Advertisement

2 ದಿನದಲ್ಲಿ ಬಂದಿದ್ದು 1700 ಆರ್‌ಟಿಇ ಅರ್ಜಿ!

12:16 PM Mar 03, 2017 | |

ಬೆಂಗಳೂರು: ಆರ್‌ಟಿಇ ಸೀಟುಗಳಿಗೆ ಮೊದಲ ದಿನವೇ 15 ಸಾವಿರ ಅರ್ಜಿ ಬಂದಿರುವುದಾಗಿ ಬುಧವಾರ ಹೇಳಿಕೆ ನೀಡಿದ್ದ ಶಿಕ್ಷಣ ಇಲಾಖೆ ಅಧಿಕಾರಿಗಳು, ಈಗ ಕಳೆದ ಎರಡೂ ದಿನಗಳಲ್ಲಿ 2965 ಅರ್ಜಿಗಳು ಸ್ವೀಕಾರವಾಗಿರುವುದಾಗಿ ಹೇಳಿದ್ದಾರೆ.

Advertisement

ಇಲಾಖೆಯ ಆಯುಕ್ತರಾದ ಸೌಜನ್ಯ ಅವರು ಬುಧವಾರ ಮೊದಲ ದಿನವೇ 15 ಸಾವಿರ ಅರ್ಜಿ ಬಂದಿರುವುದಾಗಿ ಹೇಳಿದ್ದರು. ಆದರೆ, ಗುರುವಾರ ಇಲಾಖೆಯ ಸಾರ್ವಜನಿಕ ಸಂಪರ್ಕ ವಿಭಾಗದಿಂದ ಮಾಧ್ಯಮಗಳಿಗೆ ಬಂದಿರುವ ಮಾಹಿತಿಯಲ್ಲಿ 2,965 ಅರ್ಜಿಗಳು ಸಲ್ಲಿಕೆಯಾಗಿರುವುದಾಗಿ ಹೇಳಲಾಗಿದೆ. 

ಇಲಾಖೆ ಮಾಹಿತಿ ಪ್ರಕಾರ ಒಟ್ಟು ಅರ್ಜಿಗಳಲ್ಲಿ 2,127 ಅರ್ಜಿಗಳು ಬುಧವಾರ ಸಲ್ಲಿಕೆಯಾಗಿದ್ದು, ಉಳಿದ 838 ಅರ್ಜಿಗಳು ಗುರವಾರ ರಾತ್ರಿ 8ಗಂಟೆವರೆಗೆ ಸಲ್ಲಿಕೆಯಾಗಿವೆ. ಆದರೆ, ಬುಧವಾರ ಸಲ್ಲಿಕೆಯಾಗಿದ್ದ 2,127 ಅರ್ಜಿಗಳಲ್ಲಿ ಪ್ರಾಯೋಗಿಕ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಬಂದಿದ್ದ 1400 ಅರ್ಜಿಗಳೂ ಸೇರಿವೆ ಎನ್ನುತ್ತವೆ ಇಲಾಖೆ ಮೂಲಗಳು. ಅಂದರೆ, ನೈಜ ಅರ್ಜಿ ಸ್ವೀಕಾರ ಆರಂಭವಾದ ಕಳೆದ ಎರಡು ದಿನಗಳಲ್ಲಿ ಬಂದಿರುವ ಅರ್ಜಿ ಸಂಖ್ಯೆ ಸುಮಾರು 1700 ಅಷ್ಟೇ ಆಗುತ್ತದೆ.

ಬುಧವಾರವೇ 15 ಸಾವಿರ ಅರ್ಜಿ ಬಂದಿರುವುದಾಗಿ ಹೇಳಿರುವ ಬಗ್ಗೆ ಆಯುಕ್ತರನ್ನು ಪ್ರಶ್ನಿಸಿದಾಗ, ತಾಂತ್ರಿಕ ವಿಭಾಗದಿಂದ ಬಂದ ಮಾಹಿತಿಯನ್ನು ನೀಡಿದೆ. ಆದರೆ, ಅದು ಸರಿ ಇಲ್ಲ ಎಂದು ಗೊತ್ತಾಗಿದೆ. ಪ್ರಸ್ತುತ ಪಿಆರ್‌ಒ ಕಚೇರಿಯಿಂದ ನೀಡಿರುವ ಮಾಹಿತಿಯೇ ಸರಿಯಾಗಿದೆ ಎಂದು “ಉದಯವಾಣಿ’ಗೆ ಪ್ರತಿಕ್ರಿಯಿಸಿದರು.  

