂದ ಹಿಂಬರೆಹ ಬರಲಿದ್ದು, ಅದನ್ನು ಪಾಲಿಕೆಗೆ ಕೊಂಡೊಯ್ದು ದಾಖಲೆ ಸಹಿತ ಖಾತಾಕ್ಕಾಗಿ ಅರ್ಜಿ ಸಲ್ಲಿಸಬೇಕು. ಪಾಲಿಕೆಯಿಂದ ಕೆಲವೇ ದಿನಗಳಲ್ಲಿ ಖಾತಾ ಸಿಗಲಿದೆ ಮತ್ತು ಇದೇ ಆವಶ್ಯಕವಾಗಿರುತ್ತದೆ.
-ಡಿ. ವೇದವ್ಯಾಸ ಕಾಮತ್‌, ಶಾಸಕರು

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next