ದೋಷ ಸುಧಾರಣೆ-ಸಮಸ್ಯೆ ಮುಂದುವರಿಕೆ
ವೆಬ್‌ಸೈಟ್‌ನಲ್ಲಿ ಉಂಟಾಗಿದ್ದ ತಾಂತ್ರಿಕ ದೋಷಗಳು ನಿಧಾನವಾಗಿ ಸರಿಹೋಗುತ್ತಿವೆಯಾದರೂ, ಇದರ ನಡುವೆಯೇ ಆಧಾರ್‌ ಕಾರ್ಡ್‌ನಲ್ಲಿರುವಂತೆ ವೆಬ್‌ಸೈಟ್‌ನಲ್ಲಿ ವಿವಿಧ ಪ್ರದೇಶಗಳ ವಿಳಾಸ ನಮೂದಾಗದೆ ಅರ್ಜಿ ಸಲ್ಲಿಸಲಾಗುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ.

Advertisement

ಉದಾಹರಣೆಗೆ ಆಧಾರ್‌ ಕಾರ್ಡ್‌ನಲ್ಲಿ ರಾಮಮೂರ್ತಿ ನಗರ ವಾರ್ಡ್‌ ಎಂದು ನಮೂದಾಗಿರುವ ವಿಳಾಸ ಶಿಕ್ಷಣ ಇಲಾಖೆ ವೆಬ್‌ಸೈಟ್‌ನಲ್ಲಿ ಆರ್‌.ಎಂ.ನಗರ ವಾರ್ಡ್‌ ಎಂದು ತೋರಿಸಲಾಗಿದೆ. ಇದರಿಂದ ಈ ವಾರ್ಡ್‌ ನಿವಾಸಿಗಳು ಅರ್ಜಿ ಸಲ್ಲಿಸಿದಾಗ “ವಿಳಾಸ ಸರಿಹೊಂದುತ್ತಿಲ್ಲ’ ಎಂಬ ಉತ್ತರ ವೆಬ್‌ಸೈಟ್‌ನಲ್ಲಿ ಬರುತ್ತಿದೆಯೆಂದು ಆ ಭಾಗದ ಕೆಲ ಪೋಷಕರು ಹೇಳಿದ್ದಾರೆ.  

ಕೆಲ ವಾರ್ಡ್‌ಗಳಲ್ಲಿನ ಸಣ್ಣ ಪುಟ್ಟ ಪ್ರದೇಶಗಳು ಇಲಾಖೆ ವೆಬ್‌ಸೈಟ್‌ನಲ್ಲಿ ಸೇರಿಸದೆ ಬಿಟ್ಟು ಹೋಗಿವೆ. ಹಾಗಾಗಿ ಆಧಾರ್‌ಕಾರ್ಡ್‌ನಲ್ಲಿರುವ ವಾಸ ಸ್ಥಳದ ಹೆಸರು ವೆಬ್‌ಸೈಟಲ್ಲಿ ಕಾಣಿಸದೆ ಅರ್ಜಿ ಸಲ್ಲಿಸಲಾಗುತ್ತಿಲ್ಲ. ಈ ಬಗ್ಗೆ ವೆಬ್‌ಸೈಟ್‌ ಮೂಲಕ ದೂರು ದಾಖಲಿಸಲಾಗಿದೆಯಾದರೂ ದೂರಿಗೆ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವೆಂದು ಪೋಷಕರು ದೂರುತ್ತಿದ್ದಾರೆ.

ಆರ್‌ಟಿಇ ಸೀಟುಗಳ ಶುಲ್ಕ ಹೆಚ್ಚಳ ನಿರ್ಧಾರಕ್ಕೆ ಆಕ್ಷೇಪ
ಬೆಂಗಳೂರು: ಖಾಸಗಿ ಶಾಲೆಗಳಲ್ಲಿನ ಆರ್‌ಟಿಇ ಸೀಟುಗಳಿಗೆ ಸರ್ಕಾರದಿಂದ ನೀಡುವ ಶುಲ್ಕವನ್ನು ಏರಿಕೆ ಮಾಡಲು ಸಚಿವ ಸಂಪುಟ ಕೈಗೊಂಡಿರುವ ನಿರ್ಧಾರಕ್ಕೆ ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿರುವ ಅವರು, ಆರ್‌ಟಿಇ ಸೀಟುಗಳ ಶುಲ್ಕ ಹೆಚ್ಚಳದ ನಿರ್ಧಾರ ತೀವ್ರ ನೋವು ಮತ್ತು ಆಘಾತ ಉಂಟು ಮಾಡಿದೆ.

ಸರ್ಕಾರದ ನಿರ್ಧಾರದಿಂದ ಶಿಕ್ಷಣ ವ್ಯಾಪಾರೀಕರಣ ಮತ್ತು ಖಾಸಗೀಕರಣವನ್ನು ಮತ್ತಷ್ಟು ಪ್ರಚೋದನೆ ಸಿಕ್ಕಂತಾಗುತ್ತದೆ. ಜತೆಗೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಸರ್ಕಾರಿ ಶಾಲೆಗಳನ್ನು ಬಹುಬೇಗ ಮುಚ್ಚಲು ದೊಡ್ಡ ರಹದಾರಿ ನಿರ್ಮಿಸಿದಂತಾಗುತ್ತದೆ ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next